Site icon Vistara News

PM Modi: ಅಮೆರಿಕ ಪತ್ರಿಕೆಗೆ ಮೋದಿ ಸಂದರ್ಶನ; ಮಂದಿರ, ಚೀನಾ ಸೇರಿ ಹಲವು ವಿಷಯಗಳ ಬಗ್ಗೆ ಹೇಳಿದ್ದಿಷ್ಟು!

PM Narendra Modi

China Ties, Ram Mandir, Media's Role, Article 370: PM Narendra Modi In Newsweek Interview

ನವದೆಹಲಿ: ಲೋಕಸಭೆ ಚುನಾವಣೆಗೆ (Lok Sabha Election 2024) ಕೆಲವೇ ದಿನಗಳು ಬಾಕಿ ಇರುವ ಕಾರಣ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ದೇಶಾದ್ಯಂತ ಅವರು ರ‍್ಯಾಲಿ, ಸಮಾವೇಶ ಕೈಗೊಳ್ಳುತ್ತಿದ್ದಾರೆ. ಇದರ ಮಧ್ಯೆಯೇ, ನರೇಂದ್ರ ಮೋದಿ ಅವರು ಅಮೆರಿಕದ ನ್ಯೂಸ್‌ವೀಕ್‌ ಮ್ಯಾಗಜಿನ್‌ಗೆ (Newsweek Magazine) ಸಂದರ್ಶನ ನೀಡಿದ್ದಾರೆ. ಸುಮಾರು 90 ನಿಮಿಷಗಳ ಮಾತುಕತೆ ವೇಳೆ ಮೋದಿ ಅವರು ರಾಮಮಂದಿರ (Ram Mandir), ಚೀನಾ ಜತೆಗಿನ ಬಿಕ್ಕಟ್ಟು ಸೇರಿ ಹಲವು ವಿಷಯಗಳ ಕುರಿತು ಪ್ರಸ್ತಾಪಿಸಿದ್ದಾರೆ.

ನರೇಂದ್ರ ಮೋದಿ ಅವರ ನಿವಾಸದಲ್ಲಿ ಸಂದರ್ಶನ ನಡೆದಿದೆ. ನ್ಯೂಸ್‌ವೀಕ್‌ ಅಧ್ಯಕ್ಷ ದೇವ್‌ ಪ್ರಗಾಡ್‌, ಗ್ಲೋಬಲ್‌ ಎಡಿಟರ್‌ ಇನ್‌ ಚೀಫ್‌ ನ್ಯಾನ್ಸಿ ಕೂಪರ್‌ ಹಾಗೂ ಏಷ್ಯಾದ ಎಡಿಟೋರಿಯಲ್‌ ಡೈರೆಕ್ಟರ್‌ ಡ್ಯಾನಿಶ್‌ ಮಂಜೂರ್‌ ಭಟ್‌ ಅವರ ಪ್ರಶ್ನೆಗಳಿಗೆ ಪ್ರಧಾನಿ ಉತ್ತರಿಸಿದ್ದಾರೆ. ಹಾಗಾದರೆ, ಮೋದಿ ಅವರು ಅಮೆರಿಕ ಪತ್ರಿಕೆಗೆ ನೀಡಿದ ಸಂದರ್ಶನ ವೇಳೆ ಪ್ರಸ್ತಾಪಿಸಿದ ವಿಷಯಗಳು ಯಾವವು? ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಲೋಕಸಭೆ ಚುನಾವಣೆ

“ಕಳೆದ 10 ವರ್ಷಗಳಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ನಾವು ಈಡೇರಿಸಿದ್ದೇವೆ. ಇದಕ್ಕೂ ಮೊದಲು, ಜನರ ಭರವಸೆಗಳು, ಕನಸುಗಳು ಈಡೇರುತ್ತಿರಲಿಲ್ಲ. ಆದರೀಗ, ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌, ಸಬ್‌ ಕಾ ಪ್ರಯಾಸ್‌ ತತ್ವದಲ್ಲಿ ಜನರ ಆಶೋತ್ತರಗಳನ್ನು ಕೇಂದ್ರ ಸರ್ಕಾರ ಈಡೇರಿಸಿದೆ. ಜಗತ್ತಿನ 11ನೇ ಬಲಿಷ್ಠ ಆರ್ಥಿಕತೆಯಿಂದ 5ನೇ ಆರ್ಥಿಕತೆಯಾಗಿ ಹೊರಹೊಮ್ಮಿದ್ದೇವೆ. ಹಾಗಾಗಿ ಜನ ನಮ್ಮ ಸರ್ಕಾರದ ಮೇಲೆ ಹೆಚ್ಚು ವಿಶ್ವಾಸ ಇರಿಸಿದ್ದಾರೆ. ಹಾಗಾಗಿ, ಲೋಕಸಭೆ ಚುನಾವಣೆಯಲ್ಲಿ ನಮಗೆ ಬೆಂಬಲ ಸಿಕ್ಕೇ ಸಿಗುತ್ತದೆ” ಎಂದು ತಿಳಿಸಿದರು.

ರಾಮಮಂದಿರ

“ಪ್ರತಿಯೊಬ್ಬ ಭಾರತೀಯನಲ್ಲಿ ಶ್ರೀರಾಮ ಎಂಬ ಹೆಸರು ಅಚ್ಚೊತ್ತಿದೆ. ಶ್ರೀರಾಮ ವಿಚಾರಗಳು, ಜೀವನ, ಮೌಲ್ಯಗಳು ನಮ್ಮ ನಾಗರಿಕತೆಯ ಮೇಲೆ ಪ್ರಭಾವ ಬೀರಿವೆ. ಹಾಗಾಗಿ, ಅಯೋಧ್ಯೆಗೆ ಶ್ರೀರಾಮನು ಮರಳಿರುವುದು ಭಾರತದ ಏಕತೆ ಹಾಗೂ ಐತಿಹಾಸಿಕ ಸಂಗತಿಯ ದ್ಯೋತಕವಾಗಿದೆ. ಶತಮಾನಗಳ ತ್ಯಾಗ, ಪ್ರಾರ್ಥನೆ, ಕನವರಿಕೆಗಳು ಈಡೇರಿವೆ. ರಾಮಲಲ್ಲಾನ ಪ್ರತಿಷ್ಠಾಪನೆಗೆ ದೇಶದ 140 ಕೋಟಿ ಜನ ಕಾಯುತ್ತಿದ್ದರು. ಅವರ ಪ್ರತಿನಿಧಿಯಾಗಿ ನಾನು ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದೆ. 11 ದಿನಗಳ ವಿಶೇಷ ಧಾರ್ಮಿಕ ವಿಧಿವಿಧಾನಗಳನ್ನೂ ನೆರವೇರಿಸಿದೆ” ಎಂದರು.

ಪ್ರಜಾಪ್ರಭುತ್ವ ಮತ್ತು ಮಾಧ್ಯಮ

“ಭಾರತದ ಪ್ರಜಾಪ್ರಭುತ್ವಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸಂವಿಧಾನ ಇದೆ ಎಂದ ಮಾತ್ರಕ್ಕೆ ನಮ್ಮದು ಪ್ರಜಾಪ್ರಭುತ್ವ ದೇಶ ಅಲ್ಲ, ಪ್ರಜಾಪ್ರಭುತ್ವ ನಮ್ಮ ವಂಶಾವಳಿಯಲ್ಲೇ ಇದೆ. ಭಾರತವು ಪ್ರಜಾಪ್ರಭುತ್ವದ ಜನನಿ. 1,100, 1,200 ವರ್ಷಗಳಿಂದಲೂ ನಾವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಿಕೊಂಡು ಬಂದಿದ್ದೇವೆ. ವಿಶ್ವದಲ್ಲೇ ನಮ್ಮದು ಬೃಹತ್‌ ಪ್ರಜಾಪ್ರಭುತ್ವ ದೇಶವಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ 60 ಕೋಟಿ ಜನ ಮತದಾನ ಮಾಡಿದ್ದಾರೆ. ದೇಶದಲ್ಲಿ 1.5 ಲಕ್ಷ ನೋಂದಾಯಿತ ಮಾಧ್ಯಮ ಪಬ್ಲಿಕೇಶನ್‌ಗಳಿವೆ. ನೂರಾರು ಚಾನೆಲ್‌ಗಳಿವೆ. ಜನರ ಪ್ರತಿಕ್ರಿಯೆಗೆ ಭಾರತದ ಮಾಧ್ಯಮಗಳು ಸೇತುವೆಯಾಗಿ ಕೆಲಸ ಮಾಡುತ್ತಿವೆ. ಭಾರತ ಹಾಗೂ ವಿದೇಶದ ಕೆಲ ಮಾಧ್ಯಮಗಳು ಮಾತ್ರ ಜನರೊಂದಿಗೆ ಸಂಪರ್ಕ ಕಳೆದುಕೊಂಡಿವೆ. ಜನರ ಜತೆ ಇರದ ಕೆಲ ಮಾಧ್ಯಮಗಳು ಹುರುಳಿಲ್ಲದ ಆರೋಪ ಮಾಡುತ್ತಿವೆ” ಎಂದು ಹೇಳಿದರು.

ಚೀನಾ ಜತೆಗಿನ ಬಿಕ್ಕಟ್ಟು

ಭಾರತಕ್ಕೆ ಚೀನಾ ಜತೆಗಿನ ಸಂಬಂಧವು ಪ್ರಮುಖವಾಗಿದೆ. ಹಾಗಾಗಿ, ಗಡಿಯಲ್ಲಿ ಉಂಟಾಗಿರುವ ಬಿಕ್ಕಟ್ಟು ಬಗೆಹರಿಸಿಕೊಳ್ಳುವ ದಿಸೆಯಲ್ಲಿ ನಾವು ಕ್ಷಿಪ್ರವಾಗಿ ಮಾತುಕತೆ ನಡೆಸಬೇಕು. ಗಡಿಯಲ್ಲಿ ಬಿಕ್ಕಟ್ಟು ಸೃಷ್ಟಿಯಾದರೆ ಉಭಯ ದೇಶಗಳ ಒಪ್ಪಂದ, ಸಂಬಂಧ, ದ್ವಿಪಕ್ಷೀಯ ಮಾತುಕತೆ ಹಿಂದೆ ಉಳಿಯುತ್ತದೆ. ಹಾಗಾಗಿ, ಎರಡೂ ದೇಶಗಳಿಗೆ ಉತ್ತಮ ಸಂಬಂಧವು ಮುಖ್ಯವಾಗಿದೆ. ಗಡಿಯಲ್ಲಿ ಶಾಂತಿ, ಸ್ಥಿರತೆ ಕಾಪಾಡುವ ದಿಸೆಯಲ್ಲಿ ಶೀಘ್ರದಲ್ಲೇ ಎರಡೂ ದೇಶಗಳ ಮಧ್ಯೆ ರಾಜತಾಂತ್ರಿಕ ಒಪ್ಪಂದ ಉಂಟಾಗುತ್ತದೆ ಎಂಬ ಭರವಸೆ ಇದೆ” ಎಂಬುದಾಗಿ ಮೋದಿ ತಿಳಿಸಿದರು.

ಪಾಕಿಸ್ತಾನ

“”ಪಾಕಿಸ್ತಾನದ ನೂತನ ಪ್ರಧಾನಿ ಪ್ರಮಾಣ ವಚನ ಸ್ವೀಕರಿಸಿದ ಕಾರಣ ನಾನು ಅಭಿನಂದನೆ ಸಲ್ಲಿಸಿದೆ. ಭಾರತವು ಎಂದಿಗೂ ಶಾಂತಿ, ಭದ್ರತೆ, ಸಮೃದ್ಧಿಯನ್ನು ಬಯಸುತ್ತದೆ. ನಮ್ಮ ಪ್ರದೇಶದಲ್ಲಿ ಉಗ್ರವಾದ ಹಾಗೂ ಹಿಂಸಾಚಾರವನ್ನು ಮುಕ್ತಗೊಳಿಸಲು ಇಷ್ಟಪಡುತ್ತದೆ” ಎಂದು ತಿಳಿಸಿದರು. ಇಮ್ರಾನ್‌ ಖಾನ್‌ ಅವರಿಗೆ ಜೈಲು ಶಿಕ್ಷೆ ಕುರಿತ ಪ್ರಶ್ನೆಗೆ ಮೋದಿ, “ಪಾಕಿಸ್ತಾನದ ಆಂತರಿಕ ವಿಚಾರಗಳ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ” ಎಂದರು.

ಇವುಗಳ ಜತೆಗೆ ಮೋದಿ ಅವರು ಭಾರತದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ, 370ನೇ ವಿಧಿ ರದ್ದು, ವಿದೇಶಿ ನೇರ ಬಂಡವಾಳ ಹೂಡಿಕೆ, ದೇಶೀಯ ಉತ್ಪಾದನೆ, ಭಾರತದ ಜನ ಸಂಪನ್ಮೂಲ, ಕೌಶಲ ಅಭಿವೃದ್ಧಿ, ತಂತ್ರಜ್ಞಾನ, ಮನ್‌ ಕಿ ಬಾತ್‌, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ), ಉಗ್ರವಾದ, ಶಾಂತಿ ಸ್ಥಾಪನೆ ಸೇರಿ ಹಲವು ವಿಷಯಗಳ ಕುರಿತು ಮೋದಿ ಮಾತನಾಡಿದ್ದಾರೆ.

ಇದನ್ನೂ ಓದಿ: Hemangi Sakhi: ಮೋದಿ ವಿರುದ್ಧ ಚುನಾವಣೆ ಕಣಕ್ಕಿಳಿದ ಮಂಗಳಮುಖಿ ಹೇಮಾಂಗಿ; ಯಾರಿವರು?

Exit mobile version