ಲಖನೌ: ಚಾಕೊಲೇಟ್ ಎಂದರೆ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಬಾಯಿಯಲ್ಲಿ ನೀರೂರುತ್ತದೆ. ಅಷ್ಟರಮಟ್ಟಿಗೆ ನಮಗೆಲ್ಲ ಚಾಕೊಲೇಟ್ಗಳ ಮೇಲೆ ಆಸೆ ಇರುತ್ತದೆ. ಆದರೆ, ಉತ್ತರ ಪ್ರದೇಶದ ಲಖನೌನಲ್ಲಿ ಕಳ್ಳರಿಗೆ ಚಾಕೊಲೇಟ್ಗಳ ಮೇಲೆ ದುರಾಸೆ ಮೂಡಿದ್ದು, ಬರೋಬ್ಬರಿ ೧೭ ಲಕ್ಷ ರೂಪಾಯಿ ಮೌಲ್ಯದ ಚಾಕೊಲೇಟ್ ಬಾರ್ಗಳನ್ನು (Chocolate Bars) ಕಳ್ಳತನ ಮಾಡಿದ್ದಾರೆ.
ಲಖನೌನ ಚಿನ್ಹಾತ್ನಲ್ಲಿರುವ ಗೋಡೌನ್ನಲ್ಲಿ ಇರಿಸಲಾಗಿದ್ದ ಬಹುರಾಷ್ಟ್ರೀಯ ಬ್ರ್ಯಾಂಡ್ಗಳ ಚಾಕೊಲೇಟ್ ಬಾಕ್ಸ್ಗಳನ್ನು ಕಳ್ಳತನ ಮಾಡಲಾಗಿದೆ. ರಾಜೇಂದ್ರ ಸಿಂಗ್ ಸಿಧು ಎಂಬುವರು ಚಾಕೊಲೇಟ್ ಡಿಸ್ಟ್ರಿಬ್ಯೂಟರ್ ಆಗಿದ್ದು, ಇವರ ಗೋಡೌನ್ನಿಂದ ಚಾಕೊಲೇಟ್, ಬಿಸ್ಕಿಟ್ ಸೇರಿ ಹಲವು ತಿನಿಸುಗಳನ್ನು ಪಿಕಪ್ ವಾಹನಗಳಲ್ಲಿ ತುಂಬಿಕೊಂಡು ಕದ್ದೊಯ್ದಿದ್ದಾರೆ ಎಂದು ತಿಳಿದುಬಂದಿದೆ. ಉದ್ಯಮಿಯು ಪೊಲೀಸರಿಗೆ ದೂರು ನೀಡಿದ್ದಾರೆ.
ಕಳ್ಳತನದ ಕುರಿತು ರಾಜೇಂದ್ರ ಸಿಂಗ್ ಸಿಧು ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. “ಇತ್ತೀಚೆಗಷ್ಟೇ ನಾನು ಹೊಸ ಮನೆ ಸೇರಿದ್ದು, ಹಳೆಯ ಮನೆಯನ್ನು ಗೋಡೌನ್ ಆಗಿ ಬಳಸುತ್ತಿದ್ದೆ. ಮಂಗಳವಾರ ಬೆಳಗ್ಗೆ ನೆರೆಹೊರೆಯವರು ಕರೆ ಮಾಡಿ ಮನೆಯ ಬಾಗಿಲು ಒಡೆದಿರುವುದಾಗಿ ತಿಳಿಸಿದರು. ಸ್ಥಳಕ್ಕೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ತಿಳಿದಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ | World Chocolate Day: ವಿಶ್ವ ಚಾಕೊಲೇಟ್ ದಿನಕ್ಕೊಂದಿಷ್ಟು ಸಿಹಿ!