Site icon Vistara News

Vijayakanth: ಸಿನಿಮಾಗೆ ಜೈ, ರಾಜಕೀಯಕ್ಕೂ ಸೈ; ವಿಜಯಕಾಂತ್‌ ಸಾಗಿದ ಹಾದಿ ರೋಚಕ

Vijayakanth

Cinema To Politics: Here is the journey Of Vijayakanth

ಚೆನ್ನೈ: ತಮಿಳುನಾಡು ಸಿನಿಮಾ ರಂಗಕ್ಕೂ, ರಾಜಕೀಯಕ್ಕೂ ಇನ್ನಿಲ್ಲದ ನಂಟು. ಹಾಗಾಗಿಯೇ, ಎಂ.ಜಿ. ರಾಮಚಂದ್ರನ್‌ (MGR), ಜಯಲಲಿತಾ, ಕಮಲ್‌ ಹಾಸನ್‌ (Kamal Haasan), ಉದಯನಿಧಿ ಸ್ಟಾಲಿನ್‌ ಸೇರಿ ಹಲವು ನಟರು ಸಿನಿಮಾ ಜತೆಗೆ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ. ಅಪಾರವಾದ ಯಶಸ್ಸನ್ನೂ, ಜನಮನ್ನಣೆಯನ್ನೂ ಗಳಿಸಿದ್ದಾರೆ. ಹೀಗೆ, ಸಿನಿಮಾ ರಂಗ ಪ್ರವೇಶಿಸಿ, ರಾಜಕೀಯದಲ್ಲೂ ಏಳಿಗೆ ಹೊಂದಿದ್ದ ವಿಜಯಕಾಂತ್‌ (Vijayakanth) ಅವರು ಗುರುವಾರ (ಡಿಸೆಂಬರ್‌ 28) ನಿಧನರಾಗಿದ್ದಾರೆ.

ತಮಿಳುನಾಡು ಸಿನಿಮಾ ರಂಗದಲ್ಲಿ ವಿಜಯಕಾಂತ್‌ ಅವರು ಮೂಡಿಸಿದ ಛಾಪು ಹೇಗಿದೆ? ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಪಕ್ಷ ಸ್ಥಾಪಿಸಿ ರಾಜಕೀಯದಲ್ಲೂ ಅವರು ಹೇಗೆ ಏಳಿಗೆ ಹೊಂದಿದ್ದರು? ಅವರ ಸಾರ್ವಜನಿಕ ಜೀವನದ ಏಳು ಬೀಳುಗಳೇನು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಸಿನಿಮಾ ಕ್ಷೇತ್ರದ ‌’ಕ್ಯಾಪ್ಟನ್‌’ ವಿಜಯಕಾಂತ್

1952ರ ಆಗಸ್ಟ್‌ 25ರಂದು ತಮಿಳುನಾಡಿನ ಮಧುರೈನಲ್ಲಿ ಜನಿಸಿದ ವಿಜಯಕಾಂತ್‌ ಅವರು ತಮಿಳುನಾಡು ಸಿನಿಮಾ ಕ್ಷೇತ್ರದಲ್ಲಿ ಅಗಾಧವಾದ ಛಾಪು ಮೂಡಿಸಿದ್ದಾರೆ. ಕಾಲೇಜಿನಲ್ಲಿ ಅಭ್ಯಾಸ ಮಾಡುವಾಗಲೇ ಸಿನಿಮಾ, ನಟನೆ ಮೇಲೆ ವ್ಯಾಮೋಹ ಬೆಳೆಸಿಕೊಂಡ ಅವರು ಶಿಕ್ಷಣ ಮುಗಿಯುತ್ತಲೇ ನೆಚ್ಚಿನ ಕ್ಷೇತ್ರವನ್ನು ಪ್ರವೇಶಿಸಿದರು. 1979ರಲ್ಲಿ ‘ಇಣಿಕ್ಕುಂ ಇಲಮೈ’ ಎಂಬ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ಅವರಿಗೆ ಆರಂಭದಲ್ಲಿ ಯಶಸ್ಸು ಸಿಗಲಿಲ್ಲ.

1980 ಹಾಗೂ 1990ರ ದಶಕದಲ್ಲಿ ತಮಿಳುನಾಡಿನಲ್ಲಿ ರಜನಿಕಾಂತ್‌, ಕಮಲ್‌ ಹಾಸನ್‌ ಸಿನಿಮಾಗಳೇ ಪ್ರಾಬಲ್ಯ ಸಾಧಿಸಿದ್ದಕ್ಕೋ ಏನೋ, ವಿಜಯಕಾಂತ್‌ ಅವರ ಸಿನಿಮಾಗಳು ಆರಂಭಿಕ ವರ್ಷಗಳಲ್ಲಿ ಹೆಚ್ಚು ಖ್ಯಾತಿ ಗಳಿಸಲಿಲ್ಲ. ಆದರೆ, 1991ರಲ್ಲಿ ಬಿಡುಗಡೆಯಾದ ವಿಜಯಕಾಂತ್‌ ಅವರ ಕ್ಯಾಪ್ಟನ್‌ ಪ್ರಭಾಕರನ್‌ ಸಿನಿಮಾವು ಅವರ ಸಿನಿಮಾ ಪಯಣಕ್ಕೆ ಮಹತ್ತರ ತಿರುವು ನೀಡಿತು. ತಮ್ಮ ನೂರನೇ ಸಿನಿಮಾದಲ್ಲಿ ಅಪಾರ ಯಶಸ್ಸು ಸಾಧಿಸಿದ ವಿಜಯಕಾಂತ್‌ ಅವರು ನಂತರ ಕ್ಯಾಪ್ಟನ್‌ ಎಂದೇ ಖ್ಯಾತಿಯಾದರು.

ಸಾಲು ಸಾಲು ಸಿನಿಮಾಗಳಲ್ಲಿ ಪೊಲೀಸ್‌ ಪಾತ್ರ, ನ್ಯಾಚುರಲ್‌ ಸ್ಟಂಟ್‌ಗಳು, ಖಡಕ್‌ ಡೈಲಾಗ್‌, ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವ ಸಿನಿಮಾಗಳಿಂದಲೇ ಅವರು ತಮಿಳುನಾಡಿನ ಮನೆ-ಮನ ಸೇರಿದರು. ಮಾನಗಾರ ಕಾವಲ್‌, ಸೇತುಪತಿ ಐಎಎಸ್‌ನಂತಹ ಸಿನಿಮಾಗಳು ಅವರಿಗೆ ಇನ್ನಿಲ್ಲದ ಖ್ಯಾತಿ ತಂದುಕೊಟ್ಟವು. 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ, ನಟನೆ ಜತೆಗೆ ನಿರ್ದೇಶನ, ನಿರ್ಮಾಣಕ್ಕೂ ಕಾಲಿಟ್ಟ ವಿಜಯಕಾಂತ್‌ ಅವರು ಸಿನಿಮಾ ರಂಗದಲ್ಲಿ 2000ನೇ ಇಸವಿ ಬಳಿಕ ಹೆಚ್ಚು ದಿನ ಸಕ್ರಿಯರಾಗಿ ಉಳಿಯಲಿಲ್ಲ.

ಇದನ್ನೂ ಓದಿ: Vijayakanth Passes Away: ಡಿಎಂಡಿಕೆ ಮುಖ್ಯಸ್ಥ, ನಟ ವಿಜಯಕಾಂತ್ ನಿಧನ

ಡಿಎಂಡಿಕೆ ಸ್ಥಾಪನೆ, ರಾಜಕೀಯ ಪ್ರವೇಶ

ತಮಿಳುನಾಡು ಸಿನಿಮಾ ರಂಗದಲ್ಲಿ ಕ್ಯಾಪ್ಟನ್‌ ಎಂದೇ ಖ್ಯಾತಿಯಾಗಿದ್ದ ವಿಜಯಕಾಂತ್‌ ಅವರು ನಟನೆಗೆ ವಿರಾಮ ನೀಡಿ 2005ರಲ್ಲಿ ರಾಜಕೀಯ ಪ್ರವೇಶಿಸಿದರು. ಇದೇ ವರ್ಷ ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ ಪಕ್ಷ ಸ್ಥಾಪಿಸುವ ಮೂಲಕ ಅವರು ರಾಜಕೀಯದ ಹಾದಿ ಹಿಡಿದರು. 2006 ಹಾಗೂ 2011ರಲ್ಲಿ ಗೆಲುವು ಸಾಧಿಸಿ ವಿಧಾನಸಭೆಗೆ ಆಯ್ಕೆಯಾದ ವಿಜಯಕಾಂತ್‌, 2011ರಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದು ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾಗಿದ್ದು ಅವರ ಗರಿಷ್ಠ ಸಾಧನೆ.

ಹೀಗೆ, ಸಿನಿಮಾ, ರಾಜಕೀಯದ ಮೂಲಕ ತಮಿಳುನಾಡು ಸಾರ್ವಜನಿಕ ಜೀವನದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ವಿಜಯಕಾಂತ್‌ ಅವರಿಗೆ ಆರೋಗ್ಯ ಸಾಥ್‌ ನೀಡದ ಕಾರಣ ಅವರು ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾಗಿರಲು ಆಗಲಿಲ್ಲ ಎಂಬುದು ಅವರ ಅಭಿಮಾನಿಗಳಲ್ಲಿ ಎಂದಿಗೂ ಮಾಸದ ಬೇಸರವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version