ಡಿಸ್ಪುರ: ಆತ 10ನೇ ತರಗತಿ ಪೋರ. ಹೆಸರು ಭಾಗ್ಯದೀಪ್ ರಾಜಗಢ. ಈತನನ್ನು ಕರೆತರಲು ಸರ್ಕಾರಿ ಕಾರು ಮನೆತನಕ ಬರುತ್ತದೆ. ಕಾರಿನಲ್ಲೇ ಕಚೇರಿಗೆ ತೆರಳುವ ಬಾಲಕ ಅಧಿಕಾರಿಗಳ ಸಭೆ ನಡೆಸುತ್ತಾನೆ. ಹಲವು ಸೂಚನೆಗಳನ್ನು ನೀಡುತ್ತಾನೆ. ಆತ ನೀಡುವ ಆದೇಶಗಳನ್ನು ಅಧಿಕಾರಿಗಳು ಪಾಲಿಸುತ್ತಾರೆ. ಹೌದು, ಅಸ್ಸಾಂನ ಶಿವಸಾಗರ ಜಿಲ್ಲಾಧಿಕಾರಿಯಾಗಿ 16 ವರ್ಷದ ಭಾಗ್ಯದೀಪ್ ರಾಜಗಢ (Ek Din Ka DC) ಕಾರ್ಯನಿರ್ವಹಿಸಿದ್ದು, ಬಾಲಕನ ಕತೆಯು ಅನಿಲ್ ಕಪೂರ್ ಅಭಿನಯದ ನಾಯಕ್ ಸಿನಿಮಾ ಕಣ್ಣೆದುರು ಬರುತ್ತದೆ.
ಭಾಗ್ಯದೀಪ್ ರಾಜಗಢ ಒಂದು ದಿನದ ಮಟ್ಟಿಗೆ ಶಿವಸಾಗರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾನೆ. ಆತ ಒಬ್ಬ ಐಎಎಸ್ ಅಧಿಕಾರಿ ಯಾವ ಸೌಲಭ್ಯಗಳನ್ನು ಪಡೆಯುತ್ತಾರೋ, ಯಾವ ರೀತಿ ಆಡಳಿತ ನಡೆಸುತ್ತಾರೋ ಅದೇ ರೀತಿ ಕಾರ್ಯನಿರ್ವಹಿಸಿದ್ದಾನೆ. ಶಿವಸಾಗರ ಜಿಲ್ಲಾಧಿಕಾರಿ ಆದಿತ್ಯ ವಿಕ್ರಮ್ ಯಾದವ್ ಅವರು ಭಾಗ್ಯದೀಪ್ ರಾಜಗಢ ಎಂಬ ಬಾಲಕನಿಗೆ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಲು ಸಕಲ ರೀತಿಯಲ್ಲಿ ನೆರವು ನೀಡಿದ್ದಾರೆ. ಭಾಗ್ಯದೀಪ್ ರಾಜಗಢ ಆಡಳಿತ ನಡೆಸಿದ ವಿಡಿಯೊ ಹಾಗೂ ಫೋಟೊಗಳು ವೈರಲ್ ಆಗಿವೆ.
“ನಾನು ಜಿಲ್ಲಾಧಿಕಾರಿಯಾಗಿ ಆಡಳಿತ ನಡೆಸಿದ್ದನ್ನು ಪದಗಳಲ್ಲಿ ಹೇಳಲು ಆಗುವುದಿಲ್ಲ. ನಾನು ಜಿಲ್ಲಾಧಿಕಾರಿ ಎನಿಸಿಕೊಳ್ಳುತ್ತೇನೆ ಎಂದು ಕನಸಲ್ಲೂ ಎಂದುಕೊಂಡಿರಲಿಲ್ಲ. ನಾನು ಅಧಿಕಾರಿಗಳ ಸಭೆ ನಡೆಸಿದೆ. ಜಿಲ್ಲಾಧಿಕಾರಿಯಂತೆ ಕಾರ್ಯನಿರ್ವಹಿಸಿದೆ” ಎಂದು ಭಾಗ್ಯದೀಪ್ ರಾಜಗಢ ತಿಳಿಸಿದ್ದಾನೆ.
ಇದನ್ನೂ ಓದಿ: 24 ಗಂಟೆಯಲ್ಲೇ ಅನುಕಂಪ ಆಧಾರದ ನೌಕರಿ; ಮಾನವೀಯತೆ ಮೆರೆದ ಬೆಳಗಾವಿ ಡಿಸಿ ನಿತೇಶ್ ಪಾಟೀಲ್
ಇದೆಲ್ಲ ಸಾಧ್ಯವಾಗಿದ್ದು ಹೇಗೆ?
ಕಳೆದ ಜೂನ್ ತಿಂಗಳಲ್ಲಿ ಅಸ್ಸಾಂ ಸರ್ಕಾರವು ಆರೋಹಣ ಎಂಬ ಯೋಜನೆಯನ್ನು ಜಾರಿಗೊಳಿಸಿದೆ. ಸರ್ಕಾರಿ ಶಾಲೆಗಳಲ್ಲಿ ನಾಲ್ಕನೇ ತರಗತಿಯಿಂದ ಪಿಯುಸಿ ಓದುವ ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿ, ಅವರಿಗೆ ಆಡಳಿತದ ತರಬೇತಿ ನೀಡುವ ಜತೆಗೆ ಒಂದು ದಿನದ ಮಟ್ಟಿಗೆ ಜಿಲ್ಲಾಧಿಕಾರಿಯಾಗುವ ಅವಕಾಶ ಕಲ್ಪಿಸಲಾಗಿದೆ. ಇದೇ ಯೋಜನೆ ಅಡಿಯಲ್ಲಿ ಭಾಗ್ಯದೀಪ್ ರಾಜಗಢ ಆಯ್ಕೆಯಾಗಿದ್ದಾನೆ. ಭಾಗ್ಯದೀಪ್ ತಂದೆಯು ಟೀ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಾರೆ. ಬಡತನದ ಹಿನ್ನೆಲೆಯ ಇವರ ಮಗನೂ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಕ್ಕೆ ಅಪಾರ ಖುಷಿ ವ್ಯಕ್ತಪಡಿಸಿದ್ದಾರೆ.