ಕುಲು: ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಮಣಿಕರಣ್ ಭಾಗದಲ್ಲಿ ಬುಧವಾರ ಮುಂಜಾನೆ ಮೇಘಸ್ಫೋಟ ಸಂಭವಿಸಿ ಭಾರಿ ಅನಾಹುತ ಉಂಟಾಗಿದೆ. ಪಾರ್ವತಿ ನದಿಯಲ್ಲಿ ಹಠಾತ್ ಪ್ರವಾಹ ಕಾಣಿಸಿಕೊಂಡು ನಾಲ್ವರು ಕೊಚ್ಚಿಕೊಂಡು ಹೋಗಿದ್ದಾರೆ.
ದಿಢೀರನೆ ಸಂಭವಿಸಿರುವ ಮೇಘ ಸ್ಫೋಟದಿಂದಾಗಿ ಜೋಜ್ ಮತ್ತು ನುಲ್ಪಾ ಭಾಗದಲ್ಲಿ ದುರಂತ ಸಂಭವಿಸಿದೆ. ಪಾರ್ವತಿ ನದಿಯಲ್ಲಿ ಭಾರಿ ಪ್ರವಾಹವೇ ಉಂಟಾಗಿದ್ದು, ಅದರ ಮೇಲಿನ ಒಂದು ಸೇತುವೆಗೆ ಹಾನಿಯಾಗಿದೆ. ನದಿ ನೀರಿನಲ್ಲಿ ಹಲವು ಕೊಚ್ಚಿಕೊಂಡು ಹೋಗಿದ್ದು, ನಾಲ್ವರು ಮೃತಪಟ್ಟಿದ್ದಾರೆ, ಉಳಿದವರನ್ನು ರಕ್ಷಿಸಲಾಗಿದೆ.. ಚೋಜ್ ಗ್ರಾಮದಲ್ಲಿ ಮನೆಗಳು ಹಾಗೂ ಕ್ಯಾಂಪಿಂಗ್ ಸೈಟ್ ಗಳಿಗೆ ಹಾನಿಯಾಗಿವೆ. ಐದು ಜಾನುವಾರುಗಳೂ ನೀರಿನಲ್ಲಿ ಕೊಚ್ಚಿ ಹೋಗಿವೆ.
ಪ್ರವಾಹದಿಂದಾಗಿ ಜನರು ಭಯಬೀತರಾಗಿದ್ದಾರೆ, ಸ್ಥಳಕ್ಕೆ ತುರ್ತು ರಕ್ಷಣಾ ತಂಡಗಳು ಧಾವಿಸಿವೆ. ಆದರೂ ಇದುವರೆಗೆ ಎಷ್ಟು ಸಾವುಗಳು ಸಂಭವಿಸಿವೆ ಎಂಬ ನಿಖರ ಮಾಹಿತಿ ತಿಳಿದು ಬಂದಿಲ್ಲ. ವಿಪತ್ತು ನಿರ್ವಹಣಾ ತಂಡದಿಂದ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಇಲ್ಲಿ ಸಾಕಷ್ಟು ಪ್ರವಾಸಿಗರು ಕೂಡಾ ಸಿಕ್ಕಿ ಹಾಕಿಕೊಂಡಿದ್ದಾರೆ. ಗುಡ್ಡ ಕುಸಿದು ರಸ್ತೆಗಳಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ. ದೊಡ್ಡ ದೊಡ್ಡ ಕಲ್ಲುಗಳು ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ಅವುಗಳನ್ನು ಸರಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.
ಇದನ್ನೂ ಓದಿ: Assam Floods: ಭೀಕರ ಪ್ರವಾಹಕ್ಕೆ ನಲುಗಿದ ಅಸ್ಸಾಂ, ಆಸರೆ ಕಳೆದುಕೊಂಡ ಜನರ ಸಂಕಟ, ಪರದಾಟ