ನವ ದೆಹಲಿ: ದಕ್ಷಿಣ ಕಾಶ್ಮೀರದಲ್ಲಿರುವ ಪವಿತ್ರ ಅಮರನಾಥ ಗುಹಾ ದೇವಾಲಯದ ಮೂಲ ಶಿಬಿರದ ಬಳಿ ಶುಕ್ರವಾರ ಮೇಘಸ್ಫೋಟ ಸಂಭವಿಸಿದೆ. ಕನಿಷ್ಠ 1೩ ಮಂದಿ ಪ್ರವಾಸಿಗರು ಸತ್ತಿದ್ದಾರೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಹಲವಾರು ಮಂದಿ ನಾಪತ್ತೆಯಾಗಿದ್ದು, ಇವರಿಗಾಗಿ ಶೋಧ ನಡೆದಿದೆ.
ಶುಕ್ರವಾರ ಸಂಜೆ 5.30ರ ಸುಮಾರಿಗೆ ಅಮರನಾಥ ಗುಹೆಯ ಹಿಂಭಾಗದ ಎತ್ತರದ ಗುಡ್ಡದಲ್ಲಿ ಭಾರಿ ಮಳೆಯಾಗಿದ್ದರಿಂದ ಇದ್ದಕ್ಕಿದ್ದಂತೆ ನೀರು- ಮಣ್ಣಿನ ಪ್ರವಾಹ ಹರಿದುಬಂತು. ಇದರಿಂದಾಗಿ ಗುಹೆಯ ಬಳಿ ಹಾಕಲಾಗಿದ್ದ ಹಲವಾರು ಶಿಬಿರಗಳು, ಲಂಗರ್‌ಗಳು ನಾಶವಾದವು. 1೩ ಮಂದಿ ಸತ್ತಿರುವುದು ಖಚಿತವಾಗಿದೆ. ಸಾವು ನೋವಿನ ಸಂಖ್ಯೆ ಹೆಚ್ಚಿರಬಹುದು ಎಂದು ಪ್ರತ್ಯಕ್ಷದರ್ಶಗಳು ತಿಳಿಸಿದ್ದಾರೆ.
ಪೊಲೀಸರು, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಐಟಿಬಿಪಿ ಮುಂತಾದ ಕ್ಷಿಪ್ರ ಕಾರ್ಯಾಚರಣ ಪಡೆಗಳು ಸ್ಥಳವನ್ನು ತಲುಪಿದ್ದು, ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಅಮರನಾಥ ಪ್ರವಾಸ ಕಳೆದ ತಿಂಗಳು ಆರಂಭವಾಗಿತ್ತು. ಆದರೆ ಅಪಾಯಕಾರಿ ವಾತಾವರಣದ ಕಾರಣ ನೀಡಿ ಪಹಲ್‌ಗಾಮ್ ದಾರಿಯನ್ನು ಮೂರು ದಿನಗಳ ಹಿಂದೆ ಮುಚ್ಚಲಾಗಿತ್ತು. ಮೂರು ವರ್ಷದ ಬಳಿಕ ಅಮರನಾಥ ಯಾತ್ರೆಯ ಭಕ್ತಾದಿಗಳಿಗಾಗಿ ತೆರೆದಿತ್ತು.
”ಮೇಘಸ್ಫೋಟದ ಸುದ್ದಿಯಿಂದ ಆಘಾತವಾಗಿದೆ. ಗತಿಸಿದವರ ಕುಟುಂಬಗಳಿಗೆ ನನ್ನ ಸಂತಾಪ ಸೂಚಿಸುತ್ತೇನೆ. ಅವರಿಗೆ ಬೇಕಾದ ಎಲ್ಲ ಸಹಾಯವನ್ನೂ ಮಾಡಲು ಸಿಎಂಗೆ ಸೂಚಿಸಿದ್ದೇನೆʼʼ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಕಾಶ್ಮೀರ, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡಗಳಲ್ಲಿ ಸಾಕಷ್ಟು ಮಳೆಯಾಗುತ್ತಿದ್ದು, ಹಿಮಾಲಯ ಚಾರಣ ಹೋಗುವವರಿಗೆ ಈ ಕುರಿತು ಎಚ್ಚರಿಕೆ ನೀಡಲಾಗಿದೆ. ಕಳೆದ ವರ್ಷದ ಉತ್ತರಾಖಂಡದಲ್ಲಿ ಮೇಘಸ್ಫೋಟದ ಪರಿಣಾಮ ಕಿರು ಅಣೆಕಟ್ಟೊಂದು ನಾಶವಾಗಿತ್ತು.
ಇದನ್ನೂ ಓದಿ: ಪ್ರತಿಕೂಲ ಹವಾಮಾನ: ಅಮರನಾಥ ಯಾತ್ರೆಗೆ ತಾತ್ಕಾಲಿಕ ತಡೆ, 3000 ಮಂದಿ ಶಿಬಿರದಲ್ಲಿ