Site icon Vistara News

Shyam Rangeela: ವಾರಾಣಸಿಯಲ್ಲಿ ಮೋದಿ ವಿರುದ್ಧ ಕಣಕ್ಕಿಳಿದ ಕಲಾವಿದನ ನಾಮಪತ್ರ ತಿರಸ್ಕಾರ!

Shyam Rangeela

Comedian Shyam Rangeela's nomination rejected from Varanasi seat

ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದ ಹಾಸ್ಯ ಕಲಾವಿದ ಶ್ಯಾಮ್‌ ರಂಗೀಲಾ (Shyam Rangeela) ಸಲ್ಲಿಸಿದ್ದ ನಾಮಪತ್ರವನ್ನು ಚುನಾವಣೆ ಆಯೋಗವು ತಿರಸ್ಕರಿಸಿದೆ. ನಾಮಪತ್ರ ಸಲ್ಲಿಕೆ ವೇಳೆ ಪ್ರತಿಜ್ಞಾ ವಿಧಿ ಸ್ವೀಕರಿಸದಿರುವುದು ಸೇರಿ ಹಲವು ಶಿಷ್ಟಾಚಾರಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಚುನಾವಣೆ ಆಯೋಗವು (Election Commission) ನಾಮಪತ್ರವನ್ನು ತಿರಸ್ಕರಿಸಿದೆ ಎಂದು ತಿಳಿದುಬಂದಿದೆ.

ನಾಮಪತ್ರ ತಿರಸ್ಕಾರಗೊಂಡ ಬಳಿಕ ಶ್ಯಾಮ್‌ ರಂಗೀಲಾ ಅವರು ಅಸಮಾಧಾನ ವ್ಯಕ್ತಪಡಿಸಿದೆ. “ವಾರಾಣಸಿಯಲ್ಲಿ ಚುನಾವಣೆ ಆಯೋಗವು ಪ್ರಜಾಪ್ರಭುತ್ವವನ್ನು ನಿರ್ನಾಮ ಮಾಡಲು ಹೊರಟಿದೆ. ನಾನೇನೂ ಇಲ್ಲಿಗೆ ಮೋದಿ ಅವರನ್ನು ಸೋಲಿಸಲು ಬಂದಿರಲಿಲ್ಲ. ಸ್ಪರ್ಧೆಯಷ್ಟೇ ನನ್ನ ಉದ್ದೇಶವಾಗಿತ್ತು. ಆದರೆ, ವಾರಾಣಸಿಯ ಜನ ನನಗೆ ಬೆಂಬಲ ನೀಡಿದರು. ನನಗಾಗಿ ಹಣ ನೀಡಲು ಬಂದರು. ನಾನು ಸೋತರೂ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಭಾವಿಸಿದ್ದೆ. ಆದರೆ, ನನ್ನನ್ನು ಈಗ ಸ್ಪರ್ಧೆಯಿಂದಲೇ ತಡೆಯಲಾಗಿದೆ. ಇದು ಪ್ರಜಾತಂತ್ರಕ್ಕೆ ಮಾಡಿದ ಅಪಮಾನ” ಎಂದು ಶ್ಯಾಮ್‌ ರಂಗೀಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನದವರಾದ 29 ವರ್ಷದ ಶ್ಯಾಮ್‌ ರಂಗೀಲಾ ಅವರು ನರೇಂದ್ರ ಮೋದಿ ಹಾಗೂ ರಾಹುಲ್‌ ಗಾಂಧಿ ಅವರನ್ನು ಮಿಮಿಕ್ರಿ ಮಾಡುತ್ತ ಖ್ಯಾತಿ ಗಳಿಸಿದ್ದಾರೆ. ಇವರ ಹಾಸ್ಯಪ್ರಜ್ಞೆಯನ್ನೂ ಜನ ಮೆಚ್ಚಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನರಿಗೆ ಪರಿಚಿತರಾಗಿದ್ದಾರೆ. “ದೇಶದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆ ಎಂಬುದನ್ನು ಸಾಬೀತುಪಡಿಸಲು ನಾನು ವಾರಾಣಸಿ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ” ಎಂದು ಹೇಳಿದ್ದ ಅವರು ಮೇ 14ರಂದು ನಾಮಪತ್ರ ಸಲ್ಲಿಸಿದ್ದರು.

ಮೋದಿ ವಿರುದ್ಧ ಕಣಕ್ಕಿಳಿದ ನಾಯಕರಿವರು

ನರೇಂದ್ರ ಮೋದಿ ಅವರು 2014ರಿಂದಲೂ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇವರ ವಿರುದ್ಧ ಈ ಬಾರಿ ಕಾಂಗ್ರೆಸ್‌ ಅಜಯ್‌ ರಾಯ್‌ ಅವರನ್ನು ಕಣಕ್ಕಿಳಿಸಿದೆ. ಅಖಿಲ ಭಾರತ ಹಿಂದು ಮಹಾಸಭಾ (ABHM) ಪಕ್ಷದಿಂದ ಮಂಗಳಮುಖಿಯಾಗಿರುವ ಕಿನ್ನಾರ್‌ ಮಹಾಮಂಡಲೇಶ್ವರ್‌ ಹೇಮಾಂಗಿ ಸಖಿ ಅವರು ಕೂಡ ಸ್ಪರ್ಧಿಸುತ್ತಿದ್ದಾರೆ. ಬಿಎಸ್‌ಪಿಯು ಅಥರ್‌ ಜಮಾಲ್‌ ಲರಿ ಅವರಿಗೆ ಟಿಕೆಟ್‌ ನೀಡಿದೆ. ಕ್ಷೇತ್ರದಲ್ಲಿ ಜೂನ್‌ 1ರಂದು ಮತದಾನ ನಡೆಯಲಿದೆ. ವಾರಾಣಸಿ ಲೋಕಸಭೆ ಕ್ಷೇತ್ರದಲ್ಲಿ 19.62 ಲಕ್ಷ ಮತದಾರರಿದ್ದಾರೆ. ಇವರಲ್ಲಿ 10.65 ಲಕ್ಷ ಪುರುಷರಿದ್ದರೆ, 8.97 ಲಕ್ಷ ಮಹಿಳೆಯರಿದ್ದಾರೆ. 135 ಮಂಗಳಮುಖಿಯರೂ ಮತದಾನ ಮಾಡಲಿದ್ದಾರೆ.

ಗ್ಯಾಂಗ್‌ಸ್ಟರ್‌ ಪತ್ನಿಗೆ ಟಿಕೆಟ್‌

ಉತ್ತರ ಪ್ರದೇಶದ ಜೌನ್‌ಪುರ ಲೋಕಸಭೆ ಕ್ಷೇತ್ರದಲ್ಲಿ ಬಿಎಸ್‌ಪಿಯು ಗ್ಯಾಂಗ್‌ಸ್ಟರ್‌ ಧನಂಜಯ್‌ ಸಿಂಗ್‌ ಪತ್ನಿ ಶ್ರೀಕಲಾ ಸಿಂಗ್‌ ಅವರಿಗೆ ಟಿಕೆಟ್‌ ನೀಡಿದೆ. ಇದು ಈಗ ಭಾರಿ ಚರ್ಚೆಗೂ ಗ್ರಾಸವಾಗಿದೆ. ಇನ್ನು, ಮೈನ್‌ಪುರಿಯಲ್ಲಿ ಅಭ್ಯರ್ಥಿಯನ್ನು ಬದಲಾಯಿಸಿರುವ ಬಿಎಸ್‌ಪಿಯು, ಶಿವಪ್ರಸಾದ್‌ ಯಾದವ್‌ ಅವರಿಗೆ ಮಣೆ ಹಾಕಿದೆ. ಬರೇಲಿಯಲ್ಲಿ ಛೋಟಾಲಾಲ್‌ ಗಂಗ್ವಾರ್‌, ಬಂಡಾದಲ್ಲಿ ಮಯಾಂಕ್‌ ದ್ವಿವೇದಿ, ಘಾಜಿಪುರದಲ್ಲಿ ಉಮೇಶ್‌ ಕುಮಾರ್‌ ಸಿಂಗ್‌ ಸೇರಿ 11 ಕ್ಷೇತ್ರಗಳಲ್ಲಿ ಬಿಎಸ್‌ಪಿಯು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಇದನ್ನೂ ಓದಿ: ಮೋದಿ ಬಲಿಷ್ಠ ನಾಯಕ, ಮತ್ತೆ ಪ್ರಧಾನಿಯಾಗೋದು ನಿಶ್ಚಿತ ಎಂದ ಪಾಕ್‌ ಮೂಲದ ಉದ್ಯಮಿ

Exit mobile version