ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು (Oil Marketing Companies) ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿವೆ. 19 ಕೆ.ಜಿ ತೂಕದ ವಾಣಿಜ್ಯಿಕ ಎಲ್‌ಪಿಜಿ ಸಿಲಿಂಡರ್‌ಗಳ (Commercial LPG Cylinders) ಬೆಲೆಯನ್ನು (LPG Price) ತೈಲ ಮಾರುಕಟ್ಟೆ ಕಂಪನಿಗಳು 57.5 ರೂ. ಇಳಿಕೆ ಮಾಡಲಿವೆ. ಇದರಿಂದಾಗಿ ವಾಣಿಜ್ಯ ಉದ್ದೇಶಗಳಿಗಾಗಿ ಎಲ್‌ಪಿಜಿ ಸಿಲಿಂಡರ್ ಬಳುಸವವರಿಗೆ ಅನುಕೂಲವಾಗಲಿದೆ. ಹಾಗೆಯೇ, ಹೋಟೆಲ್‌ಗಳಲ್ಲಿ ತಿಂಡಿ, ಊಟಗಳ ಬೆಲೆ ಇಳಿಕೆ ಸೇರಿ ಗ್ರಾಹಕರಿಗೂ ಹಲವು ರೀತಿಯಲ್ಲಿ ಅನುಕೂಲವಾಗಲಿದೆ ಎಂದು ತಿಳಿದುಬಂದಿದೆ. ನವೆಂಬರ್ 16ರಿಂದಲೇ ನೂತನ ದರ ಜಾರಿಗೆ ಬಂದಿದೆ.
ನಾಲ್ಕು ನಗರಗಳಿಗೆ ಮಾತ್ರ ಅನ್ವಯ
ದೇಶದ ನಾಲ್ಕು ಪ್ರಮುಖ ನಗರಗಳಲ್ಲಿ ಮಾತ್ರ ವಾಣಿಜ್ಯಿಕ ಸಿಲಿಂಡರ್‌ಗಳ ಬೆಲೆ ಇಳಿಕೆಯಾಗಿದೆ. ದೆಹಲಿ, ಮುಂಬೈ, ಕೋಲ್ಕೊತಾ ಹಾಗೂ ಚೆನ್ನೈನಲ್ಲಿ 57.5 ರೂ. ಇಳಿಕೆಯಾಗಿದೆ. ದೀಪಾವಳಿಗೂ ಮೊದಲು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 101.5 ರೂ. ಏರಿಕೆಯಾಗಿತ್ತು. ಈಗ ದೀಪಾವಳಿ ಹಬ್ಬ ಮುಗಿದ ಮರುದಿನವೇ ಸಿಲಿಂಡರ್ ಬೆಲೆಯನ್ನು ತೈಲ ಮಾರುಕಟ್ಟೆ ಕಂಪನಿಗಳು ಇಳಿಕೆ ಮಾಡಿವೆ.
ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಇಳಿಕೆ ಬಳಿಕ ನವದೆಹಲಿಯಲ್ಲಿ 19 ಕೆ.ಜಿಯ ಒಂದು ಸಿಲಿಂಡರ್‌ಗೆ 1,775.5 ರೂ., ಕೋಲ್ಕೊತಾದಲ್ಲಿ 1,885.5 ರೂ., ಮುಂಬೈನಲ್ಲಿ 1,728 ರೂ. ಹಾಗೂ ಚೆನ್ನೈನಲ್ಲಿ 1,942 ರೂ. ಇದೆ. ಅಕ್ಟೋಬರ್‌ನಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 209 ರೂ. ಏರಿಕೆ ಮಾಡಲಾಗಿತ್ತು. ನವೆಂಬರ್ ಆರಂಭದಲ್ಲೂ 101 ರೂ. ಏರಿಕೆ ಮಾಡಿದ್ದು ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಭಾರಿ ತೊಂದರೆಯಾಗಿತ್ತು. ಈಗ ಬೆಲೆಯನ್ನು ತುಸು ಇಳಿಸಿರುವುದು ನಿಟ್ಟುಸಿರು ಬಿಡುವಂತಾಗಿದೆ.
ಇದನ್ನೂ ಓದಿ: 450 ರೂ.ಗೆ ಸಿಲಿಂಡರ್, ರೈತರಿಗೆ 12 ಸಾವಿರ ರೂ.; ಬಿಜೆಪಿ ಪ್ರಣಾಳಿಕೆಯಲ್ಲಿ ಭರಪೂರ ‘ಉಚಿತ’ ಕೊಡುಗೆ!
ಅಡುಗೆ ಅನಿಲ ಸಿಲಿಂಡರ್ ಬೆಲೆ ಯಥಾಸ್ಥಿತಿ
ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಇಳಿಕೆ ಅಥವಾ ಏರಿಕೆ ಆಗಿಲ್ಲ. ದಸರಾಗೂ ಮುನ್ನವೇ ಕೇಂದ್ರ ಸರ್ಕಾರವು ಎಲ್‌ಪಿಜಿ ಸಿಲಿಂಡರ್‌ಗೆ ನೀಡುತ್ತಿದ್ದ ಸಬ್ಸಿಡಿ ಮೊತ್ತವನ್ನು 300 ರೂ.ಗೆ ಏರಿಕೆ ಮಾಡಲಾಗಿದೆ. ಇದರಿಂದ ಗ್ರಾಹಕರಿಗೆ ಆಗುತ್ತಿದ್ದ ಹೊರೆಯು ತುಸು ಕಡಿಮೆಯಾದಂತಾಗಿದೆ. ಬೆಂಗಳೂರಿನಲ್ಲಿ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆ 905 ರೂ. ಇದೆ. ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 1,857 ರೂ. ಇದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಇನ್ನಷ್ಟು ಇಳಿಕೆ ಮಾಡಲಿದೆ ಎಂದೇ ಹೇಳಲಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ