ಹೊಸದಿಲ್ಲಿ: ಕೊರೊನಾ ವೇಳೆ ಡೋಲೊ ೬೫೦ (Dolo 65O) ಮಾತ್ರೆಗಳು ಕೋಟ್ಯಂತರ ಜನರಿಗೆ ಜೀವರಕ್ಷಕವಾಗಿದ್ದವು. ಕೊರೊನಾ ದೃಢಪಟ್ಟವರಿಗೆ ಡೋಲೊ ೬೫೦ ನೀಡುವುದು ಕಡ್ಡಾಯ ಎನ್ನುವಷ್ಟರಮಟ್ಟಿಗೆ ಎಲ್ಲ ವೈದ್ಯರೂ ಇದೇ ಮಾತ್ರೆಯನ್ನು ಸೇವಿಸಲು ಸೂಚಿಸಿದ್ದರು. ನೆಗಡಿ, ಜ್ವರ ಬಂದವರೂ ಇದೇ ಮಾತ್ರೆಗಳನ್ನು ನುಂಗುತ್ತಿದ್ದರು. ಆದರೆ, ಡೋಲೊ ೬೫೦ ಉತ್ಪಾದಿಸುವ ಕಂಪನಿಯು ವೈದ್ಯರಿಗೆ ಇದೇ ಮಾತ್ರೆ ಬರೆಯುವಂತೆ (Prescribe) ವೈದ್ಯರಿಗೆ ಸಾವಿರ ಕೋಟಿ ರೂ. ಮೌಲ್ಯದ ಉಡುಗೊರೆ ನೀಡಿದೆ ಎಂಬ ಆರೋಪ ಕೇಳಿಬಂದಿದೆ.
“ರೋಗಿಗಳಿಗೆ ಡೋಲೊ ೬೫೦ ಮಾತ್ರೆಯನ್ನೇ ಬರೆಯಬೇಕು ಎಂದು ವೈದ್ಯರ ಮನವೊಲಿಸಲು ಮಾತ್ರೆ ಉತ್ಪಾದಿಸುವ ಕಂಪನಿಯು ಒಂದು ಸಾವಿರ ಕೋಟಿ ರೂ. ವ್ಯಯಿಸಿದೆ. ಹಲವು ಉಡುಗೊರೆಗಳನ್ನು ನೀಡುವ ಮೂಲಕ ವೈದ್ಯರನ್ನು ಪುಸಲಾಯಿಸಲಾಗಿದೆ” ಎಂದು ಫೆಡರೇಷನ್ ಆಫ್ ಮೆಡಿಕಲ್ & ಸೇಲ್ಸ್ ರೆಪ್ರಸೆಂಟೇಟಿವ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. ಈ ಕುರಿತು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಮಾಡಿರುವ ಆರೋಪವನ್ನು ಸಂಸ್ಥೆ ಉಲ್ಲೇಖಿಸಿದೆ.
ನನಗೂ ಇದೇ ಮಾತ್ರೆ ನೀಡಿದ್ದರು ಎಂದ ಜಡ್ಜ್
ಪ್ರಕರಣದ ವಿಚಾರಣೆ ವೇಳೆ ಫೆಡರೇಷನ್ ನೀಡಿದ ಮಾಹಿತಿ ಕೇಳಿದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು “ಕೊರೊನಾ ತಗುಲಿದ್ದಾಗ ನನಗೂ ಇದೇ ಮಾತ್ರೆಯನ್ನು ಸೂಚಿಸಲಾಗಿತ್ತು. ಇದು ಗಂಭೀರ ವಿಷಯ” ಎಂದು ಹೇಳಿದರು. ವೈದ್ಯರು ಫಾರ್ಮಾ ಕಂಪನಿಗಳಿಂದ ಪಡೆಯುವ ಉಡುಗೊರೆಗಳ ವಿಶ್ವಾಸಾರ್ಹತೆ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಆದಾಗ್ಯೂ, ಇತ್ತೀಚೆಗೆ ಡೋಲೊ ೬೫೦ ಉತ್ಪಾದಿಸುವ ಮೈಕ್ರೊ ಲ್ಯಾಬ್ಸ್ ಕಂಪನಿ ಮೇಲೆ ಐಟಿ ದಾಳಿ ನಡೆದಿತ್ತು.
ಇದನ್ನೂ ಓದಿ | IT Raids | ಡೋಲೋ 650 ಮಾತ್ರೆ ತಯಾರಿ ಕಂಪನಿಗೆ ಐಟಿ ದಾಳಿಯ ಡೋಸ್!