Site icon Vistara News

ಹೈಕೋರ್ಟ್‌ ಜಡ್ಜ್‌ ವಿಡಿಯೋ ಹಂಚಿಕೆ: ರಾಹುಲ್‌ ಗಾಂಧಿ ವಿರುದ್ಧ ದೂರು ದಾಖಲು

rahul gandhi tweet on sandesh 2

ಬೆಂಗಳೂರು: ನ್ಯಾಯಾಲಯದ ವಿಚಾರಣೆಯ ವಿಡಿಯೋ ಹಂಚಿಕೆ ಮಾಡಿಕೊಂಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ವಿರುದ್ಧ ಹೈಕೋರ್ಟ್‌ನಲ್ಲಿ ದೂರು ದಾಖಲಾಗಿದೆ. ಹೈಕೋರ್ಟ್‌ ರಿಜಿಸ್ಟ್ರಾರ್‌ಗೆ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಗಿರೀಶ್‌ ಭಾರಧ್ವಾಜ್‌ ದೂರು ನೀಡಿದ್ದಾರೆ. ಈ ಕುರಿತು ಎಐಸಿಸಿ ವಕ್ತಾರ ಅಭಿಷೇಕ್‌ ಮನು ಸಿಂಘ್ವಿ ಸಹ ಪ್ರತಿಕ್ರಿಯೆ ನೀಡಿದ್ದಾರೆ.

ಜುಲೈ 4ರಂದು ಬೆಂಗಳೂರು ನಗರ ಡಿಸಿ ಕಚೇರಿಯ ಉಪತಹಸೀಲ್ದಾರ್‌ ಪಿ. ಎಸ್‌. ಮಹೇಶ್‌ ಜಾಮೀನು ಅರ್ಜಿಯ ವಿಚಾರಣೆ ನಡೆಸುವ ಸಂದರ್ಭದಲ್ಲಿ ಸಿಟ್ಟಿಗೆದ್ದಿದ್ದ ನ್ಯಾಯಮೂರ್ತಿ ಸಂದೇಶ್‌ ʻಅಕ್ರಮ ಪ್ರಶ್ನಿಸಿರುವುದಕ್ಕೆ ನನಗೆ ವರ್ಗಾವಣೆ ಬೆದರಿಕೆ ಬಂದಿದೆ. ಈ ಹಿಂದೆ ನ್ಯಾಯಾಧೀಶರೊಬ್ಬರನ್ನು ವರ್ಗಾಯಿಸಲಾಗಿದೆ ಎಂದು ಹೇಳಿ ನನಗೆ ಬೆದರಿಕೆ ಹಾಕಲಾಗಿದೆ. ಎಸಿಬಿಯ ಎಡಿಜಿಪಿ ಎಲ್ಲರಿಗಿಂತಲೂ ಪವರ್‌ಫುಲ್‌ ಅಂತೆʼ ಎಂದಿದ್ದರು.

“ಬೆಕ್ಕಿಗೆ ನಾನೇ ಗಂಟೆ ಕಟ್ಟುತ್ತೇನೆ. ಇದಕ್ಕೆ ನಾನು ಸಿದ್ಧನಿದ್ದೇನೆ. ನನಗೆ ಯಾರ ಹೆದರಿಕೆಯೂ ಇಲ್ಲ. ಜಡ್ಜ್‌ ಆದ್ಮೇಲೆ ನಾನು ಒಂದಿಂಚೂ ಆಸ್ತಿ ಮಾಡಿಲ್ಲ. ನ್ಯಾಯಮೂರ್ತಿ ಹುದ್ದೆ ಹೋದರೂ ಚಿಂತೆಯಿಲ್ಲ. ನಾನು ರೈತನ ಮಗ, ಉಳುಮೆ ಮಾಡಿ ಜೀವನ ಸಾಗಿಸಲು ಸಿದ್ಧನಾಗಿದ್ದೇನೆʼʼ ಎಂದು ಹೈಕೋರ್ಟ್‌ನ ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಸೋಮವಾರ ಭ್ರಷ್ಟಾಚಾರ ಪ್ರಕರಣದ ವಿಚಾರಣೆ ವೇಳೆ ಹೇಳಿರುವ ವಿಡಿಯೋ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿತ್ತು.

ಈ ವಿಡಿಯೋವನ್ನು ತಮ್ಮ ಟ್ವಿಟರ್‌ ಖಾತೆ (@RahulGandhi) ಮೂಲಕ ರಾಹುಲ್‌ ಗಾಂಧಿ ಹಂಚಿಕೊಂಡಿದ್ದರು. ʻಕರ್ನಾಟಕ ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ಬಯಲಿಗೆ ಎಳೆದದ್ದಕ್ಕೆ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯೊಬ್ಬರಿಗೆ ಬೆದರಿಗೆ ಒಡ್ಡಲಾಗಿದೆ. ಒಂದರ ನಂತರ ಮತ್ತೊಂದು ಸಂಸ್ಥೆಗಳನ್ನು ನಾಶ ಮಾಡುತ್ತಿದೆ ಬಿಜೆಪಿ. ನಿರ್ಭೀತರಾಗಿ ಕೆಲಸ ಮಾಡುವವರಿಗೆ ನಾವೆಲ್ಲರೂ ಬೆನ್ನೆಲುಬಾಗಿ ನಿಲ್ಲಬೇಕು. ಧೈರ್ಯವಾಗಿರಿʼ ಎಂದಿದ್ದರು.

ಇದನ್ನೂ ಓದಿ | Vistara Exclusive | ಹೈಕೋರ್ಟ್‌ ವಿಡಿಯೋ ಅಪ್‌ಲೋಡ್‌ ಮಾಡಿ ನಿಯಮ ಉಲ್ಲಂಘಿಸಿದ ರಾಹುಲ್‌ ಗಾಂಧಿ

ಗಿರೀಶ್‌ ಭಾರಧ್ವಾಜ್‌ ದೂರಲ್ಲಿ ಏನಿದೆ?

ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಅವರು ನೀಡಿದ ಹೇಳಿಕೆಯ ವಿಡಿಯೋವನ್ನು ರಾಹುಲ್‌ ಗಾಂಧಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನೇರ ಪ್ರಸಾರದ ವಿಡಿಯೋವನ್ನು ಹಂಚಿಕೊಳ್ಳಬಾರದು ಎಂಬ ನಿಯಮಕ್ಕೆ ಇದು ವಿರುದ್ಧವಾದದ್ದು. ರಾಹುಲ್‌ ಗಾಂಧಿಯವರು ತಮ್ಮ ರಾಜಕೀಯ ಲಾಭಕ್ಕಾಗಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಕುರಿತು ಐಟಿ ಕಾಯ್ದೆ, ನ್ಯಾಯಾಂಗ ನಿಂದನೆ ಇತ್ಯಾದಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗಿರೀಶ್‌ ಭಾರಧ್ವಾಜ್‌ ಆಗ್ರಹಿಸಿದ್ದಾರೆ.

ಗಿರೀಶ್‌ ಭಾರಧ್ವಾಜ್‌ ನೀಡಿರುವ ದೂರು

ಪರಿಶೀಲಿಸಲಾಗುವುದು ಎಂದ ಸಿಂಘ್ವಿ

ರಾಹುಲ್‌ ಗಾಂಧಿ ಅವರು ಹಂಚಿಕೊಂಡಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸುವುದಾಗಿ ಎಐಸಿಸಿ ವಕ್ತಾರ ಅಭಿಷೇಕ್‌ ಮನು ಸಿಂಘ್ವಿ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಗೆ ಉತ್ತರಿಸಿದ ಸಿಂಘ್ವಿ, ಮುಖ್ಯವಾಗಿ ನ್ಯಾಯಮೂರ್ತಿಯವರು ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಗಮನಿಸಬೇಕು. ಇಲ್ಲಿ ವಿಡಿಯೋ ಕುರಿತು ದೂರು ನೀಡಲಾಗಿದೆ. ಈ ಕುರಿತು ಪರಿಶೀಲನೆ ನಡೆಸಲಾಗುತ್ತದೆ ಎಂದು ತಿಳಿಸಿದರು.

Exit mobile version