Site icon Vistara News

Congress And Muslims: ಮುಸ್ಲಿಮರು ಕಾಂಗ್ರೆಸ್‌ ನಾಯಕರ ಗುಲಾಮರಲ್ಲ! ಪಕ್ಷದ ಮುಖಂಡ ಖುರೇಶಿ ವಾರ್ನಿಂಗ್‌

Congress And Muslims aziz qureshi

ಭೋಪಾಲ್‌: ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್‌ ನಾಯಕ ಅಜೀಜ್‌ ಖುರೇಶಿ ತಮ್ಮದೇ ಪಕ್ಷದ (Congress and muslims) ನಿಲುವುಗಳ ವಿರುದ್ಧ ಕಿಡಿಕಾರಿದ್ದು, ಮುಸ್ಲಿಮರು ಕಾಂಗ್ರೆಸ್‌ ನಾಯಕರ ಆದೇಶಕ್ಕೆ ಅನುಸಾರವಾಗಿ ವರ್ತಿಸುವ ಗುಲಾಮರಲ್ಲ ಎಂದಿದ್ದಾರೆ.

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಜನ್ಮದಿನಾಚರಣೆಯ ಸಂದರ್ಭದಲ್ಲಿ ವಿದಿಶಾದಲ್ಲಿ ನಡೆದ ಕಾಂಗ್ರೆಸ್‌ನ ಮುಸ್ಲಿಂ ಮುಖಂಡರ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು. ಉತ್ತರ ಪ್ರದೇಶದ ರಾಜ್ಯಪಾಲ, ಮಧ್ಯಪ್ರದೇಶದ ಸಚಿವ ಮತ್ತು ಲೋಕಸಭೆಯ ಸದಸ್ಯರಾಗಿದ್ದ 82 ವರ್ಷದ ಖುರೇಶಿ ಅವರ ಹೇಳಿಕೆಗಳು ಕಾಂಗ್ರೆಸ್‌ ಪಕ್ಷವನ್ನು ಮುಜುಗರಕ್ಕೀಡುಮಾಡಿದೆ.

“ಕಾಂಗ್ರೆಸ್‌ ಸೇರಿದಂತೆ ಎಲ್ಲಾ ಪಕ್ಷಗಳು, ಅವರ ಆಜ್ಞಾನುಸಾರ ವರ್ತಿಸುವಂಥ ಗುಲಾಮರಲ್ಲ ಮುಸ್ಲಿಮರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಪೊಲೀಸ್‌, ಸೇನೆ, ಬ್ಯಾಂಕ್‌ ಮುಂತಾದೆಡೆಗಳಲ್ಲಿ ಮುಸ್ಲಿಮರಿಗೆ ಉದ್ಯೋಗವಿಲ್ಲ ಎಂದಾದರೆ ನಿಮಗಾಗಿ ಅವರೇಕೆ ಮತ ಹಾಕಬೇಕು? ಬ್ಯಾಂಕ್‌ ಸಾಲದ ಖಾತ್ರಿಯಿಲ್ಲ ಎಂದಾದರೆ ಅವರೇಕೆ ನಿಮಗೆ ಮತ ನೀಡಬೇಕು? ಅವರ ಮನೆ, ಅಂಗಡಿಗಳನ್ನು ಸುಡಲಾಗುತ್ತದೆ ಎಂದಾದರೆ, ಅವರ ಮಕ್ಕಳು ಅನಾಥರಾಗುತ್ತಾರೆ ಎಂದಾದರೆ ಅದನ್ನು ಸಹಿಸುವುದು ಹೇಗೆ? ಅವರೇನು ಹೇಡಿಗಳಲ್ಲ, ಜೀವ ತೆರಲೂ ಸಿದ್ಧರಿದ್ದಾರೆ” ಎಂದು ಅಜೀಜ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಈಗ ಹಿಂದುತ್ವದ ಬಗ್ಗೆ ಮಾತಾಡುತ್ತಿದೆ. ಜೈ ಗಂಗಾ ಮಾತೆ, ಜೈ ನರ್ಮದಾ ಮಾತೆ ಮುಂತಾದ ಘೋಷಣೆಗಳನ್ನು ಕಾಂಗ್ರೆಸಿಗರು ಮೊಳಗಿಸುತ್ತಿದ್ದಾರೆ. ಧಾರ್ಮಿಕ ಯಾತ್ರೆಗಳ ಮಾಡುತ್ತಿದ್ದಾರೆ. ಮಧ್ಯಪ್ರದೇಶ ಕಾಂಗ್ರೆಸ್‌ ಕಚೇರಿಯಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಿದ್ದಾರೆ. ಇದು ನಾಚಿಕೆಗೇಡು. ಇದಕ್ಕಾಗಿ ಪಕ್ಷದಿಂದ ಕಿತ್ತು ಹಾಕಿದರೂ ತಮಗೇನೂ ಭಯವಿಲ್ಲ ಎಂದು ಖರೇಶಿ ಗುಡುಗಿದ್ದಾರೆ.

ಈ ಬಗ್ಗೆ ಕಾಂಗ್ರೆಸ್‌ ಸುರಕ್ಷಿತ ಅಂತರ ಕಾಯ್ದುಕೊಂಡಿದ್ದು, “ಅದು ಅವರ ವೈಯಕ್ತಿಕ ಅಭಿಪ್ರಾಯ. ಜಾತ್ಯತೀತತೆಯಲ್ಲಿ ಕಾಂಗ್ರೆಸ್‌ಗೆ ನಂಬಿಕೆಯಿದೆ” ಎಂದು ಪಕ್ಷದ ಮಧ್ಯಪ್ರದೇಶದ ವಕ್ತಾರ ಕೆ.ಕೆ. ಮಿಶ್ರಾ ಹೇಳಿದ್ದಾರೆ. ಇತ್ತ, ಈ ಅವಕಾಶವನ್ನು ಕೈ ಚೆಲ್ಲದ ಬಿಜೆಪಿ, “ಅಲ್ಪಸಂಖ್ಯಾತರ ಓಲೈಕೆಯನ್ನೇ ಕಾಂಗ್ರೆಸ್‌ ನೆಚ್ಚಿಕೊಂಡಿದೆ ಎಂಬುದು ಇದರಿಂದಲೇ ತಿಳಿಯುತ್ತದೆ. ಖರೇಶಿ ಅವರ ಪ್ರಚೋದನಕಾರಿ ಹೇಳಿಕೆಗಳ ಬಗ್ಗೆ ತನ್ನ ನಿಲುವನ್ನು ಕಾಂಗ್ರೆಸ್‌ ಸ್ಪಷ್ಟಪಡಿಸಬೇಕು” ಎಂದು ರಾಜ್ಯದ ಬಿಜೆಪಿ ವಕ್ತಾರ ನರೇಂದ್ರ ಸಲುಜಾ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Congress Party: ಗುಲಾಮ್ ನಬಿ ಆಜಾದ್‌ಗೆ ‘ಕೈ’ಕೊಟ್ಟರು! ಮರಳಿ ಕಾಂಗ್ರೆಸ್ ಕೈ ಹಿಡಿದ ಜಮ್ಮು-ಕಾಶ್ಮೀರ ನಾಯಕರು

Exit mobile version