Site icon Vistara News

INDIA Alliance: ಬಿಜೆಪಿ ಭರ್ಜರಿ ಗೆಲುವಿನ ಬಳಿಕ ʼಇಂಡಿಯಾ’ ಕೂಟದಲ್ಲಿ ಕೋಲಾಹಲ! ಮೀಟಿಂಗ್ ಕ್ಯಾನ್ಸಲ್

India bloc Leaders

Vistara Editorial: INDIA bloc staring at a crisis, Opposition Parties Should Show Unity

ಹೊಸದಿಲ್ಲಿ: ರಾಜಧಾನಿಯಲ್ಲಿ ನಾಳೆ ನಡೆಯಬೇಕಿದ್ದ ʼಇಂಡಿಯಾ ಬ್ಲಾಕ್‌ʼ ಒಕ್ಕೂಟದ (INDIA Alliance) ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಮೂರು ರಾಜ್ಯಗಳ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ (Congress) ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಕರೆದಿದ್ದ ಸಭೆಯು ಬಹುತೇಕ ರದ್ದಾಗಿದೆ.

ಈ ತಿಂಗಳ ಮೂರನೇ ವಾರದಲ್ಲಿ ʼಎಲ್ಲರಿಗೂ ಅನುಕೂಲಕರವಾದ ದಿನಾಂಕʼದಂದು ಸಭೆ ನಡೆಯಲಿದೆ ಎಂದು ಮೂಲಗಳು ಹೇಳಿವೆಯಾದರೂ, ಇತರ ಪ್ರಮುಖ ಪಕ್ಷಗಳ ನಾಯಕರು ಮೀಟಿಂಗ್‌ಗೆ ಬರುವುದನ್ನು ರದ್ದುಪಡಿಸಿದ್ದಾರೆ. ಹೀಗಾಗಿ ಸಭೆ ನಡೆಯಲಿರುವುದು ಅನುಮಾನ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar), ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata banerjee) – ಮೂವರೂ ಸಭೆಗೆ ತಾವು ಬರುವುದಿಲ್ಲ ಎಂದು ತಿಳಿಸಿದ್ದರು.

ಈ ಮೂವರೂ ನವೆಂಬರ್‌ನಲ್ಲಿ ನಡೆದ ಐದು ರಾಜ್ಯಗಳ ಚುನಾವಣೆ ಮತ್ತು ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಪ್ರತಿಪಕ್ಷಗಳನ್ನು ಒಗ್ಗೂಡಿಸಬೇಕಿದ್ದ ಬಣದ ಹಿರಿಯ ಸದಸ್ಯರಾಗಿರುವವರು. ನರೇಂದ್ರ ಮೋದಿಯವರು ಅಭೂತಪೂರ್ವ ಮೂರನೇ ಬಾರಿಗೆ ಪ್ರಧಾನ ಮಂತ್ರಿ ಪದವಿಯತ್ತ ಸಾಗುವುದನ್ನು ತಡೆಯುವ ಉದ್ದೇಶ ಹೊಂದಿರುವವರು.

ಬುಧವಾರದ ಸಭೆಯಿಂದ ಹಿಂದೆ ಸರಿದ ನಾಯಕರು ಇವರು ಮೂವರು ಮಾತ್ರವೇ ಅಲ್ಲ. ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ ಮೇಲೆ ಕೋಪಿಸಿಕೊಂಡಿರುವುದು ಸ್ಪಷ್ಟವಾಗಿದೆ. ಇದು ಇಂಡಿಯಾ ಬಣದಲ್ಲಿ ಬೆಳೆಯುತ್ತಿರುವ ಕಂದಕವನ್ನು ಎತ್ತಿ ತೋರಿಸಿದೆ. ಪ್ರಾದೇಶಿಕ ಪಕ್ಷಗಳು ಬಹುಮಟ್ಟಿಗೆ ಸ್ವಂತವಾಗಿ ಚುನಾವಣೆಗಳನ್ನು ಎದುರಿಸಲು ಇಷ್ಟಪಟ್ಟಿವೆ. ಅಖಿಲೇಶ್ ಯಾದವ್ ಮತ್ತು ಮಮತಾ ಬ್ಯಾನರ್ಜಿ ಇಬ್ಬರೂ ಈ ವಾರ ಆ ವಿಷಯವನ್ನು ಹೇಳಿದ್ದಾರೆ.

“ಮಿತ್ರಪಕ್ಷಗಳೊಂದಿಗೆ ಸೀಟುಗಳನ್ನು ಹಂಚಿಕೊಳ್ಳಲು ಒಪ್ಪಿಕೊಂಡಿದ್ದರೆ ಕಾಂಗ್ರೆಸ್‌ ಪಕ್ಷದ ಸೋಲಿನ ಅಂತರವು ಚಿಕ್ಕದಾಗಿರುತ್ತಿತ್ತು ಅಥವಾ ತಡೆಯಬಹುದಿತ್ತು. ಅದು ಒಪ್ಪಿಕೊಳ್ಳದ್ದರಿಂದ ಮತಗಳು ಒಡೆದುಹೋದವುʼʼ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. “ನನಗೆ ಮೀಟಿಂಗ್‌ನ ವಿಷಯವೇ ಗೊತ್ತಿಲ್ಲ. ನನಗೆ ಉತ್ತರ ಬಂಗಾಳದಲ್ಲಿ ಪೂರ್ವನಿಯೋಜಿತ ಕಾರ್ಯಕ್ರಮವಿದೆ. ಆದ್ದರಿಂದ ನಾನು ಬರಲು ಆಗುವುದಿಲ್ಲ” ಎಂದಿದ್ದಾರೆ ಅವರು.

ನಿತೀಶ್ ಕುಮಾರ್ ಮತ್ತು ಅಖಿಲೇಶ್ ಯಾದವ್ ತಮ್ಮ ಬದಲಿಗೆ ಪ್ರತಿನಿಧಿಗಳನ್ನು ಕಳುಹಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಜೆಡಿಯು ನಾಯಕ ನಿತೀಶ್‌ ಕುಮಾರ್‌ ಅವರು ಪಕ್ಷದ ಅಧ್ಯಕ್ಷ ರಾಜೀವ್ ರಂಜನ್ ಮತ್ತು ಹಿರಿಯ ನಾಯಕ ಸಂಜಯ್ ಝಾ ಅವರನ್ನು, ಅಖಿಲೇಶ್‌ ಯಾದವ್ ಅವರು ತಮ್ಮ ಚಿಕ್ಕಪ್ಪ ಮತ್ತು ರಾಜ್ಯಸಭಾ ಸಂಸದ ರಾಮಗೋಪಾಲ್ ಯಾದವ್ ಅವರನ್ನು ಕಳುಹಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.

ಮೂಲಗಳ ಪ್ರಕಾರ, ಬಿಹಾರ ಸರ್ಕಾರದ ಉಳಿದ ಅರ್ಧ ಭಾಗವಾಗಿರುವ ರಾಷ್ಟ್ರೀಯ ಜನತಾ ದಳದ ಉನ್ನತ ನಾಯಕರಾದ ಲಾಲು ಪ್ರಸಾದ್ ಯಾದವ್ (Lalu Prasad Yadav) ಮತ್ತು ಬಿಹಾರ ಉಪ ಮುಖ್ಯಮಂತ್ರಿಯಾಗಿರುವ ಅವರ ಪುತ್ರ ತೇಜಸ್ವಿ ಯಾದವ್ (Tejaswi Yadav) ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

ಮೂರು ರಾಜ್ಯಗಳ ಸೋಲಿನಿಂದ ಕಾಂಗ್ರೆಸ್‌ ಆಘಾತಗೊಂಡಿದೆ. ಪ್ರಾದೇಶಿಕ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರೆ ಒಕ್ಕೂಟಕ್ಕೆ ಗೆಲುವಿನ ಸಾಧ್ಯತೆ ಇತ್ತ ಎಂಬುದನ್ನು ಮಧ್ಯಪ್ರದೇಶದ ಮತಹಂಚಿಕೆ ತೋರಿಸಿಕೊಟ್ಟಿದೆ. ಅಲ್ಲಿ ಮತಗಳು ಹಂಚಿಹೋಗಿರುವ ಪರಿಣಾಮ ಕಾಂಗ್ರೆಸ್‌ ಸೋತಿದೆ. “ಇದು ಕಾಂಗ್ರೆಸ್‌ನ ಸೋಲೇ ಹೊರತು, ಜನತೆಯ ಸೋಲಲ್ಲ” ಎಂದು ಮಮತಾ ಬ್ಯಾನರ್ಜಿ ಅಸಮಾಧಾನ ತೋರ್ಪಡಿಸಿದ್ದಾರೆ. ಅಲ್ಲಿಗೆ ಇಂಡಿಯಾ ಬ್ಲಾಕ್‌ನಲ್ಲಿ ಕಾಂಗ್ರೆಸ್‌ ಕುರಿತು ಇತರ ಪಕ್ಷಗಳ ಸಿಟ್ಟು ದಟ್ಟವಾಗಿರುವ ಸೂಚನೆ ದೊರೆತಿದ್ದು, ತೇಪೆ ಹಾಕಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ.

ಇದನ್ನೂ ಓದಿ: INDIA Alliance: ‘ಇಂಡಿಯಾ’ ಹೆಸರಿನ ಒಕ್ಕೂಟ ಪ್ರಶ್ನಿಸಿ ಪಿಐಎಲ್‌; 26 ಪಕ್ಷಗಳಿಗೆ ದೆಹಲಿ ಹೈಕೋರ್ಟ್‌ ನೋಟಿಸ್

Exit mobile version