Site icon Vistara News

Sonia Gandhi: ಮತ್ತೆ ಸೋನಿಯಾ ಗಾಂಧಿಗೆ ಮಣೆ; ಕಾಂಗ್ರೆಸ್‌ ಸಂಸದೀಯ ಪಕ್ಷದ ಅಧ್ಯಕ್ಷೆಯಾಗಿ ಮರು ಆಯ್ಕೆ!

sonia gandhi

Congress elects Sonia Gandhi as chairperson of its Parliamentary Party

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಕಾಂಗ್ರೆಸ್‌ 99 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಪಕ್ಷದಲ್ಲಿ ಸಕಾರಾತ್ಮಕ ಮನೋಭಾವ ಮೂಡಿದೆ. ಹಾಗಾಗಿ, ಪಕ್ಷದ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಹೈಕಮಾಂಡ್‌ ತೀರ್ಮಾನಿಸಿದೆ. ಅಷ್ಟೇ ಅಲ್ಲ, ಮತ್ತೆ ಸೋನಿಯಾ ಗಾಂಧಿ (Sonia Gandhi) ಅವರ ನಾಯಕತ್ವಕ್ಕೆ ಮಣೆ ಹಾಕಲಾಗಿದೆ. ಕಾಂಗ್ರೆಸ್‌ ಸಂಸದೀಯ ಪಕ್ಷದ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಅವರನ್ನು ಮರು ಆಯ್ಕೆ ಮಾಡಲಾಗಿದೆ.

ಹಳೆಯ ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ಕಾಂಗ್ರೆಸ್‌ ಸಂಸದೀಯ ಪಕ್ಷದ ಸಭೆ ನಡೆದಿದ್ದು, ಅಲ್ಲಿಯೇ ಅವಿರೋಧವಾಗಿ ಸೋನಿಯಾ ಗಾಂಧಿ ಅವರನ್ನು ಸಂಸದೀಯ ಪಕ್ಷದ ಅಧ್ಯಕ್ಷೆಯನ್ನಾಗಿ ಮರು ಆಯ್ಕೆ ಮಾಡಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋನಿಯಾ ಗಾಂಧಿ ಅವರ ಹೆಸರನ್ನು ಪ್ರಸ್ತಾಪ ಮಾಡಿದರು. ಪಕ್ಷದ ನಾಯಕರಾದ ಗೌರವ್‌ ಗೊಗೊಯ್‌, ತಾರಿಕ್‌ ಅನ್ವರ್‌, ಕೆ.ಸುಧಾಕರನ್‌ ಸೇರಿ ಹಲವು ನಾಯಕರು ಇದನ್ನೇ ಅನುಮೋದಿಸಿದರು.

ಸಭೆಯ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರು ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು. “ಸೋನಿಯಾ ಗಾಂಧಿ ಅವರನ್ನೇ ಸಂಸದೀಯ ಪಕ್ಷದ ಅಧ್ಯಕ್ಷೆಯನ್ನಾಗಿ ಮರು ಆಯ್ಕೆ ಮಾಡಿರುವುದು ದೊಡ್ಡ ಸಂಗತಿಯಾಗಿದೆ. ಅವರು ನಮಗೆ ನೀಡುತ್ತಿರುವ ಮಾರ್ಗದರ್ಶವನ್ನು ಮುಂದುವರಿಸುತ್ತಾರೆ. ಅವರ ಸೇವೆಯು ಪಕ್ಷಕ್ಕಾಗಿ ಮುಂದುವರಿಯುತ್ತದೆ ಇದಕ್ಕಾಗಿ ನಾನು ಅವರಿಗೆ ಸೆಲ್ಯೂಟ್‌ ಹೊಡೆಯುತ್ತೇನೆʼ ಎಂಬುದಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಮಾಹಿತಿ ನೀಡಿದರು.

ಸಂಸದೀಯ ಪಕ್ಷದ ಅಧ್ಯಕ್ಷೆಯಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಅವರು, “ಮೊದಲು, ಸಂಸದರಾಗಿ ಆಯ್ಕೆಯಾದ ಎಲ್ಲ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಅಭಿನಂದನೆಗಳು. ಸವಾಲಿನ ಸಂದರ್ಭದಲ್ಲಿ ನೀವೆಲ್ಲ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದೀರಿ. ಚುನಾವಣೆ ಪ್ರಚಾರದ ವೇಳೆ ಎದುರಾದ ಸಂಕಷ್ಟಗಳನ್ನು ಮೆಟ್ಟಿ ನೀವು ಜಯ ತಂದಿದ್ದೀರಿ. ಇದು ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷವು ಇನ್ನಷ್ಟು ಪ್ರಬಲವಾಗಿ ಕೆಲಸ ಮಾಡಲು ಸಾಧ್ಯವಾಗಲಿದೆ. ಇನ್ನು ಪಕ್ಷದ ನಾಯಕರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದಕ್ಕೆ ಧನ್ಯವಾದಗಳು” ಎಂದಿದ್ದಾರೆ.

ಮತ್ತೊಂದೆಡೆ, ಲೋಕಸಭೆಯಲ್ಲಿ ರಾಹುಲ್‌ ಗಾಂಧಿ ಅವರನ್ನು ಪ್ರತಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಲು ಸಿಡಬ್ಲ್ಯೂಸಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. “ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕನನ್ನಾಗಿ ರಾಹುಲ್‌ ಗಾಂಧಿ ಅವರನ್ನು ನೇಮಕ ಮಾಡುವ ದಿಸೆಯಲ್ಲಿ ಸಿಡಬ್ಲ್ಯೂಸಿಯು ಅವಿರೋಧವಾಗಿ ನಿರ್ಣಯ ತೆಗೆದುಕೊಂಡಿದೆ. ಸಂಸತ್‌ನಲ್ಲಿ ಪ್ರತಿಪಕ್ಷದ ನಾಯಕತ್ವ ವಹಿಸಲು ರಾಹುಲ್‌ ಗಾಂಧಿ ಅವರೇ ಸಮರ್ಥ ನಾಯಕರಾಗಿದ್ದಾರೆ. ನೀವೇ ಪ್ರತಿಪಕ್ಷ ನಾಯಕರಾಗಿ ಅಧಿಕಾರ ವಹಿಸಿಕೊಳ್ಳಿ ಎಂಬುದಾಗಿ ಕಾಂಗ್ರೆಸ್‌ ನಾಯಕರು ರಾಹುಲ್‌ ಗಾಂಧಿ ಅವರಿಗೆ ಮನವಿ ಮಾಡಲಿದ್ದಾರೆ” ಎಂಬುದಾಗಿ ಕಾಂಗ್ರೆಸ್‌ ನಾಯಕ ಕೆ.ಸಿ.ವೇಣುಗೋಪಾಲ್‌ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Narendra Modi: ಮೋದಿ ಪ್ರಮಾಣವಚನಕ್ಕೆ 7 ವಿದೇಶಿ ನಾಯಕರು; 8000 ಅತಿಥಿಗಳು

Exit mobile version