ಮುಂಬೈ: ಬೇಸಿಗೆಯ ಬಿಸಿಲಿಗಿಂತ ಲೋಕಸಭೆ ಚುನಾವಣೆ (Lok Sabha Election 2024) ಕಾವೇ ಜಾಸ್ತಿಯಾಗುತ್ತಿದೆ. ಬಿಜೆಪಿ, ಕಾಂಗ್ರೆಸ್ ಸೇರಿ ಎಲ್ಲ ಪಕ್ಷಗಳು, ನಾಯಕರು ಹಾಗೂ ಅಭ್ಯರ್ಥಿಗಳು ಬಿರುಸಿನ ಪ್ರಚಾರ, ಇನ್ನಿಲ್ಲದ ರಣತಂತ್ರ ರೂಪಿಸುತ್ತಿರುವುದೇ ಕಾರಣವಾಗಿದೆ. ಇದರ ಮಧ್ಯೆಯೇ, ಮಹಾರಾಷ್ಟ್ರ (Maharashtra) ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಇದನ್ನು ನಿಯಂತ್ರಿಸುವ ದಿಸೆಯಲ್ಲಿ ಪಕ್ಷದ ನಾಯಕ, ಮಾಜಿ ಸಂಸದ ಸಂಜಯ್ ನಿರುಪಮ್ (Sanjay Nirupam) ಅವರನ್ನು ಕಾಂಗ್ರೆಸ್ ಉಚ್ಚಾಟನೆ ಮಾಡಿದೆ.
“ಪಕ್ಷ ವಿರೋಧಿ ಹಾಗೂ ಅಶಿಸ್ತಿನ ಕುರಿತು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಸಂಜಯ್ ನಿರುಪಮ್ ಅವರನ್ನು ಪಕ್ಷದಿಂದ ಉಚ್ಚಾಟನೆಗೊಳಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಒಪ್ಪಿಗೆ ಸೂಚಿಸಿದ್ದಾರೆ. ಈ ಕ್ಷಣದಿಂದಲೇ ಜಾರಿಗೆ ಬರುವಂತೆ ಸಂಜಯ್ ನಿರುಪಮ್ ಅವರನ್ನು ಆರು ವರ್ಷಗಳವರೆಗೆ ಪಕ್ಷದಿಂದ ಉಚ್ಚಾಟಿಸಲಾಗಿದೆ” ಎಂದು ಕಾಂಗ್ರೆಸ್ ಪ್ರಕಟಣೆ ತಿಳಿಸಿದೆ. ಇದಕ್ಕೂ ಮೊದಲು, ಮಹಾರಾಷ್ಟ್ರದ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಸಂಜಯ್ ನಿರುಪಮ್ ಅವರನ್ನು ಕಾಂಗ್ರೆಸ್ ತೆಗೆದುಹಾಕಿತ್ತು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಅವರು, ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲು ಪಕ್ಷವು ತನ್ನ ಸ್ಥಿತಿಯನ್ನು ಸುಧಾರಿಸಿಕೊಳ್ಳಲಿ ಎಂದು ಟಾಂಗ್ ಕೊಟ್ಟಿದ್ದರು.
Congress expels Sanjay Nirupam for 6 years. pic.twitter.com/XDlgyUanCX
— Chaitanya Marpakwar चैतन्य मारपकवार (@chaitanya_pm) April 3, 2024
ಸಂಜಯ್ ನಿರುಪಮ್ ವಿರುದ್ಧ ಕ್ರಮ ಏಕೆ?
ಕಳೆದ ಕೆಲ ದಿನಗಳಿಂದ ಸಂಜಯ್ ನಿರುಪಮ್ ಅವರು ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಬಣದ ಶಿವಸೇನೆ ಜತೆ ಕಾಂಗ್ರೆಸ್ ಸೀಟು ಹಂಚಿಕೆ ಕುರಿತಂತೆ ಮಾತುಕತೆ ನಡೆಸುತ್ತಿರುವ ಕುರಿತು, ತೆಗೆದುಕೊಳ್ಳುತ್ತಿರುವ ನಿರ್ಧಾರಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉದ್ಧವ್ ಠಾಕ್ರೆ ಬಣದ ಪಕ್ಷ ಹೇಳಿದ ಹಾಗೆ ಕಾಂಗ್ರೆಸ್ ಕೇಳುತ್ತಿದೆ ಎಂಬುದು ಸಂಜಯ್ ನಿರುಪಮ್ ಆರೋಪವಾಗಿದೆ. ಮುಂಬೈನ ಆರು ಲೋಕಸಭೆ ಕ್ಷೇತ್ರಗಳಲ್ಲಿ ಈಗಾಗಲೇ ಉದ್ಧವ್ ಠಾಕ್ರೆ ಬಣದ ಶಿವಸೇನೆ ನಾಲ್ಕು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ.
ಇದನ್ನೂ ಓದಿ: Acharya Pramod Krishnam: ಕಾಂಗ್ರೆಸ್ ಪಕ್ಷದಿಂದ ಆಚಾರ್ಯ ಪ್ರಮೋದ್ ಕೃಷ್ಣಂ ಉಚ್ಚಾಟನೆ
ಮುಂಬೈ ಉತ್ತರ ಕ್ಷೇತ್ರದ ಮಾಜಿ ಸಂಸದರೂ ಆಗಿರುವ ಸಂಜಯ್ ನಿರುಪಮ್ ಅವರು ಈ ಬಾರಿ ಮುಂಬೈ ವಾಯವ್ಯ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದರು. ಆದರೆ, ಈ ಕ್ಷೇತ್ರಕ್ಕೆ ಈಗಾಗಲೇ ಉದ್ಧವ್ ಠಾಕ್ರೆ ಬಣದ ಶಿವಸೇನೆಯು ಅಭ್ಯರ್ಥಿಯನ್ನು ಘೋಷಿಸಿದೆ. “ಶಿವಸೇನೆಯು ಮನಸ್ಸಿಗೆ ಬಂದ ಅಭ್ಯರ್ಥಿಗಳಿಗೆ, ಮನಸ್ಸಿಗೆ ಬಂದ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡತ್ತಿದೆ. ಇಷ್ಟಾದರೂ ಕಾಂಗ್ರೆಸ್ ಮಾತ್ರ ಎಲ್ಲ ಪರಮಾಧಿಕಾರವನ್ನು ಶಿವಸೇನೆ ನೀಡಿದೆ” ಎಂಬುದಾಗಿ ಸಂಜಯ್ ನಿರುಪಮ್ ಅವರು ರಾಜ್ಯ ನಾಯಕತ್ವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಹೇಳಲಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ