ನವದೆಹಲಿ: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಭಾರಿ ವಾಕ್ಸಮರ, ದಾಖಲೆ ಬಿಡುಗಡೆ, ಆರೋಪ, ಪ್ರತ್ಯಾರೋಪ, ಕೆಸರೆರಚಾಟ ಜಾಸ್ತಿಯಾಗಿದೆ. ಚುನಾವಣೆ ಪ್ರಚಾರಕ್ಕಾಗಿ ರಾಜ್ಯಕ್ಕೆ ಬರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿ ಹಲವು ನಾಯಕರು ಕೂಡ ಕಾಂಗ್ರೆಸ್ ವಿರುದ್ಧ ವಗ್ದಾಳಿ ನಡೆಸುತ್ತಾರೆ. ಇದರ ಬೆನ್ನಲ್ಲೇ, ಬಿಜೆಪಿಯು ಕಾಂಗ್ರೆಸ್ ವಿರುದ್ಧ ವಿಡಿಯೊ ಸಿರೀಸ್ ಅಭಿಯಾನ ಆರಂಭಿಸಿದೆ. ‘ಕಾಂಗ್ರೆಸ್ ಫೈಲ್ಸ್’ (Congress Files) ಎಂಬ ಹೆಸರಿನಲ್ಲಿ ವಿಡಿಯೊವನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ 48,20,69,00,00,000 ರೂ. (48 ಲಕ್ಷ ಕೋಟಿ ರೂ.) ಲೂಟಿ ಮಾಡಿದೆ ಎಂದು ಆರೋಪಿಸಿದೆ.
ಕಾಂಗ್ರೆಸ್ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನಲಾದ ಕುರಿತು ಬಿಜೆಪಿಯು 3 ನಿಮಿಷ 4 ಸೆಕೆಂಡ್‌ಗಳಿರುವ ವಿಡಿಯೊ ಬಿಡುಗಡೆ ಮಾಡಿದೆ. ಕಾಂಗ್ರೆಸ್ ಫೈಲ್ಸ್, ಸೀಸನ್ 1, ಎಪಿಸೋಡ್ 1 ಎಂಬುದು ವಿಡಿಯೊದ ಆರಂಭವಾಗಿದ್ದು, ಕಾಂಗ್ರೆಸ್ ಅವಧಿಯ ಭ್ರಷ್ಟಾಚಾರದ ಕುರಿತು ಇನ್ನೂ ಹಲವು ವಿಡಿಯೊಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ವೆಬ್ ಸಿರೀಸ್ ಮಾದರಿಯಲ್ಲಿಯೇ ಕಿರು ವಿಡಿಯೊಗಳನ್ನು ಬಿಟ್ಟು, ಕಾಂಗ್ರೆಸ್‌ಗೆ ತಿರುಗೇಟು ನೀಡಲು ಬಿಜೆಪಿ ಯೋಜನೆ ರೂಪಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ವಿಡಿಯೊದಲ್ಲಿ ಏನಿದೆ?
ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ ಎಂಬ ಅಕ್ಷರಗಳ ಮೂಲಕ ವಿಡಿಯೊ ಆರಂಭವಾಗುತ್ತದೆ. ದೇಶದ ಜನರ 48,20,69,00,00,000 ರೂಪಾಯಿಯನ್ನು ಕಾಂಗ್ರೆಸ್ ಲೂಟಿ ಮಾಡಿದೆ. ಇಷ್ಟು ಹಣವನ್ನು ಭಾರತವು ಅಭಿವೃದ್ಧಿಗಾಗಿ ಬಳಸಬಹುದು. ದೇಶದ ಭದ್ರತೆಯಿಂದ ಹಿಡಿದು ಪ್ರತಿಯೊಂದು ಕ್ಷೇತ್ರಕ್ಕೂ ವಿನಿಯೋಗ ಮಾಡಬಹುದಿತ್ತು. 48 ಲಕ್ಷ ಕೋಟಿ ರೂಪಾಯಿಯಲ್ಲಿ 24 ಐಎನ್‌ಎಸ್ ವಿಕ್ರಾಂತ್ ನೌಕೆಗಳು, 300 ರಫೇಲ್ ಯುದ್ಧ ವಿಮಾನಗಳ ಖರೀದಿ, 1000 ಮಂಗಳಯಾನ ಮಿಷನ್‌ಗಳನ್ನು ದೇಶವು ಕೈಗೊಳ್ಳಬಹುದಿತ್ತು. ಆದರೆ, ಕಾಂಗ್ರೆಸ್ಸಿನ ಭ್ರಷ್ಟಾಚಾರಕ್ಕೆ ಸಿಲುಕಿದ ಕಾರಣ ಭಾರತವು ಅಭಿವೃದ್ಧಿಯ ಸ್ಪರ್ಧೆಯಲ್ಲಿ ಹಿಂದುಳಿಯಿತು ಎಂದು ವಿಡಿಯೊದಲ್ಲಿ ಉಲ್ಲೇಖಿಸಲಾಗಿದೆ.
ಇಲ್ಲಿದೆ ವಿಡಿಯೊ
ಯುಪಿಎ ಅವಧಿಯ ಹಗರಣಗಳ ಉಲ್ಲೇಖ
ಯುಪಿಎ ಅವಧಿಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಭ್ರಷ್ಟಾಚಾರ ಹಗರಣಗಳ ಕುರಿತು ಕೂಡ ಬಿಜೆಪಿ ಗಮನ ಸೆಳೆದಿದೆ. ಕಲ್ಲಿದ್ದಲು ಹಗರಣದಲ್ಲಿ 1.86 ಲಕ್ಷ ಕೋಟಿ ರೂ., 2ಜಿ ತರಂಗಗಳ ಹರಾಜಿನಲ್ಲಿ 1.76 ಲಕ್ಷ ಕೋಟಿ ರೂ., ನರೇಗಾದಲ್ಲಿ 10 ಲಕ್ಷ ಕೋಟಿ ರೂ., ಕಾಮನ್‌ವೆಲ್ತ್ ಗೇಮ್ಸ್ ಹಗರಣದಲ್ಲಿ 70 ಸಾವಿರ ಕೋಟಿ ರೂ., ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಡೀಲ್ ವೇಳೆ 362 ಕೋಟಿ ರೂ. ಲಂಚ ಹಾಗೂ ರೈಲ್ವೆ ಮಂಡಳಿ ಚೇರ್ಮನ್‌ಗೆ 12 ಕೋಟಿ ರೂ. ಲಂಚ ಸೇರಿ ಹಲವು ಹಗರಣಗಳನ್ನು ಬಿಜೆಪಿಯು ವಿಡಿಯೊದಲ್ಲಿ ಪ್ರಸ್ತಾಪಿಸಿದೆ.
ಇದನ್ನೂ ಓದಿ: Amit shah visit : ಅಭಿವೃದ್ಧಿಯ ಬಿಜೆಪಿ ಬೇಕಾ? ಭ್ರಷ್ಟಾಚಾರಿ ಕಾಂಗ್ರೆಸ್ ಬೇಕಾ?; ಅಮಿತ್ ಶಾ ಪ್ರಶ್ನೆ