ನವದೆಹಲಿ: 2024ರ ಲೋಕಸಭಾ ಚುನಾವಣೆ (Lok Sabha Election 2024)ಗೆ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್ (Congress)ಗೆ ದೊಡ್ಡ ಹಿನ್ನಡೆಯಾಗಿದೆ. ಕಾಂಗ್ರೆಸ್‌ನ ಬ್ಯಾಂಕ್ ಖಾತೆಗಳ ವಿರುದ್ಧ ಆದಾಯ ತೆರಿಗೆ ಇಲಾಖೆಯ ಕ್ರಮದ ವಿರುದ್ಧ ತಡೆ ಕೋರಿ ಪಕ್ಷ ಸಲ್ಲಿಸಿದ್ದ ಮನವಿಯನ್ನು ಆದಾಯ ತೆರಿಗೆ ನ್ಯಾಯ ಮಂಡಳಿ ಶುಕ್ರವಾರ ವಜಾಗೊಳಿಸಿದೆ. ಈ ಮೂಲಕ ಕೈ ಪಡೆಗೆ ಬಹು ದೊಡ್ಡ ಆಘಾತ ಎದುರಾಗಿದೆ.
ಕಾಂಗ್ರೆಸ್ ಪರವಾಗಿ ಹಾಜರಾದ ವಕೀಲ ವಿವೇಕ್ ತಂಖಾ ಅವರು ಆದೇಶವನ್ನು 10 ದಿನಗಳವರೆಗೆ ಮುಂದೂಡುವಂತೆ ನ್ಯಾಯ ಮಂಡಳಿಗೆ ಮನವಿ ಸಲ್ಲಿಸಿದ್ದರು. ಇದರಿಂದ ಪಕ್ಷವು ಹೈಕೋರ್ಟ್ ಅನ್ನು ಸಂಪರ್ಕಿಸಬಹುದು ಎಂಬ ಲೆಕ್ಕಾಚಾರ ಹಾಕಲಾಗಿತ್ತು. ಆದರೆ ನ್ಯಾಯಮಂಡಳಿ ಪೀಠವು ಅದನ್ನು ನಿರಾಕರಿಸಿದೆ.
210 ಕೋಟಿ ರೂ.ಗಳ ಆದಾಯ ತೆರಿಗೆ ಬೇಡಿಕೆಗೆ ಸಂಬಂಧಿಸಿದಂತೆ ಫೆಬ್ರವರಿ 16ರಂದು ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್‌ನ ಪ್ರಮುಖ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಯ ಕ್ರಮವನ್ನು ತಡೆಹಿಡಿಯುವಂತೆ ಕೋರಿ ಪಕ್ಷವು ನ್ಯಾಯ ಮಂಡಳಿಯ ಮೊರೆ ಹೋಗಿದೆ. ಖಾತೆಗಳನ್ನು ಸ್ಥಗಿತಗೊಳಿಸಿದರೆ ಬಿಲ್ ಪಾವತಿಸಲು ಮತ್ತು ಸಂಬಳ ನೀಡಲು ಸಾಧ್ಯವಾಗುವುದಿಲ್ಲ ಎಂದು ಎಂದು ಹೇಳಿದೆ.
”ತೆರಿಗೆ ಆದಾಯ ಪಾವತಿ ವಿಷಯವು ಕೋರ್ಟ್‌ನಲ್ಲಿದ್ದಾಗ್ಯೂ ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್‌ನ ವಿವಿಧ ಖಾತೆಗಳಿಂದ 65 ಕೋಟಿ ರೂಪಾಯಿ ವಿತ್‌ಡ್ರಾ ಮಾಡಿಕೊಂಡಿದೆ” ಎಂದು ಪಕ್ಷದ ಖಜಾಂಚಿ ಅಜಯ್ ಮಾಕೇನ್ ಫೆಬ್ರವರಿ 21ರಂದು ಆರೋಪಿಸಿದ್ದರು. ”ದಿಲ್ಲಿಯ ಕೆ.ಜಿ.ಮಾರ್ಗ್‌ನ ಬ್ಯಾಂಕ್ ಆಫ್ ಬರೋಡಾ ಶಾಖೆಯ ಖಾತೆಯಿಂದ 17.65 ಕೋಟಿ ರೂ., ದಿಲ್ಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಿಂದ 41.85 ಕೋಟಿ ರೂ. ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಮತ್ತೊಂದು ಖಾತೆಯಿಂದ 74.62 ಲಕ್ಷ ರೂಪಾಯಿ ಆದಾಯ ತೆರಿಗೆ ಇಲಾಖೆ ಪಡೆದುಕೊಂಡಿದೆ” ಎಂದು ಹೇಳಿದ್ದರು.
”ರಾಷ್ಟ್ರೀಯ ರಾಜಕೀಯ ಪಕ್ಷಗಳು ಆದಾಯ ತೆರಿಗೆ ಪಾವತಿಸುವುದು ಸಾಮಾನ್ಯವೇ? ಇಲ್ಲ. ಬಿಜೆಪಿ ಆದಾಯ ತೆರಿಗೆ ಪಾವತಿಸುತ್ತದೆಯೇ? ಇಲ್ಲ. ಹಾಗಾದರೆ ಕಾಂಗ್ರೆಸ್ ಪಕ್ಷವು 210 ಕೋಟಿ ರೂ.ಗಳ ತೆರಿಗೆ ಕಟ್ಟಬೇಕು ಎಂಬ ಬೇಡಿಕೆಯನ್ನು ಏಕೆ ಎದುರಿಸುತ್ತಿದೆ?” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: Congress Party: ಕಾಂಗ್ರೆಸ್ ಖಾತೆಗಳಿಂದ 65 ಕೋಟಿ ರೂ. ವಿತ್‌ಡ್ರಾ ಮಾಡಿದ ಐಟಿ ಇಲಾಖೆ!
ಏನಿದು ಪ್ರಕರಣ?
2017-18ರ ಹಣಕಾಸು ವರ್ಷ ಅಂದರೆ 2018-19ರ ಮೌಲ್ಯಮಾಪನ ವರ್ಷದಲ್ಲಿ ಕಾಂಗ್ರೆಸ್ 45 ದಿನಗಳ ತಡವಾಗಿ ತನ್ನ ಬ್ಯಾಂಕ್ ಖಾತೆಗಳ ವಿವರಗಳನ್ನು ಸಲ್ಲಿಸಿತ್ತು. ವಿಳಂಬ ತೆರಿಗೆ ಪಾವತಿಯ ಹಿನ್ನೆಲೆಯಲ್ಲಿ ಆದಾಯ ತೆರಿಗೆ, ಕಾಂಗ್ರೆಸ್ ಖಾತೆಗಳನ್ನು ಸೀಜ್ ಮಾಡಿತ್ತು. ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ ಬೆನ್ನಿಗೆ ನ್ಯಾಯ ಮಂಡಳಿಯ ಮೊರೆ ಹೋದ ಕಾಂಗ್ರೆಸ್, ಬ್ಯಾಂಕ್ ಖಾತೆಗಳನ್ನು ಚಾಲ್ತಿ ಮಾಡುವಂತೆ ಮನವಿ ಮಾಡಿತ್ತು. ತುರ್ತು ಅರ್ಜಿ ವಿಚಾರಣೆ ನಡೆಸಿದ ನ್ಯಾಯ ಮಂಡಳಿಯು, ಕಾಂಗ್ರೆಸ್‌ನ ಬ್ಯಾಂಕ್ ಖಾತೆಗಳಿಗೆ ಮರು ಚಾಲ್ತಿ ನೀಡುವಂತೆ ಆದಾಯ ತೆರಿಗೆ ಇಲಾಖೆಗೆ ಫೆಬ್ರವರಿಯಲ್ಲಿ ಮಧ್ಯಂತರ ಆದೇಶ ನೀಡಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ