ನವದೆಹಲಿ: ಚಂದ್ರಯಾನ 3 ರ (Chandrayaan-3) ಟಚ್ ಡೌನ್ ಪಾಯಿಂಟ್ ಅನ್ನು ಪ್ರಧಾನಿ ಮೋದಿ ‘ಶಿವ ಶಕ್ತಿ ಪಾಯಿಂಟ್’ ಎಂದು ಕರೆದ ನಂತರ ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ನಡುವೆ ಶನಿವಾರ ಭಾರಿ ವಾಕ್ಸಮರ ನಡೆದಿದೆ. ಚಂದ್ರನ ಮೇಲ್ಮೈಯನ್ನು ಹೆಸರಿಸುವ ಹಕ್ಕು ಪ್ರಧಾನಿ ಮೋದಿಗೆ (PM Modi) ಇಲ್ಲದಿರುವುದರಿಂದ ಈ ಹೆಸರು ಹಾಸ್ಯಾಸ್ಪದವಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ರಶೀದ್ ಅಲ್ವಿ ಹೇಳಿದ್ದಾರೆ. ಇಡೀ ಜಗತ್ತು ನಗುತ್ತದೆ. ಚಂದ್ರನ ಮೇಲೆ ಒಂದು ಬಿಂದುವನ್ನು ಹೆಸರಿಸುವ ಹಕ್ಕನ್ನು ಪ್ರಧಾನಿ ಮೋದಿಗೆ ನೀಡಿದವರು ಯಾರು? ನಾವು ಇಳಿದಿದ್ದೇವೆ, ಅದು ತುಂಬಾ ಒಳ್ಳೆಯದು. ನಾವು ಅದರ ಬಗ್ಗೆ ಹೆಮ್ಮೆಪಡುತ್ತೇವೆ, ಅದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ನಾವು ಚಂದ್ರ ಅಥವಾ ಬಿಂದುವಿನ ಮಾಲೀಕರಲ್ಲ ಎಂದು ರಶೀದ್ ಅಲ್ವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಜವಾಹರ್ ಪಾಯಿಂಟ್ ಎಂಬುದು 2008 ರಲ್ಲಿ ಮೊದಲ ಚಂದ್ರನ ಮಿಷನ್ ಚಂದ್ರಯಾನ 1 ಚಂದ್ರನ ಮೇಲೆ ಕ್ರ್ಯಾಶ್ ಆದ ಜಾಗಕ್ಕೆ ಇಡಲಾಗಿದೆ. ಇದೇ ಪ್ರಶ್ನೆಯನ್ನು ಅಲ್ವಿಯರಿಗೆ ಸಂದರ್ಶಕರು ಕೇಳಿದ್ದರು. ಪ್ರಧಾನಿ ಮೋದಿ ಈ ಲ್ಯಾಂಡರ್ ಇಳಿದ ಜಾಗಕ್ಕೆ ತಮ್ಮ ಹೆಸರನ್ನು ಅಥವಾ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರು ಇಟ್ಟಿಲ್ಲ ಎಂಬುದಾಗಿಯೂ ನಿರೂಪಕರು ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರಿಸಿದ ರಶೀದ್ ಅಲ್ವಿ, “ನೀವು ಜವಾಹರಲಾಲ್ ನೆಹರೂ ಅವರನ್ನು ಯಾರೊಂದಿಗೂ ಹೋಲಿಸಲು ಸಾಧ್ಯವಿಲ್ಲ. ಇಸ್ರೊ ಇರವುದಕ್ಕೆ ಜವಾಹರಲಾಲ್ ನೆಹರು ಕಾರಣ. 1962ರಲ್ಲಿ ವಿಕ್ರಮ್ ಸಾರಾಭಾಯ್ ಮತ್ತು ಪಂಡಿತ್ ಜವಾಹರಲಾಲ್ ನೆಹರು ಇಸ್ರೋವನ್ನು ಸ್ಥಾಪಿಸಿದರು. ಅದು ಸಂಪೂರ್ಣವಾಗಿ ವಿಭಿನ್ನ ವಿಷಯ. ಆದರೆ ಈಗ ಮೋದಿಜಿ ಈ ವಿಷಯವನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು ಹೇಳಿದರು.
ರಶೀದ್ ಅಲ್ವಿ ಅವರ ಹೇಳಿಕೆಗೆ ಬಿಜೆಪಿಯಿಂದ ಪ್ರತಿ ವಾಗ್ದಾಳಿ ನಡೆದಿದೆ. ಪಕ್ಷದ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಟ್ವೀಟ್ ಮಾಡಿ ಕಾಂಗ್ರೆಸ್ ತನ್ನ ‘ಹಿಂದೂ ವಿರೋಧಿ’ ವ್ಯಕ್ತಿತ್ವವನ್ನು ಆಗಾಗ ಬಹಿರಂಗಪಡಿಸುತ್ತದೆ ಎಂದು ಹೇಳಿದ್ದಾರೆ. ಇದೇ ಪಕ್ಷವು ರಾಮನ ಅಸ್ತಿತ್ವವನ್ನು ಪ್ರಶ್ನಿಸುತ್ತದೆ, ರಾಮ ಮಂದಿರವನ್ನು ವಿರೋಧಿಸುತ್ತದೆ ಮತ್ತು ಹಿಂದೂಗಳನ್ನು ನಿಂದಿಸುತ್ತದೆ. ಶಿವ ಶಕ್ತಿ ಪಾಯಿಂಟ್ ಮತ್ತು ತಿರಂಗಾ ಪಾಯಿಂಟ್ ಎಂಬ ಎರಡೂ ಹೆಸರುಗಳನ್ನು ದೇಶಕ್ಕೆ ಜೋಡಿಸಲಾಗಿದೆ. ರಶೀದ್ ಅಲ್ವಿ ಇದನ್ನು ಏಕೆ ಹಾಸ್ಯಾಸ್ಪದವೆಂದು ಭಾವಿಸುತ್ತಾರೆ? ಕಾಂಗ್ರೆಸ್ ಕುಟುಂಬ ರಾಜಕಾರಣ ಮಾಡುತ್ತದೆ. ಅವರು ಗಾಂಧಿ ಕುಟುಂಬವನ್ನು, ಜವಾಹರಲಾಲ್ ನೆಹರೂ ಅವರನ್ನು ಮಾತ್ರ ಹೊಗಳುತ್ತಾರೆ. ವಿಕ್ರಮ್ ಲ್ಯಾಂಡರ್ ವಿಕ್ರಮ್ ಸಾರಾಭಾಯ್ ಅವರನ್ನು ಹೆಸರಿಡಲಾಗಿದೆ ಎಂದು ಪೂನಾವಾಲಾ ತಿರುಗೇಟು ಕೊಟ್ಟಿದ್ದಾರೆ.
ಯುಪಿಎ ಇದ್ದಿದ್ದರೆ, ಅವರು ಚಂದ್ರಯಾನ 2 ಮತ್ತು 3 ಅನ್ನು ಎಂದಿಗೂ ಕಳುಹಿಸುತ್ತಿರಲಿಲ್ಲ. ಅವರು ಹಾಗೆ ಮಾಡಿದ್ದರೆ ಅವರು ಅದನ್ನು ಇಂದಿರಾ ಪಾಯಿಂಟ್ ಮತ್ತು ರಾಜೀವ್ ಪಾಯಿಂಟ್ ಎಂದು ಹೆಸರಿಸುತ್ತಿದ್ದರು” ಎಂದು ಬಿಜೆಪಿ ನಾಯಕ ತಿರುಗೇಟು ಕೊಟ್ಟಿದ್ದಾರೆ.
ಜವಾಹರ್ ಪಾಯಿಂಟ್ ಎಂದರೇನು?
ಜವಾಹರ್ ಸ್ಥಲ್ ಎಂದೂ ಕರೆಯಲ್ಪಡುವ ಜವಾಹರ್ ಪಾಯಿಂಟ್ ಚಂದ್ರನ ಮೇಲಿನ ಶ್ಯಾಕಲ್ಟನ್ ಕುಳಿ ಬಳಿಯ ಪ್ರದೇಶವಾಗಿದ್ದು, ಅಲ್ಲಿ ಇಸ್ರೋದ ಮೂನ್ ಇಂಪ್ಯಾಕ್ಟ್ ಪ್ರೋಬ್ ಮಾಡಲಾಗಿತ್ತು ಈ ಜಾಗಕ್ಕೆ ಜವಾಹರಲಾಲ್ ನೆಹರೂ ಅವರ ಜನ್ಮದಿನವಾದ ನವೆಂಬರ್ 14 ರಂದು ಜವಾಹರ್ ಪಾಯಿಂಟ್ ಎಂದು ಹೆಸರಿಡಲಾಗಿತ್ತು.
ತಿರಂಗಾ ಪಾಯಿಂಟ್ ಎಂದರೇನು?
ಚಂದ್ರಯಾನ 3 ಯಶಸ್ವಿಗೊಳಿಸಿದ ಇಸ್ರೋ ತಂಡವನ್ನು ಭೇಟಿ ಮಾಡಲು ಮತ್ತು ಅಭಿನಂದಿಸಲು ಪ್ರಧಾನಿ ಮೋದಿ ಶನಿವಾರ ತಮ್ಮ ವಿದೇಶ ಪ್ರವಾಸದಿಂದ ನೇರವಾಗಿ ಬೆಂಗಳೂರಿನ ಇಸ್ರೋ ಕಚೇರಿಗೆ ಭೇಟಿ ನೀಡಿದ್ದರು. ಅಲ್ಲಿ ಮೋದಿ ಮೂರು ಘೋಷಣೆಗಳನ್ನು ಮಾಡಿದ್ದಾರೆ. ಚಂದ್ರಯಾನ 3 ರ ಟಚ್ಡೌನ್ ಪಾಯಿಂಟ್ ಅನ್ನು ಶಿವ ಶಕ್ತಿ ಪಾಯಿಂಟ್ ಎಂದು, ಚಂದ್ರಯಾನ 2 ರ ಟಚ್ಡೌನ್ ಪಾಯಿಂಟ್ ಅನ್ನು ತಿರಂಗಾ ಪಾಯಿಂಟ್ ಹಾಗೂ ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸುವುದಾಗಿ ಘೋಷಿಸಿದ್ದರು.