Site icon Vistara News

Congress Manifesto: ಕಾಂಗ್ರೆಸ್‌ ಪ್ರಣಾಳಿಕೆ ಬಗ್ಗೆ ಅಪಪ್ರಚಾರ; ವ್ಯಕ್ತಿ ಅರೆಸ್ಟ್‌-ಬಿಜೆಪಿ ಕಿಡಿ

Congress Manifesto

ಗೋವಾ: ಕೈ-ಕಮಲ ಪಾಳಯದಲ್ಲಿ ಪರಸ್ಪರ ವಾಕ್ಸಮರಕ್ಕೆ ಕಾರಣವಾಗಿರುವ ಕಾಂಗ್ರೆಸ್‌ ಪ್ರಣಾಳಿಕೆ (Congress Manifesto) ವಿಚಾರಕ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಕಾಂಗ್ರೆಸ್‌ ಪ್ರಣಾಳಿಕೆಯನ್ನು ಟೀಕಿಸಿ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿದ್ದ ವ್ಯಕ್ತಿಯೊಬ್ಬನನ್ನು ಕರ್ನಾಟಕ ಪೊಲೀಸರು(Congress Police) ಗೋವಾದಲ್ಲಿ ಅರೆಸ್ಟ್‌ ಮಾಡಿದ್ದು, ಬಿಜೆಪಿ ಕಾಂಗ್ರೆಸ್‌ ನಡುವೆ ಮತ್ತೆ ವಾಕ್ಸಮರಕ್ಕೆ ಕಾರಣವಾಗಿದೆ. ವಿನೀತ್‌ ನಾಯ್ಕ್‌ ಎಂಬಾತನನ್ನು ಪೊಲೀಸರು ಗೋವಾದಲ್ಲಿ ಬಂಧಿಸಿದ್ದಾರೆ. ವಿನೀತ್‌ ವಿರುದ್ಧ ಸುಳ್ಳು ಮಾಹಿತಿ ಹರಡಿ ಕೋಮು ಘರ್ಷಣೆ (Communal disturbance)ಗೆ ಕುಮ್ಮಕ್ಕು ನೀಡಿಡ ಆರೋಪ ಕೇಳಿ ಬಂದಿದ್ದು, ಕರ್ನಾಟಕ ಶ್ರೀರಾಮಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಏನಿದು ಪ್ರಕರಣ?

ಕಾಂಗ್ರೆಸ್‌ ಪ್ರಣಾಳಿಕೆ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದ ಬಲಪಂಥೀಯ ವಿಚಾರಧಾರೆ ಹೊಂದಿರುವ ವಿನೀತ್‌, ಕಾಂಗ್ರೆಸ್‌ ಹಿಂದೂಗಳ ಸಂಪತ್ತನ್ನು ಕಸಿದು ಕೇವಲ ಮುಸ್ಲಿಮರಿಗೆ ಹಂಚಲು ಸಂಚು ರೂಪಿಸಿದೆ. ಕಾಂಗ್ರೆಸ್‌ ಎಸ್‌ಸಿ/ಎಸ್‌ಟಿ ಸೇರಿದಂತೆ ಎಲ್ಲಾ ಹಿಂದೂಗಳನ್ನು ದ್ವೇಷಿಸುತ್ತದೆ. ಎಸ್‌ಸಿ, ಎಸ್‌ಟಿಗಳ ಅಭಿವೃದ್ಧಿಗಾಗಿ ಶ್ರಮಿಸುವ ಬಗ್ಗೆ ಕಾಂಗ್ರೆಸ್‌ ಸುಳ್ಳು ಹೇಳುತ್ತಿದೆ. ಹೀಗಾಗಿ ಕಾಂಗ್ರೆಸ್‌ನವರ ಮುಖಕ್ಕೆ ಅವರ ಪ್ರಣಾಳಿಕೆಯನ್ನು ಎಸೆಯಿರಿ ಎಂದು ವಿಡಿಯೋ ಸಮೇತ ಟ್ವೀಟ್‌ ಮಾಡಿದ್ದರು. ಇದಾದ ಬಳಿಕ ಏ. 22 ಮತ್ತು ಏ. 29ರಂದು ವಿನೀತ್‌ ನಾಯ್ಕ್‌ ವಿರುದ್ಧ ದೂರು ದಾಖಲಾಗಿತ್ತು.

ಬೆಂಗಳೂರಿನ ನಿವಾಸಿ ಮತ್ತು ಕಾಂಗ್ರೆಸ್ ಕಾರ್ಯಕರ್ತ ಜೆ ಸರವಣನ್ ಅವರು ಏಪ್ರಿಲ್ 29 ರಂದು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದರು. ಸೈಬರ್ ಕ್ರೈಂ ಪೊಲೀಸರು ಎಕ್ಸ್ ಬಳಕೆದಾರರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 (ಎ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ 66 (ಸಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಎರಡು ಸಮುದಾಯಗಳ ನಡುವೆ ದ್ವೇಷ ಹುಟ್ಟುಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಯನ್ನು ತಿರುಚಿ ಪೋಸ್ಟ್​ ಮಾಡಲಾಗಿದೆ ಎಂದು ದೂರಲಾಗಿತ್ತು. ಇನ್ನು ವಿನೀತ್‌ ಟ್ವೀಟ್‌ ಮಾಡಿದ ಕೆಲವೇ ಗಂಟೆಗಳಲ್ಲಿ ಅದನ್ನು ಡಿಲೀಟ್‌ ಮಾಡಿದ್ದ.

ಪ್ರಕರಣ ದಾಖಲಿಸಿಕೊಂಡು ವಿನೀತ್‌ ಪತ್ತೆಗೆ ಬಲೆ ಬೀಸಿದ್ದ ಪೊಲೀಸರು ಶನಿವಾರ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮತ್ತೊಂದೆಡೆ ನನ್ನ ತಂದೆಯನ್ನು ಬೆಂಗಳೂರು ಪೊಲೀಸರು ಇದ್ದಕ್ಕಿದ್ದಂತೆ ಬಂಧಿಸಿ ಕರೆದೊಯ್ದಿದ್ದಾರೆ, ಅವರನ್ನು ಬಿಡುಗಡೆ ಮಾಡಿ ಎಂದು ಮಗ ನಾಗೇಶ್​ ನಾಯ್ಕ್​ ಟ್ವೀಟ್​ ಮಾಡಿದ್ದಾರೆ.

ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ಬಿಜೆಪಿ ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಬಿಜೆಪಿ ರಾಷ್ಟ್ರೀಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಎಕ್ಸ್‌ನಲ್ಲಿ, ಕರ್ನಾಟಕ ಪೊಲೀಸರು ಗೋವಾದಲ್ಲಿ ವಿನೀತ್‌ನನ್ನು ಬಂಧಿಸಿದ್ದಾರೆ. ನಾವು ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಅವರು ಎಲ್ಲಾ ಕಾನೂನು ಬೆಂಬಲವನ್ನು ನೀಡುತ್ತೇವೆ, ಕಾಂಗ್ರೆಸ್ ಅರಾಜಕತೆಯನ್ನು ಹೊರಹಾಕಿದೆ ಎಂದು ಬರೆದಿದ್ದಾರೆ.
ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಪೋಸ್ಟ್​ ಮಾಡಿ ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಅಧಿಕಾರ ದುರ್ಬಳಕೆಯಾಗಿದೆ. ನಾವು ನ್ಯಾಯಾಲಯದ ಒಳಗೆ ಮತ್ತು ಹೊರಗೆ ಹೋರಾಡಲು ಸಿದ್ಧರಿದ್ದೇವೆ ಎಂದು ಬರೆದಿದ್ದಾರೆ. ಮತ್ತೊಂದೆಡೆ ಕೇಂದ್ರ ಸಚಿವ ಸ್ಮೃತಿ ಇರಾನಿ ಕೂಡ ವಿನೀತ್‌ ಬೆಂಬಲಕ್ಕೆ ನಿಂತಿದ್ದಾರೆ.

ಇದನ್ನೂ ಓದಿ:ಮೋದಿಯವರೇ, 3ನೇ ಬಾರಿ ಪ್ರಧಾನಿಯಾಗಿ ದೇಶ ಮುನ್ನಡೆಸಿ; ಜನುಮ ದಿನದ ಶುಭಾಶಯ ಕೋರಿದ ಪ್ರಧಾನಿಗೆ ದೇವೇಗೌಡರ ಕೃತಜ್ಞತೆ

Exit mobile version