ರಾಯ್‌ಪುರ: “ಭಾರತವನ್ನು ಹಿಂದು ರಾಷ್ಟ್ರ ಮಾಡಬೇಕು” ಎಂಬುದಾಗಿ ಬಿಜೆಪಿಯ ಕೆಲ ನಾಯಕರು, ಹಿಂದು ಸಂಘಟನೆಗಳ ಮುಖಂಡರು ಹೇಳುತ್ತಲೇ ಇರುತ್ತಾರೆ. ಧರ್ಮದ ಹೆಸರಿನಲ್ಲಿ ದೇಶ ವಿಭಜನೆಯಾಗಿರುವುದನ್ನು ಉಲ್ಲೇಖಿಸಿ ಇಂತಹ ಹೇಳಿಕೆಗಳು ಬರುತ್ತಲೇ ಇರುತ್ತವೆ. ಬಿಜೆಪಿ ನಾಯಕರು, ಹಿಂದು ಸಂಘಟನೆಗಳ ಮುಖಂಡರು ಮಾತ್ರವಲ್ಲ, ಈಗ ಕಾಂಗ್ರೆಸ್ ನಾಯಕಿಯೊಬ್ಬರು ಕೂಡ ಹಿಂದು ರಾಷ್ಟ್ರ ನಿರ್ಮಾಣಕ್ಕೆ (Hindu Rashtra) ಕರೆ ನೀಡಿದ್ದಾರೆ. “ಭಾರತವನ್ನು ಹಿಂದು ರಾಷ್ಟ್ರ ಮಾಡಲು ಎಲ್ಲರೂ ಒಗ್ಗೂಡಬೇಕು” ಎಂದು ಛತ್ತೀಸ್‌ಗಢ ಕಾಂಗ್ರೆಸ್ ಶಾಸಕಿ ಅನಿತಾ ಶರ್ಮಾ ಕರೆ ನೀಡಿದ್ದಾರೆ.
ಪುರಿ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ರಾಯ್‌ಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅನಿತಾ ಶರ್ಮಾ, ಹಿಂದು ರಾಷ್ಟ್ರ ನಿರ್ಮಾಣದ ಪ್ರತಿಪಾದನೆ ಮಾಡಿದರು. “ನಾವೆಲ್ಲರೂ ಇಲ್ಲಿ ಒಗ್ಗೂಡಿದ್ದೇವೆ. ಇನ್ನು ಮುಂದೆ, ಭಾರತವನ್ನು ಹಿಂದು ರಾಷ್ಟ್ರವನ್ನಾಗಿ ನಿರ್ಮಿಸಲು ಪಣ ತೊಡಬೇಕು. ಇಂತಹ ಮಹೋನ್ನತ ಧ್ಯೇಯದೊಂದಿಗೆ ಹಿಂದುಗಳೆಲ್ಲರೂ ಒಗ್ಗೂಡಿದರೆ ಮಾತ್ರ ದೇಶವನ್ನು ಹಿಂದು ರಾಷ್ಟ್ರವನ್ನಾಗಿ ಮಾಡಲು ಸಾಧ್ಯ” ಎಂದು ಹೇಳಿದರು. ಇವರು ಧಾರ್‌ಸಿವಾ ವಿಧಾನಸಭೆ ಕ್ಷೇತ್ರದ ಶಾಸಕರಾಗಿದ್ದಾರೆ.
ಅಂತರ ಕಾಯ್ದುಕೊಂಡ ಕಾಂಗ್ರೆಸ್
ಅನಿತಾ ಶರ್ಮಾ ಅವರು ಹಿಂದು ರಾಷ್ಟ್ರ ನಿರ್ಮಾಣಕ್ಕೆ ಕರೆ ನೀಡಿದ್ದು ಕಾಂಗ್ರೆಸ್‌ಗೆ ಮುಜುಗರವಾದಂತಿದೆ. ಛತ್ತೀಸ್‌ಗಢ ಕಾಂಗ್ರಸ್ ಸಂವಹನ ವಿಭಾಗದ ಮುಖ್ಯಸ್ಥ ಸುಶೀಲ್ ಆನಂದ್ ಶುಕ್ಲಾ ಅವರು ಅನಿತಾ ಶರ್ಮಾ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು, “ಹಿಂದು ರಾಷ್ಟ್ರದ ಕುರಿತು ಅನಿತಾ ಶರ್ಮಾ ಅವರು ನೀಡಿದ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ” ಎಂದು ಹೇಳಿದರು.
“ಕಾಂಗ್ರೆಸ್ ಪಕ್ಷವು ಎಂದಿಗೂ ಸಂವಿಧಾನದ ಪರವಾಗಿದೆ ಹಾಗೂ ಸಂವಿಧಾನವನ್ನು ಪಾಲಿಸುತ್ತದೆ. ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್, ಪಂಡಿತ್ ಜವಾಹರ ಲಾಲ್ ನೆಹರು, ಡಾ.ರಾಜೇಂದ್ರ ಪ್ರಸಾದ್ ಅವರು ರಚಿಸಿರುವ ಸಂವಿಧಾನದಲ್ಲಿ ಜಾತ್ಯತೀತದ ಕುರಿತು ಉಲ್ಲೇಖವಿದೆ. ಆ ಜಾತ್ಯತೀತ ಮನೋಭಾವ ನಮ್ಮಲ್ಲಿದೆ. ನಾವು ಸಂವಿಧಾನದಲ್ಲಿ ಮಾತ್ರ ನಂಬಿಕೆ ಇಟ್ಟಿದ್ದೇವೆ” ಎಂದು ಪರೋಕ್ಷವಾಗಿ ಅನಿತಾ ಶರ್ಮಾ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ: Dhirendra Shastri: ಹಿಂದುಗಳು ಒಗ್ಗಟ್ಟಾದರೆ ಪಾಕಿಸ್ತಾನವನ್ನೂ ಹಿಂದು ರಾಷ್ಟ್ರ ಮಾಡಬಹುದು: ಧೀರೇಂದ್ರ ಶಾಸ್ತ್ರಿ
ಹೇಳಿಕೆ ತಿರುಚಲಾಗಿದೆ ಎಂದ ಶರ್ಮಾ
ಭಾರತ ಹಿಂದು ರಾಷ್ಟ್ರವಾಗಲು ಎಲ್ಲರೂ ಒಗ್ಗೂಡಬೇಕು ಎಂದು ಹೇಳಿಕೆ ನೀಡಿದ ಬಳಿಕ ಕಾಂಗ್ರೆಸ್ ಮುಖಂಡರಿಂದಲೇ ಆಕ್ಷೇಪವಾದ ಬೆನ್ನಲ್ಲೇ ಅನಿತಾ ಶರ್ಮಾ ಅವರು ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ. “ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ದೇಶದಲ್ಲಿರುವ ಎಲ್ಲರೂ ಒಗ್ಗೂಡಬೇಕು ಎಂದು ಹೇಳಿದ್ದೇನೆ ಅಷ್ಟೆ. ನಾನು ಗಾಂಧೀಜಿಯವರ ಅನುಯಾಯಿಯಾಗಿದ್ದು, ದ್ವೇಷ ನಿಲ್ಲಬೇಕು, ಎಲ್ಲ ಧರ್ಮದವರು ಸಹೋದರರಂತೆ ಜೀವನ ಸಾಗಿಸಬೇಕು ಎಂಬುದು ನನ್ನ ನಂಬಿಕೆ” ಎಂದು ಹೇಳಿದ್ದಾರೆ.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ