Site icon Vistara News

Anurag Thakur: ಅನುರಾಗ್‌ ಠಾಕೂರ್‌ ‘ಜಾತಿ’ ಅಸ್ತ್ರಕ್ಕೆ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಹಕ್ಕುಚ್ಯುತಿ ಪ್ರತ್ಯಸ್ತ್ರ!

Anurag Thakur

ನವದೆಹಲಿ: ಬಿಜೆಪಿ ಸಂಸದ ಅನುರಾಗ್‌ ಠಾಕೂರ್‌ (Anurag Thakur) ಅವರು ರಾಹುಲ್‌ ಗಾಂಧಿ (Rahul Gandhi) ಅವರಿಗೆ ತಮ್ಮ ಜಾತಿ ಎಂಬುದೇ ಗೊತ್ತಿಲ್ಲ ಎಂಬುದಾಗಿ ಲೋಕಸಭೆಯಲ್ಲಿ ನೀಡಿದ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಅನುರಾಗ್‌ ಠಾಕೂರ್‌ ವಿರುದ್ಧ ಪ್ರತಿಪಕ್ಷಗಳ ನಾಯಕರು ಮುಗಿಬಿದ್ದಿದ್ದಾರೆ. ಇದರ ಬೆನ್ನಲ್ಲೇ, ಕಾಂಗ್ರೆಸ್‌ ಸಂಸದ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವಿರುದ್ಧ ಹಕ್ಕುಚ್ಯುತಿ (Privilege Motion) ಮಂಡಿಸಿದ್ದಾರೆ. ಸದನದಲ್ಲಿ ಕಾಂಗ್ರೆಸ್‌ ಸಂಸದರೂ ಆಗಿರುವ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಗೆ ಅವಮಾನ ಮಾಡಲಾಗಿದೆ ಎಂದು ಚರಣ್‌ಜಿತ್‌ ಸಿಂಗ್‌ ಚನ್ನಿ ಅವರು ಹಕ್ಕುಚ್ಯುತಿ ಮಂಡಿಸಿದ್ದಾರೆ.

ನರೇಂದ್ರ ಮೋದಿ ಅವರು ಅನುರಾಗ್‌ ಠಾಕೂರ್‌ ಅವರು ಸಂಸತ್‌ನಲ್ಲಿ ಮಾಡಿದ ಭಾಷಣಕ್ಕೆ ಮೆಚ್ಚುಗೆ ಸೂಚಿಸಿದ್ದರು. ಇಂಡಿಯಾ ಒಕ್ಕೂಟದ ಮುಖವಾಡವನ್ನು ಅನುರಾಗ್‌ ಠಾಕೂರ್‌ ಅವರು ಹೇಗೆ ಬಯಲಿಗೆಳೆದಿದ್ದಾರೆ ನೋಡಿ ಎಂದು ಕರೆ ನೀಡಿದ್ದ ಮೋದಿ, ಅನುರಾಗ್‌ ಠಾಕೂರ್‌ ಅವರ ಭಾಷಣದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಾಗಾಗಿ, ಪ್ರಧಾನಿ ವಿರುದ್ಧ ಕಾಂಗ್ರೆಸ್‌ ಹಕ್ಕುಚ್ಯುತಿ ಮಂಡಿಸಿದೆ.

ಹಕ್ಕುಚ್ಯುತಿ ಎಂದರೇನು?

ದೇಶದ ಸಂಸದರು, ರಾಜ್ಯಸಭೆ ಸದಸ್ಯರು, ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರ ಹಕ್ಕುಗಳಿಗೆ ಧಕ್ಕೆಯುಂಟಾದಾಗ ಮಂಡಿಸುವ ವಿಶೇಷ ಅಧಿಕಾರವೇ ಹಕ್ಕುಚ್ಯುತಿಯಾಗಿದೆ. ಇದನ್ನು ವೈಯಕ್ತಿಕವಾಗಿ ಅಥವಾ ಸಾಮೂಹಿಕವಾಗಿ ಬಳಸಬಹುದಾಗಿದೆ. ಹಕ್ಕುಚ್ಯುತಿ ಮಂಡಿಸಿದ ಬಳಿಕ ಅದು ಸಾಬೀತಾದರೆ ಸಂಸತ್ತು ಹಾಗೂ ಶಾಸನಸಭೆಯ ಕಾನೂನಿನ ಅನ್ವಯ ಕ್ರಮ ತೆಗೆದುಕೊಳ್ಳುವ ಅವಕಾಶವಿದೆ.

ಅನುರಾಗ್‌ ಠಾಕೂರ್‌ ಹೇಳಿದ್ದೇನು?

ಸಂಸತ್‌ನಲ್ಲಿ ಮಾತನಾಡಿದ ಅನುರಾಗ್‌ ಠಾಕೂರ್‌, “ದೇಶದಲ್ಲಿ ಜಾತಿಗಣತಿ ಬಗ್ಗೆ ತುಂಬ ಮಾತನಾಡುತ್ತಾರೆ. ಜಾತಿಗಣತಿಯನ್ನು ಲೋಕಸಭೆಯಲ್ಲಿ ಮಂಡಿಸುತ್ತೇವೆ ಎನ್ನುತ್ತಾರೆ. ಆದರೆ, ಜಾತಿಗಣತಿ ಬಗ್ಗೆ ಮಾತನಾಡುವವರಿಗೇ ತಮ್ಮ ಜಾತಿ ಯಾವುದು ಎಂದು ಗೊತ್ತಿಲ್ಲ” ಎಂಬುದಾಗಿ ಅನುರಾಗ್‌ ಠಾಕೂರ್‌ ಟೀಕಿಸಿದ್ದರು. ಇದಕ್ಕೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಅವರು ತಿರುಗೇಟು ನೀಡಿದ್ದರು. “ಬೇರೆಯವರ ಜಾತಿಯನ್ನು ಕೇಳುವುದು ಎಷ್ಟು ಸರಿ” ಎಂದು ಹೇಳಿದ್ದರು.

ಅನುರಾಗ್‌ ಠಾಕೂರ್‌ ಹೇಳಿಕೆಗೆ ರಾಹುಲ್‌ ಗಾಂಧಿ ಪ್ರತ್ಯುತ್ತರ ನೀಡಿದರು. “ನೀವು ನನ್ನನ್ನು ಎಷ್ಟು ಅವಮಾನಿಸುತ್ತೀರೋ ಅವಮಾನಿಸಿ. ಆದರೆ, ನಾವು ಸಂಸತ್‌ನಲ್ಲಿ ಜಾತಿಗಣತಿ ವಿಧೇಯಕ ಮಂಡಿಸುತ್ತೇವೆ ಎಂಬುದನ್ನು ನೀವು ಮರೆಯದಿರಿ” ಎಂದರು. “ಅನುರಾಗ್‌ ಠಾಕೂರ್‌ ಅವರು ನನ್ನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ನನ್ನನ್ನು ಅವಮಾನಿಸಿದ್ದಾರೆ. ಆದರೆ, ನಾನು ಅವರು ಕ್ಷಮೆ ಕೇಳಿ ಎಂಬುದಾಗಿ ಆಗ್ರಹಿಸುವುದಿಲ್ಲ. ಎಷ್ಟು ಬೇಕಾದರೂ ಅವಮಾನ ಮಾಡಲಿ” ಎಂದ್ದಿದ್ದರು.

ಸಂಸತ್‌ನಲ್ಲಿ ಸೋಮವಾರ (ಜುಲೈ 29) ರಾಹುಲ್‌ ಗಾಂಧಿ ಅವರು ಕೇಂದ್ರದ ವಿರುದ್ಧ ಹರಿಹಾಯ್ದಿದ್ದರು. ದೇಶದ ಜನರ ಸುತ್ತ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೆಣೆದ ಚಕ್ರವ್ಯೂಹವನ್ನು ನಾವು ಭೇದಿಸುತ್ತೇವೆ. ಚಕ್ರವ್ಯೂಹವನ್ನು ನಮಗೆ ಭೇದಿಸುವುದು ಗೊತ್ತಿದೆ. ಯಾವ ಜಾತಿಗಣತಿ ಎಂದರೆ ನೀವು (ಬಿಜೆಪಿ) ಹೆದರುತ್ತೀರೋ, ಅದೇ ಜಾತಿಗಣತಿಯನ್ನು ಇದೇ ಸದನದಲ್ಲಿ ನಾವು ಮಂಡಿಸುತ್ತೇವೆ. ನಿಮಗೆ ಇಷ್ಟ ಇದೆಯೋ ಇಲ್ಲವೋ, ನಾವು ಇದೇ ಸದನದಲ್ಲಿ ಜಾತಿಗಣತಿಯನ್ನು ಮಂಡಿಸುತ್ತೇವೆ. ದೇಶದ ಜನ ಅರ್ಜುನನ ರೀತಿ ಚಕ್ರವ್ಯೂಹವನ್ನು ಭೇದಿಸಲಿದ್ದಾರೆ ಎಂದು ರಾಹುಲ್‌ ಗಾಂಧಿ ಹೇಳಿದರು.

ಇದನ್ನೂ ಓದಿ: Anurag Thakur: ಇಂಡಿಯಾ ಕೂಟದ ಕೊಳಕು ರಾಜಕಾರಣ ತೆರೆದಿಟ್ಟ ಅನುರಾಗ್ ಠಾಕೂರ್; ಈ ವಿಡಿಯೊ ತಪ್ಪದೇ ನೋಡಿ ಎಂದ ಮೋದಿ!

Exit mobile version