ನವ ದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ʻರಾಷ್ಟ್ರಪತ್ನಿʼ ಎಂದು ಉಲ್ಲೇಖಿಸಿ ಸರ್ವತ್ರ ಟೀಕೆಗೆ ಒಳಗಾದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ಅವರು ಅಧಿಕೃತವಾಗಿ ಕ್ಷಮೆ ಯಾಚಿಸಿದ್ದಾರೆ. ಶುಕ್ರವಾರ ರಾಷ್ಟ್ರಪತಿಗಳಿಗೆ ನೇರ ಪತ್ರ ಬರೆದಿರುವ ಅವರು ಕ್ಷಮಿಸಿ ಬಿಡಿ ಎಂದು ಮನವಿ ಮಾಡಿದ್ದಾರೆ.
ʻʻನಿಮ್ಮ ಸ್ಥಾನದ ಬಗ್ಗೆ ವಿವರಿಸುವಾಗ ತಪ್ಪಾದ ಪದವನ್ನು ಪ್ರಮಾದವಶಾತ್ ಬಳಸಿದ್ದಕ್ಕೆ ವಿಷಾದ ವ್ಯಕ್ತಪಡಿಸುವುದಕ್ಕಾಗಿ ಈ ಪತ್ರ ಬರೆಯುತ್ತಿದ್ದೇನೆ. ಇದು ಬಾಯ್ತಪ್ಪಿನಿಂದ ಬಂದುರುವ ಮಾತು ಎಂದು ನಾನು ನಿಮಗೆ ಭರವಸೆ ಕೊಡುತ್ತೇನೆ. ಈ ಬಗ್ಗೆ ಕ್ಷಮೆ ಯಾಚಿಸುತ್ತೇನೆ ಮತ್ತು ಇದನ್ನು ಸ್ವೀಕರಿಸಿ ಕ್ಷಮೆ ನೀಡಬೇಕುʼʼ ಎಂದು ಅಧೀರ್ ರಂಜನ್ ಚೌಧುರಿ ಅವರು ಪತ್ರದಲ್ಲಿ ವಿನಂತಿಸಿದ್ದಾರೆ.
ಅಧೀರ್ ರಂಜನ್ ಚೌಧುರಿ ಅವರು ವಿಡಿಯೊ ಕ್ಲಿಪ್ ಒಂದರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಉಲ್ಲೇಖಿಸಿದ್ದರು. ಈ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಸಂಸದರು ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಿದರು. ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವು ಬಿಜೆಪಿ ನಾಯಕರು ಚೌಧುರಿ ಅವರ ಹೇಳಿಕೆಗಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದರು.
ಈ ನಡುವೆ ಬೆಹ್ರಾಂಪುರದ ಸಂಸದರಾಗಿರುವ ಅಧೀರ್ ರಂಜನ್ ಚೌಧುರಿ ಅವರು ನಾನು ರಾಷ್ಟ್ರಪತಿಗಳ ಕ್ಷಮೆಯನ್ನು ಕೋರುತ್ತೇನೆ. ಆದರೆ, ಒಂದು ಸಣ್ಣ ಬಾಯಿ ತಪ್ಪಿದ ಮಾತಿಗೆ ಪ್ರತಿಭಟನೆ ನಡೆಸುತ್ತಿರುವ ವಂಚಕ ಬಿಜೆಪಿ ಸಂಸದರ ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ್ದರು. ಬಿಜೆಪಿಯವರು ನನ್ನ ಹೇಳಿಕೆಯನ್ನು ಅವಶ್ಯಕತೆಯಿಂದ ದೊಡ್ಡದು ಮಾಡಿದ್ದಾರೆ ಎನ್ನುವುದು ಅಧೀರ್ ರಂಜನ್ ಆರೋಪ.
ಹಿಂದಿನ ಸುದ್ದಿ| ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು ಭೇಟಿಯಾಗಿ ಕ್ಷಮೆ ಕೇಳಲು ಸಿದ್ಧ ಎಂದ ಅಧೀರ್ ಚೌಧರಿ