Site icon Vistara News

Shashi Tharoor: ಕಾಂಗ್ರೆಸ್‌ ಸಂಸದ ಶಶಿ ತರೂರ್‌ಗೆ ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ

Shashi Tharoor

Congress MP Shashi Tharoor conferred France's highest civilian honour

ನವದೆಹಲಿ: ಕೇರಳದ ತಿರುವನಂತಪುರಂ ಕಾಂಗ್ರೆಸ್‌ ಸಂಸದ, ಲೇಖಕರೂ ಆಗಿರುವ ಶಶಿ ತರೂರ್‌ (Shashi Tharoor) ಅವರಿಗೆ ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ದೆಹಲಿಯಲ್ಲಿರುವ ಫ್ರಾನ್ಸ್‌ ರಾಯಭಾರ ಕಚೇರಿಯಲ್ಲಿ ಶಶಿ ತರೂರ್‌ ಅವರಿಗೆ ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ (France’s Highest Civilian Honour) ಚೆವಲೈರ್‌ ಡೆ ಲಾ ಲೀಜನ್‌ ಡಿ ಹಾನರ್‌ ಅಥವಾ ನೈಟ್‌ ಆಫ್‌ ದಿ ಲೀಜನ್‌ ಆಫ್‌ ಆನರ್‌ (Knight of the Legion of Honour) ನೀಡಿ ಗೌರವಿಸಲಾಗಿದೆ.

ಫ್ರಾನ್ಸ್‌ ರಾಯಭಾರ ಕಚೇರಿಯಲ್ಲಿ ಮಂಗಳವಾರ (ಫೆಬ್ರವರಿ 20) ನಡೆದ ಕಾರ್ಯಕ್ರಮದಲ್ಲಿ ಫ್ರಾನ್ಸ್‌ ಸೆನೆಟ್‌ ಅಧ್ಯಕ್ಷ ಗೆರಾರ್ಡ್‌ ಲಾರ್ಚರ್‌ ಅವರು ಶಶಿ ತರೂರ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. “ಶಶಿ ತರೂರ್‌ ಅವರು ಭಾರತ ಹಾಗೂ ಫ್ರಾನ್ಸ್‌ ಒಪ್ಪಂದ, ಸಂಬಂಧ ವೃದ್ಧಿಗೆ ಯತ್ನ, ಅಂತಾರಾಷ್ಟ್ರೀಯ ಶಾಂತಿ ಹಾಗೂ ಸಹಕಾರದ ಕುರಿತು ಅವರು ಹೊಂದಿರುವ ಬದ್ಧತೆಯನ್ನು ಪರಿಗಣಿಸಿ ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಲಾಗಿದೆ” ಎಂದು ಫ್ರಾನ್ಸ್‌ ರಾಯಭಾರಿ ಕಚೇರಿಯು ಪ್ರಕಟಣೆಯಲ್ಲಿ ತಿಳಿಸಿದೆ.

“ರಾಜತಾಂತ್ರಿಕರಾಗಿ, ಲೇಖಕರಾಗಿ ಹಾಗೂ ರಾಜಕಾರಣಿಯಾಗಿ ಶಶಿ ತರೂರ್‌ ಅವರ ವೃತ್ತಿಜೀವನವು ಅದ್ಭುತವಾಗಿದೆ. ಅವರ ಜ್ಞಾನದಾಹ, ನೈಪುಣ್ಯತೆಯು ಅಗಾಧವಾಗಿದೆ. ಭಾರತ ಹಾಗೂ ಜಗತ್ತಿನ ಸ್ಥಿರತೆ, ಅಭಿವೃದ್ಧಿಗೆ ಅವರು ಸಲ್ಲಿಸುತ್ತಿರುವ ಸೇವೆಯು ಅಮೋಘವಾಗಿದೆ” ಎಂದು ಫ್ರಾನ್ಸ್‌ ಸೆನೆಟ್‌ ಅಧ್ಯಕ್ಷ ಗೆರಾರ್ಡ್‌ ಲಾರ್ಚರ್‌ ಬಣ್ಣಿಸಿದ್ದಾರೆ. ಶಶಿ ತರೂರ್‌ ಅವರಿಗೆ 2022ರ ಆಗಸ್ಟ್‌ನಲ್ಲಿಯೇ ಫ್ರಾನ್ಸ್‌ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಘೋಷಿಸಿತ್ತು. ಈಗ ತರೂರ್‌ ಅವರಿಗೆ ಪ್ರದಾನ ಮಾಡಲಾಗಿದೆ.

ಇದನ್ನೂ ಓದಿ: ಮೂರ್ತಿಯಂತೆ 70 ಗಂಟೆ, ಬಿಲ್‌ ಗೇಟ್ಸ್‌ರಂತೆ 3 ದಿನ ಅಲ್ಲ; ಕೆಲಸಕ್ಕೆ ಶಶಿ ತರೂರ್‌ ಸೊಲ್ಯೂಷನ್ ಇಲ್ಲಿದೆ!

“ಶಶಿ ತರೂರ್‌ ಅವರು ಫ್ರಾನ್ಸ್‌ನ ಉತ್ತಮ ಗೆಳೆಯರಾಗಿರುವ ಜತೆಗೆ ಅವರು ಫ್ರೆಂಚ್‌ ಭಾಷೆಯನ್ನೂ ಕಲಿತಿದ್ದಾರೆ. ಅದರಿಂದಾಗಿ ಅವರು ಫ್ರಾನ್ಸ್‌ ಹಾಗೂ ಅದರ ಸಂಸ್ಕೃತಿಯನ್ನು ತಿಳಿಯಲು ನೆರವಾಗಿದೆ. ಮುಂದಿನ ದಿನಗಳಲ್ಲೂ ನಿಮ್ಮ ಸಹಕಾರ ಬಯಸುತ್ತದೆ” ಎಂದು ಗೆರಾರ್ಡ್‌ ಲಾರ್ಚರ್‌ ತಿಳಿಸಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಶಶಿ ತರೂರ್‌, “ಭಾರತ ಹಾಗೂ ಫ್ರಾನ್ಸ್ ಸಂಬಂಧವು ಹಲವು ವರ್ಷಗಳಿಂದ ಉತ್ತಮವಾಗಿದೆ. ನನಗೆ ಪ್ರಶಸ್ತಿ ಸ್ವೀಕರಿಸಿರುವುದು ಅಪಾರ ಸಂತಸ ತಂದಿದೆ” ಎಂದು ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version