ಶಿಮ್ಲಾ: ಹಿಮಾಚಲ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಸುಖವಿಂದರ್ ಸಿಂಗ್ ಸುಖು (೫೮) (Sukhwinder Singh Sukhu) ಅವರು ಆಯ್ಕೆಯಾಗಿದ್ದಾರೆ. ಮಾಜಿ ಸಿಎಂ ವೀರಭದ್ರ ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಅವರ ಬೆಂಬಲಿಗರು ಒತ್ತಾಯಿಸಿದ ಬೆನ್ನಲ್ಲೇ, ಕಾಂಗ್ರೆಸ್ ಹೈಕಮಾಂಡ್ ಸುಖವಿಂದರ್ ಸಿಂಗ್ ಅವರಿಗೆ ಮಣೆ ಹಾಕಿದೆ. ಭಾನುವಾರವೇ (ಡಿಸೆಂಬರ್ ೧೧) ಸುಖವಿಂದರ್ ಸಿಂಗ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಹಾಗೆಯೇ, ಉಪ ಮುಖ್ಯಮಂತ್ರಿಯಾಗಿ ಮುಕೇಶ್ ಅಗ್ನಿಹೋತ್ರಿ ಆಯ್ಕೆಯಾಗಿದ್ದಾರೆ.
ಯಾರಿವರು ಸುಖವಿಂದರ್ ಸಿಂಗ್?
ನದೌನ್ ವಿಧಾನಸಭೆ ಕ್ಷೇತ್ರದ ಮೂರು ಬಾರಿಯ ಶಾಸಕ ಸುಖವಿಂದರ್ ಸಿಂಗ್ ಸುಖು ಅವರು ಹೋರಾಟದ ಹಾದಿ ಹಿಡಿದು ರಾಜಕೀಯ ಪ್ರವೇಶಿಸಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿದ್ದ ಸುಖವಿಂದರ್ ಸಿಂಗ್, ಕಾಂಗ್ರೆಸ್‌ನ ನ್ಯಾಷನಲ್ ಸ್ಟುಡೆಂಟ್ ಯೂನಿಯನ್ ಆಫ್ ಇಂಡಿಯಾ (NSUI) ಸೇರ್ಪಡೆಯಾಗಿ, ಪಕ್ಷ ವಹಿಸಿದ ಕಾರ್ಯಗಳನ್ನು ನಿರ್ವಹಿಸಿ, ಹಿಮಾಚಲ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಪದೋನ್ನತಿ ಹೊಂದಿದ್ದರು. ರಾಜ್ಯದಲ್ಲಿ ವೀರಭದ್ರ ಸಿಂಗ್ ಅವರ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದರು. ಆದರೂ, ಇವರಿಗೆ ಸಿಎಂ ಗಾದಿ ಒಲಿದಿದೆ.
ರಾಹುಲ್ ಗಾಂಧಿ ಆಪ್ತ
ಸುಖವಿಂದರ್ ಸಿಂಗ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆಪ್ತರಾಗಿದ್ದಾರೆ ಎಂದು ತಿಳಿದುಬಂದಿದೆ. ಇದೇ ಕಾರಣಕ್ಕಾಗಿ ಇವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಸುಖವಿಂದರ್ ಸಿಂಗ್ ಅವರನ್ನು ಆಯ್ಕೆ ಮಾಡುವ ಮೊದಲು ಹೈಡ್ರಾಮಾ ನಡೆಯಿತು. ಪ್ರತಿಭಾ ಸಿಂಗ್ ಅವರನ್ನೇ ಮುಖ್ಯಮಂತ್ರಿ ಎಂಬುದಾಗಿ ಘೋಷಿಸಬೇಕು ಎಂದು ಅವರ ಬೆಂಬಲಿಗರು ಘೋಷಣೆ ಕೂಗಿ ಒತ್ತಡ ಹೇರಿದ್ದರು. ಹೀಗಿದ್ದರೂ, ಹೈಕಮಾಂಡ್, ಸುಖವಿಂದರ್ ಸಿಂಗ್ ಅವರನ್ನೇ ಸಿಎಂ ಎಂದು ಘೋಷಿಸಲಾಗಿದೆ.
ಇದನ್ನೂ ಓದಿ | ಗುಜರಾತ್-ಹಿಮಾಚಲದಲ್ಲಿ ಕೆಲಸ ಮಾಡಲಿಲ್ಲ ಆಪ್ ‘ಉಚಿತ’ ಭರವಸೆಗಳು; ಎರಡೂ ರಾಜ್ಯಗಳ ಜನರಿಂದಲೂ ತಿರಸ್ಕಾರ