Site icon Vistara News

Congress protest | ಬೆಲೆಯೇರಿಕೆ ತಡೆಯಲು ಆಗ್ರಹಿಸಿ ಆ.5ರಂದು ಕಾಂಗ್ರೆಸ್‌ ದೇಶವ್ಯಾಪಿ ಪ್ರತಿಭಟನೆ

congress

ನವ ದೆಹಲಿ: ಬೆಲೆಯೇರಿಕೆ ತಡೆಗಟ್ಟಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿರುವ ಭಾರತೀಯ ಕಾಂಗ್ರೆಸ್ ಪಕ್ಷ, ಕ್ರಮಗಳಿಗಾಗಿ ಆಗ್ರಹಿಸಿ ಆಗಸ್ಟ್ 5ರಂದು ದೇಶವ್ಯಾಪಿ ಬೃಹತ್‌ ಪ್ರತಿಭಟನೆ ನಡೆಸಲು ಮುಂದಾಗಿದೆ.

ಇದರ ಭಾಗವಾಗಿ‌ ರಾಷ್ಟ್ರ ರಾಜಧಾನಿಯಲ್ಲಿ ಪ್ರಧಾನ ಮಂತ್ರಿ ಮನೆಗೆ ಘೇರಾವ್ ಮಾಡಲೂ ಕಾಂಗ್ರೆಸ್‌ ಯೋಜಿಸಿದೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯೂಸಿ) ಸದಸ್ಯರು ಇತರ ಹಿರಿಯ ನಾಯಕರೊಂದಿಗೆ ʼಪ್ರಧಾನಿ ಹೌಸ್ ಘೇರಾವ್ʼ ರ್‍ಯಾಲಿಯಲ್ಲಿ ಭಾಗವಹಿಸಲಿದ್ದಾರೆ.

ಪಕ್ಷದ ಎಲ್ಲಾ ಹಂತದ ಚುನಾಯಿತ ಪ್ರತಿನಿಧಿಗಳು ಆಯಾ ಬ್ಲಾಕ್‌ಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಿ ಬಂಧನಕ್ಕೆ ಒಳಗಾಗಲಿದ್ದಾರೆ ಎಂದು ಪಕ್ಷ ತಿಳಿಸಿದೆ. ದೆಹಲಿಯಲ್ಲಿ, ಪಕ್ಷದ ಲೋಕಸಭೆ ಮತ್ತು ರಾಜ್ಯಸಭಾ ಸಂಸದರು ಬೆಲೆ ಏರಿಕೆ ವಿರುದ್ಧ ತಮ್ಮ ಪ್ರತಿಭಟನೆಯನ್ನು ದಾಖಲಿಸಲು ʼಚಲೋ ರಾಷ್ಟ್ರಪತಿ ಭವನʼ ಮೆರವಣಿಗೆ ನಡೆಸಲಿದ್ದಾರೆ. ಪಕ್ಷದ ಎಲ್ಲಾ ರಾಜ್ಯ ಘಟಕಗಳು ರಾಜಭವನ ಘೇರಾವ್ ರ್‍ಯಾಲಿಗಳನ್ನು ನಡೆಸಲಿವೆ.

ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಕ್ರಮವಾಗಿ ಸೋಮವಾರ ಮತ್ತು ಮಂಗಳವಾರ ಬೆಲೆ ಏರಿಕೆ ವಿಷಯದ ಚರ್ಚೆಯನ್ನು ನಿಗದಿಪಡಿಸಲಾಗಿದೆ. ಮುಂಗಾರು ಅಧಿವೇಶನ ಆರಂಭವಾದ ಸುಮಾರು ಎರಡು ವಾರಗಳ ನಂತರ ಚರ್ಚೆ ನಡೆಯಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉಭಯ ಸದನಗಳಲ್ಲಿ ಮಾತನಾಡುವ ಸಾಧ್ಯತೆ ಇದೆ.

ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ಹಣದುಬ್ಬರ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹೆಚ್ಚಳದ ವಿರುದ್ಧ ಹಲವಾರು ಪ್ರತಿಪಕ್ಷ ನಾಯಕರು ಪ್ರತಿಭಟನೆ ನಡೆಸಿದ್ದರು. ಅಧಿವೇಶನದಲ್ಲಿ “ಅಶಿಸ್ತಿನ ವರ್ತನೆ”ಗಾಗಿ 23 ರಾಜ್ಯಸಭಾ ಸಂಸದರು ಮತ್ತು ನಾಲ್ಕು ಲೋಕಸಭಾ ಸಂಸದರು ಸೇರಿದಂತೆ ಒಟ್ಟು 27 ಸಂಸದರನ್ನು ಅಮಾನತುಗೊಳಿಸಲಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರ ರಾಜ್ಯಪಾಲ ಕೋಶ್ಯಾರಿ ಭಾಷಣ ವಿವಾದ; ತಿರುಗಿಬಿದ್ದ ಶಿವಸೇನೆ, ಕಾಂಗ್ರೆಸ್‌, ಎನ್‌ಸಿಪಿ

Exit mobile version