Site icon Vistara News

ಪಾಕ್‌ ಬಳಿ ಅಣು ಬಾಂಬ್‌ ಇದೆ, ಆದ್ರೆ, ಮೆಂಟೇನ್ ಮಾಡೋಕೂ ಅವರ ಬಳಿ ದುಡ್ಡಿಲ್ಲ ಎಂದ ಮೋದಿ; ಕಾಂಗ್ರೆಸ್‌ಗೆ ಚಾಟಿ

Narendra Modi

Beat Drums, Clang Thalis; PM Narendra Modi Tells Varanasi Women How To Boost Polling

ನವದೆಹಲಿ: “ಪಾಕಿಸ್ತಾನ ಬಳೆ ತೊಟ್ಟುಕೊಂಡಿಲ್ಲ. ಅದರ ಬಳಿ ಅಣು ಬಾಂಬ್‌ಗಳು ಇವೆ. ಹಾಗಾಗಿ, ಪಾಕಿಸ್ತಾನಕ್ಕೆ ಭಾರತ ಗೌರವ ನೀಡಬೇಕು” ಎಂಬುದಾಗಿ ಕಾಂಗ್ರೆಸ್‌ ನಾಯಕ ಮಣಿಶಂಕರ್‌ ಅಯ್ಯರ್‌ (Mani Shankar Aiyar) ನೀಡಿದ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ತಿರುಗೇಟು ನೀಡಿದ್ದಾರೆ. “ಪಾಕಿಸ್ತಾನದ ಬಳಿ ಅಣು ಬಾಂಬ್‌ ಇವೆ ಎಂಬುದಾಗಿ ಕಾಂಗ್ರೆಸ್‌ (Congress) ಹೇಳುತ್ತದೆ. ಆದರೆ, ಅವುಗಳನ್ನು ನಿರ್ವಹಣೆ ಮಾಡುವಷ್ಟು ಹಣವೇ ಪಾಕಿಸ್ತಾನದ ಬಳಿ ಇಲ್ಲ” ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.

ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದ ಚುನಾವಣೆ ಸಮಾವೇಶದಲ್ಲಿ ನರೇಂದ್ರ ಮೋದಿ ಮಾತನಾಡಿದರು. “ಪಾಕಿಸ್ತಾನದ ಕುರಿತು ಕಾಂಗ್ರೆಸ್‌ ನಾಯಕರು ಹೆಚ್ಚು ಚಿಂತಿತರಾಗಿದ್ದಾರೆ. ನೆರೆಯ ರಾಷ್ಟ್ರದ ಬಳಿ ಅಣು ಬಾಂಬ್‌ಗಳಿವೆ ಎಂಬುದಾಗಿ ಅವರು ಹೆದರಿಸುತ್ತಾರೆ. ಆದರೆ, ಪಾಕಿಸ್ತಾನದ ಬಳಿ ಪರಮಾಣು ಬಾಂಬ್‌ಗಳಿವೆ ಹಾಗೂ ಅವುಗಳನ್ನು ನಿರ್ವಹಣೆ ಮಾಡಲು ಆಗದಂತಹ, ಅದಕ್ಕೆ ಹಣವೇ ಇಲ್ಲದಂತಹ ಪರಿಸ್ಥಿತಿ ಪಾಕಿಸ್ತಾನಕ್ಕೆ ಎದುರಾಗಿದೆ ಎಂಬುದನ್ನು ಕಾಂಗ್ರೆಸ್‌ ಅರ್ಥ ಮಾಡಿಕೊಳ್ಳುತ್ತಿಲ್ಲ” ಎಂದು ವಾಗ್ದಾಳಿ ನಡೆಸಿದರು.

“ಕಾಂಗ್ರೆಸ್‌ ಹಾಗೂ ಸಮಾಜವಾದಿ ಪಕ್ಷದ ನಾಯಕರನ್ನು ಜನ ಯಾವುದೇ ಕಾರಣಕ್ಕೂ ನಂಬಬಾರದು. ಅವರು ವೋಟ್‌ ಜಿಹಾದ್‌ಗೆ ಕರೆ ನೀಡುತ್ತಾರೆ. ಸಮಾಜವನ್ನು ಒಡೆಯುವುದು ಅವರ ಉದ್ದೇಶವಾಗಿದೆ. ಮಾಫಿಯಾವನ್ನು ಸಮಾಜವಾದಿ ಪಕ್ಷವು ಈಗಲೂ ಬೆಂಬಲಿಸುತ್ತದೆ. ಇನ್ನು, ಪಾಕಿಸ್ತಾನವು ಭಾರತದ ಮೇಲೆ ದಾಳಿ ಮಾಡುತ್ತಲೇ ಬಂದಿತು. ಆದರೆ, ಕಾಂಗ್ರೆಸ್‌ ದಾಳಿ ಮಾಡಿದವರಿಗೇ ಕ್ಲೀನ್‌ಚಿಟ್‌ ನೀಡುವ ಮೂಲಕ ತನ್ನ ನಿಲುವು ಯಾರ ಪರ ಎಂಬುದನ್ನು ಸಾಬೀತುಪಡಿಸಿತು” ಎಂದು ಮೋದಿ ಹೇಳಿದರು.

ಮಣಿಶಂಕರ್‌ ಅಯ್ಯರ್‌ ಹೇಳಿದ್ದೇನು?

“ಪಾಕಿಸ್ತಾನದ ಬಳಿ ಅಣುಬಾಂಬ್‌ಗಳಿವೆ. ಭಾರತ ಕೇವಲ ವಿಶ್ವಗುರು ಎಂದು ಹೇಳುತ್ತಾ ಇದ್ದರೆ ಸಾಲದು ನೆರೆಯ ರಾಷ್ಟ್ರ ಪಾಕಿಸ್ತಾನದ ಜತೆ ಮೊದಲು ಶಾಂತಿಯುತ ಮಾತುಕತೆ ನಡೆಸಬೇಕು. ಯಾವಾಗಲೂ ಕೈಯಲ್ಲಿ ಬಂದೂಕು ಹಿಡಿದು ಸುತ್ತಾಡಿದರೆ ಯಾವ ಕೆಲಸವೂ ಆಗಲ್ಲ, ಯಾವ ಪರಿಹಾರವೂ ಸಿಗಲ್ಲ. ಅದು ಕೇವಲ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಅಷ್ಟೇ. ಪಾಕಿಸ್ತಾನ ಕೂಡ ಸಾರ್ವಭೌಮ ರಾಷ್ಟ್ರ ಮತ್ತು ಅದಕ್ಕೆ ಅದರದ್ದೇ ಆದ ಗೌರವ ಇದೆ. ಒಂದು ವೇಳೆ ಅಲ್ಲಿ ತಲೆಕೆಟ್ಟ ಮನುಷ್ಯ ಅಧಿಕಾರಕ್ಕೆ ಬಂದರೆ, ಲಾಹೋರ್‌ನಲ್ಲಿ ಅಣುಬಾಂಬ್‌ ಸ್ಫೋಟಿಸಿದರೆ ಅದರ ಪರಿಣಾಮ ನಮ್ಮ ದೇಶದ ಭಾಗವಾಗಿರುವ ಅಮೃತಸರದ ಮೇಲೂ ಆಗುತ್ತದೆ. ಹೀಗಾಗಿ ನಾನು ಅವರನ್ನು ಗೌರವಿಸಲು ಪ್ರಾರಂಭಿಸಿದರೆ ಅವರು ಬಾಂಬ್‌ ಬಗ್ಗೆ ಯೋಚನೆ ಮಾಡುವುದೇ ಇಲ್ಲ” ಎಂದು ಅಯ್ಯರ್‌ ಹೇಳಿದ್ದರು.

ಇದನ್ನೂ ಓದಿ: PM Narendra Modi: ಬುಲ್ಡೋಜರ್‌ ಹೇಗೆ ಬಳಸಬೇಕೆಂಬುದನ್ನು ಯೋಗಿಯಿಂದ ಕಲಿಯಬೇಕು: ಪ್ರಧಾನಿ ಮೋದಿ

Exit mobile version