ರಾಂಚಿ: ಪಶ್ಚಿಮ ಬಂಗಾಳದ ಹೌರಾದಲ್ಲಿ ಹಣ ಸಾಗಾಟ ಮಾಡುವ ವೇಳೆ ಸಿಕ್ಕಿಬಿದ್ದ ಜಾರ್ಖಂಡ್‌ನ ಮೂವರು ಕಾಂಗ್ರೆಸ್ ಶಾಸಕರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಅಂದ ಹಾಗೆ ಅವರ ಕೈಯಲ್ಲಿದ್ದ ಒಟ್ಟು ಹಣ ೫೦ ಲಕ್ಷ ರೂ. ಎಂದು ಈಗ ಲೆಕ್ಕ ಹಾಕಲಾಗಿದೆ. ಅವರೇ ಹೇಳಿರುವ ಪ್ರಕಾರ, ಅವರು ಇಷ್ಟು ದುಡ್ಡು ಹಿಡಿದುಕೊಂಡು ಗಿಫ್ಟ್ ತಗೊಳ್ಳಿಕೆ ಹೋಗ್ತಿದ್ರಂತೆ!
ಜಮ್ತಾರಾದ ಶಾಸಕ ಇರ್ಫಾನ್ ಅನ್ಸಾರಿ, ರಾಂಚಿ ಜಿಲ್ಲೆಯ ಖಜ್ರಿಯ ಜನಪ್ರತಿನಿಧಿ ರಾಜೇಶ್ ಕಶ್ಯಪ್ ಮತ್ತು ಶಿಮ್‌ದೇಗಾ ಜಿಲ್ಲೆಯ ಕೊಲೆಬಿರಾ ವಿಧಾನಸಭಾ ಕ್ಷೇತ್ರದ ಪ್ರತಿನಿಧಿ ನಮನ್ ಬಿಕ್ಸಲ್ ಕೊಂಗಾರಿ ಅವರು ಸಾಗುತ್ತಿದ್ದ ಎಸ್‌ಯುವಿಯನ್ನು ಪಂಚ್ಲಾ ಪೊಲೀಸ್ ಠಾಣೆಯ ರಾಣಿಹಟಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ-೧೬ರಲ್ಲಿ ಶನಿವಾರ ರಾತ್ರಿ ತಡೆಯಲಾಗಿತ್ತು. ಶಾಸಕರಿಗೆ ನೀಡಿದ ಸರಕಾರಿ ಕಾರಿನಲ್ಲೇ ಬೋರ್ಡ್ ಹಾಕಿಕೊಂಡು ಹೋಗುತ್ತಿದ್ದ ಇವರ ಬಗ್ಗೆ ಮೊದಲೇ ಪೊಲೀಸರಿಗೆ ಮಾಹಿತಿ ಇತ್ತು. ಮಾರ್ಗ ಮಧ್ಯೆ ಅವರನ್ನು ತಡೆದು ಪರಿಶೀಲನೆ ನಡೆಸಿದಾಗ ದೊಡ್ಡ ಮೊತ್ತ ಇರುವುದು ಖಚಿತವಾಯಿತು. ಬಳಿಕ ಕೌಂಟಿಂಗ್ ಮೆಷಿನ್‌ಗಳ ಮೂಲಕ ಎಣಿಸಿ ನೋಡಿದರೆ ಒಟ್ಟು ೫೦ ಲಕ್ಷ ರೂ. ಇರುವುದು ಗೊತ್ತಾಗಿತ್ತು. ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಈ ನಡುವೆ, ದೊಡ್ಡ ಮೊತ್ತದ ನಗದಿನೊಂದಿಗೆ ಸಿಕ್ಕಿಬಿದ್ದ ಮೂವರು ಕಾಂಗ್ರೆಸ್ ಶಾಸಕರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಜಾರ್ಖಂಡ್ ಪ್ರದೇಶ ಕಾಂಗ್ರೆಸ್‌ನ ಉಸ್ತುವಾರಿ ಅವಿನಾಶ್ ಪಾಂಡೆ ತಿಳಿಸಿದ್ದಾರೆ.
ಅಸ್ಸಾಂ ಕನೆಕ್ಷನ್?
ಈ ನಡುವೆ, ಅವಿವಾಶ್ ಪಾಂಡೆ ಅವರು ನೀಡಿರುವ ಇನ್ನೊಂದು ಹೇಳಿಕೆ ಕುತೂಹಲಕಾರಿಯಾಗಿದೆ. ಜಾರ್ಖಂಡ್‌ನ ಆಡಳಿತಾರೂಢ ಜೆಎಂಎಂ-ಕಾಂಗ್ರೆಸ್ ಸರಕಾರವನ್ನು ಉರುಳಿಸಲು ಬಿಜೆಪಿ ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ. ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಪ್ರಯತ್ನದಲ್ಲಿದೆ. ಇದರಲ್ಲಿ ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಭಾಗಿಯಾಗಿದ್ದಾರೆ. ಅವರು ಈಗ ಹಣದೊಂದಿಗೆ ಸಿಕ್ಕಿಬಿದ್ದಿರುವ ಮೂವರು ಶಾಸಕರ ಜತೆಗೆ ಸಂಪರ್ಕದಲ್ಲಿರುವ ಮಾಹಿತಿ ಇದೆ ಎಂದು ಹೇಳಿದ್ದಾರೆ. ಮಹಾರಾಷ್ಟ್ರದ ಶಿವಸೇನಾ ಬಂಡಾಯವೂ ಅಂತಿಮವಾಗಿ ಅಸ್ಸಾಂನ್ನು ತಲುಪಿದ್ದರ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದಿದೆ. ಇದೇ ವೇಳೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಸಭೆಯನ್ನು ನಡೆಸಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ.
ಗಿಫ್ಟ್ ತೆಗೆದುಕೊಳ್ಳಲು ಹೋಗ್ತಿದ್ದರು!
ಇದೆಲ್ಲದರ ನಡುವೆ ಕುತೂಹಲ ಕೆರಳಿಸಿರುವ ಇನ್ನೊಂದು ಸಂಗತಿ ಎಂದರೆ, ಈ ಶಾಸಕರು ಇಷ್ಟೊಂದು ದುಡ್ಡು ಹಿಡಿದಕೊಂಡು ಕೋಲ್ಕೊತಾಗೆ ಹೋಗಿದ್ದು ಗಿಫ್ಟ್ ತರೋದಕ್ಕಂತೆ!
ಸಿಕ್ಕಿಬಿದ್ದಿರುವ ಶಾಸಕರಲ್ಲಿ ಒಬ್ಬರಾದ ಇರ್ಫಾನ್ ಅನ್ಸಾರಿ ಅವರ ಸಹೋದರ ಇಮ್ರಾನ್ ಅವರು ಹೇಳುವಂತೆ, ʻʻನನ್ನ ಅಣ್ಣನನ್ನು ಸಿಕ್ಕಿಸಿ ಹಾಕುವ ಪ್ರಯತ್ನ ನಡೆಯುತ್ತಿದೆ. ನಿಜ ಹೇಳಬೇಕು ಎಂದರೆ ಅವರು ಅಲ್ಲಿಗೆ ಹೋಗಿದ್ದು ಬುಡಕಟ್ಟು ಜನಾಂಗದವರಿಗೆ ಕೊಡುವ ಗಿಫ್ಟ್ ಖರೀದಿಸಲು. ಪ್ರತಿ ವರ್ಷದಂತೆ ಈ ವರ್ಷವೂ ಅವರು ಜಾರ್ಖಂಡ್‌ನಿಂದ ಕೋಲ್ಕೊತಾಗೆ ಬಂದಿದ್ದಾರೆ. ಇಲ್ಲಿನ ಬಡಾ ಬಜಾರ್‌ನಲ್ಲಿ ಅವರು ಪ್ರತಿವರ್ಷವೂ ಸೀರೆ ಖರೀದಿ ಮಾಡುತ್ತಾರೆ. ಬಳಿಕ ಅವುಗಳನ್ನು ಬುಡಕಟ್ಟು ಮಹಿಳೆಯರಿಗೆ ಹಂಚುತ್ತಾರೆʼʼ.
ಇದನ್ನೂ ಓದಿ| ಭಾರಿ ಹಣದೊಂದಿಗೆ ಸಿಕ್ಕಿಬಿದ್ದ ಮೂವರು ಜಾರ್ಖಂಡ್ ಕೈ ಶಾಸಕರು, ಆಪರೇಷನ್ ಕಮಲದ ದುಡ್ಡು?