Site icon Vistara News

Lok Sabha Election: 73 ವರ್ಷಗಳಲ್ಲೇ ಕಡಿಮೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸ್ಪರ್ಧೆ; ಏಕಿಂಥಾ ದುಸ್ಥಿತಿ?

Rahul Gandhi

ನವದೆಹಲಿ: ಅಸಮರ್ಥ ನಾಯಕತ್ವ, ನಾಯಕತ್ವದಲ್ಲಿಯೇ ಗೊಂದಲ, ನರೇಂದ್ರ ಮೋದಿ (Narendra Modi) ಅಲೆ ಸೇರಿ ಹಲವು ಕಾರಣಗಳಿಂದಾಗಿ ಕಳೆದ 10 ವರ್ಷಗಳಲ್ಲಿ ದೇಶಾದ್ಯಂತ ಕಾಂಗ್ರೆಸ್‌ ಹೊಳಪು ಕಳೆದುಕೊಂಡಿದೆ. ದೇಶದ ಅತ್ಯಂತ ಹಳೆಯ ಪಕ್ಷ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ ಎಂದು ಕಾಂಗ್ರೆಸ್‌ ನಾಯಕರು ಹೇಳಿಕೊಂಡರೂ, ಕಾಂಗ್ರೆಸ್‌ (Congress) ದುಸ್ಥಿತಿಗೆ ಸಿಲುಕಿದೆ. ದೇಶದ ಮೊದಲ ಲೋಕಸಭೆ ಚುನಾವಣೆ (Lok Sabha Election) ನಡೆದ 1951-52ರ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಅತ್ಯಂತ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ಹೌದು, ಈ ಬಾರಿ ಕಾಂಗ್ರೆಸ್‌ 300ಕ್ಕಿಂತ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ ಎಂದು ಹೇಳಲಾಗುತ್ತಿದೆ. 27 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳು ಸೇರಿ ಕಾಂಗ್ರೆಸ್‌ ಇದುವರೆಗೆ 278 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಉತ್ತರ ಪ್ರದೇಶ, ಹರಿಯಾಣ, ಬಿಹಾರ, ಪಂಜಾಬ್‌, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ ಸೇರಿ ಹೆಚ್ಚೆಂದರೆ ಇನ್ನೂ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಅಲ್ಲಿಗೆ, ಕಾಂಗ್ರೆಸ್‌ ಕಳೆದ 73 ವರ್ಷಗಳಲ್ಲಿಯೇ ಸಾರ್ವತ್ರಿಕ ಚುನಾವಣೆಯಲ್ಲಿ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿದಂತಾಗಲಿದೆ.

ಯಾವ ವರ್ಷ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧೆ?

ದೇಶದ ಮೊದಲ ಚುನಾವಣೆ ನಡೆದಿದ್ದು 1951ರಲ್ಲಿ. ಆಗ ಕಾಂಗ್ರೆಸ್‌ 479 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಅಷ್ಟೇ ಅಲ್ಲ, 364 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಜವಾಹರ ಲಾಲ್‌ ನೆಹರು ಅವರು ದೇಶದ ಮೊದಲ ಪ್ರಧಾನಿಯಾದರು. ಇದಾದ ನಂತರ ಕಾಂಗ್ರೆಸ್‌ ಯಾವ ಚುನಾವಣೆಯಲ್ಲಿಯೂ 300ಕ್ಕಿಂತ ಕಡಿಮೆ ಲೋಕಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿರಲಿಲ್ಲ. 2019ರಲ್ಲಿ 421, 2014ರಲ್ಲಿ 464, 2009ರಲ್ಲಿ 440, 2004ರಲ್ಲಿ 417 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸ್ಪರ್ಧೆ ಮಾಡಿತ್ತು. ಆದರೆ, ಈ ಬಾರಿ ಅತಿ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಮುಂದಾಗಿದೆ.

ಏಕಿಂತಹ ಪರಿಸ್ಥಿತಿ?

ಕಾಂಗ್ರೆಸ್‌ನಲ್ಲಿ ದೇಶದ ಜನರನ್ನು ಹಿಡಿದಿಡುವ, ಮತಗಳನ್ನು ಸೆಳೆಯುವ ನಾಯಕ ಹೊಂದಿಲ್ಲ. ಬಿಜೆಪಿ ಪರ ಅಲೆ, ನರೇಂದ್ರ ಮೋದಿ ಅಬ್ಬರವನ್ನು ಮೀರಿಸುವ, ಜನರ ವಿಶ್ವಾಸ ಗಳಿಸುವ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ರಾಹುಲ್‌ ಗಾಂಧಿ ಅವರು ಭಾರತ್‌ ಜೋಡೋ ಯಾತ್ರೆ ಮೂಲಕ ಜನರ ವಿಶ್ವಾಸ ಗಳಿಸುವ ಪ್ರಯತ್ನ ಮಾಡಿದರೂ ಎರಡನೇ ಹಂತದ ಯಾತ್ರೆ ವೇಳೆಗೆ ಅದು ಮಂಕಾಯಿತು. ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ಬಳಿಕ ಸ್ಥಿರ ನಾಯಕತ್ವ ಸಿಕ್ಕರೂ, ಅದು ಮತಗಳನ್ನು ಸೆಳೆಯುವಲ್ಲಿ ವಿಫಲವಾಗಿದೆ. ಇದಕ್ಕೆ, ಇತ್ತೀಚಿನ ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‌ ಕಳಪೆ (ಮಧ್ಯಪ್ರದೇಶ, ರಾಜಸ್ಥಾನ) ಪ್ರದರ್ಶನ ಸಾಕ್ಷಿಯಾಗಿದೆ.

ದೂರದೃಷ್ಟಿಯ ನಾಯಕತ್ವದ ಕೊರತೆಯಿಂದಾಗಿ ಈಗ ದೇಶದಲ್ಲಿ ಕಾಂಗ್ರೆಸ್‌ ಕೇವಲ ಮೂರು (ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶ) ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿದೆ. ಹಾಗಾಗಿ, ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್‌ ಪ್ರಾದೇಶಿಕ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದೆ. ಅಷ್ಟೇ ಅಲ್ಲ, ಮೈತ್ರಿ ಪಕ್ಷಗಳು ನಿರ್ಧರಿಸಿದ ಸ್ಥಾನಗಳಲ್ಲಿ ಕಾಂಗ್ರೆಸ್‌ ಸ್ಪರ್ಧಿಸುವ ದುಸ್ಥಿತಿಗೆ ಬಂದಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿಗೆ ಹೆಚ್ಚು ಕ್ಷೇತ್ರ ಬಿಟ್ಟು, ಕಾಂಗ್ರೆಸ್‌ 17 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸುತ್ತಿರುವುದು ಇದಕ್ಕೆ ನಿದರ್ಶನವಾಗಿದೆ.

ಇದನ್ನೂ ಓದಿ: Lok Sabah Election : ಉತ್ತರ ದಿಲ್ಲಿಯಿಂದ ಕಾಂಗ್ರೆಸ್​ ಟಿಕೆಟ್ ಪಡೆದ ಕನ್ಹಯ್ಯ ಕುಮಾರ್​​

Exit mobile version