Site icon Vistara News

Baba Siddique: ಕರಿಬೇವು ಸೊಪ್ಪಿನಂತೆ ಬಳಸಿ ಬಿಸಾಡಿದರು! ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಸಿದ್ದಿಕ್

Congress Treated me Like Curry Leaves Says Baba Siddique

ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ (Baba Siddique) ಅವರು ಕಾಂಗ್ರೆಸ್ (Congress party) ತೊರೆದ ಮಾರನೇ ದಿನವೇ ಶನಿವಾರ ಸಂಜೆ ಅಜಿತ್ ಪವಾರ್ ಅವರ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷಕ್ಕೆ (NCP) ಸೇರ್ಪಡೆಯಾದರು. ಎನ್‌ಸಿಪಿಗೆ ಸೇರ್ಪಡೆಗೊಂಡ ನಂತರ, ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಕಾಂಗ್ರೆಸ್‌ನಲ್ಲಿ ನನ್ನ ಸ್ಥಿತಿಯು ಆಹಾರದ ರುಚಿಯನ್ನು ಹೆಚ್ಚಿಸಲು ಬಳಸುವ ಕರಿಬೇವಿನ ಸೊಪ್ಪು (Curry Leaves) ರೀತಿಯಂತಿತ್ತು. ಕಾಂಗ್ರೆಸ್ ಪಕ್ಷದಲ್ಲಿ ನನ್ನನ್ನು ಬಳಸಿಕೊಂಡು ಬಿಸಾಡಲಾಯಿತು” ಎಂದು ಆರೋಪಿಸಿದರು.

ಸಿದ್ದಿಕ್ ಅವರು ಕಳೆದ 48 ವರ್ಷಗಳಿಂದ ಕಾಂಗ್ರೆಸ್‌ನ ಭಾಗವಾಗಿದ್ದರು. ಅವರು ಗುರುವಾರ ಪಕ್ಷಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಕಟಿಸಿದಾಗ, “ಕೆಲವು ನಿರ್ಧಾರಗಳು ನೋವಿನಿಂದ ಕೂಡಿದೆ, ಆದರೆ ಅವುಗಳನ್ನು ತೆಗೆದುಕೊಳ್ಳಬೇಕು” ಎಂದು ಹೇಳಿದ್ದರು. ಅವರು ಮುಂಬೈ ಕಾಂಗ್ರೆಸ್‌ನ ಪ್ರಮುಖ ಮುಸ್ಲಿಂ ಮುಖವಾಗಿದ್ದರು ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಎನ್‌ಸಿಪಿ ಒಕ್ಕೂಟವು ಅಧಿಕಾರದಲ್ಲಿದ್ದಾಗ ಸಚಿವರಾಗಿ ಸೇವೆ ಸಲ್ಲಿಸಿದರು.

ಮಾಜಿ ಕೇಂದ್ರ ಸಚಿವ ಮಿಲಿಂದ್ ದಿಯೋರಾ ಅವರು ಜನವರಿಯಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಿದ ನಂತರ ಕಳೆದ ಒಂದು ತಿಂಗಳಲ್ಲಿ ಪಕ್ಷವನ್ನು ತೊರೆದ ಎರಡನೇ ಹಿರಿಯ ಮುಂಬೈ ಕಾಂಗ್ರೆಸ್‌ನ ನಾಯಕರಾಗಿದ್ದಾರೆ.

ಅವರು ಕಾಂಗ್ರೆಸ್ ಪಕ್ಷವನ್ನು ತೊರೆಯಲು ನಿರ್ಧರಿಸಿದಾಗ ಅಜಿತ್ ಪವಾರ್ ಅವರ ಪಕ್ಷದೊಂದಿಗೆ ಹೋಗಲು ನಿರ್ಧರಿಸಿದ್ದರು.”ನಾನು ಅಜಿತ್ ಪವಾರ್ ಗುಂಪಿನೊಂದಿಗೆ ಹೋಗುತ್ತೇನೆ. ನನ್ನ ಪ್ರಯಾಣವು ಕಾಂಗ್ರೆಸ್‌ನಿಂದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ” ಎಂದು ಅವರು ತಮ್ಮ ದೊಡ್ಡ ನಿರ್ಧಾರವನ್ನು ಎಕ್ಸ್ ವೇದಿಕೆಯಲ್ಲಿ ಘೋಷಣೆ ಮಾಡಿದ್ದರು.

ಸಿದ್ದಿಕ್ ಅವರು “ಕೆಲವು ದಿನಗಳ ಹಿಂದೆ ಪ್ರಫುಲ್ ಪಟೇಲ್ ಅವರನ್ನು ಭೇಟಿಯಾದ ನಂತರ ನಾನು ಅಜಿತ್ ಪವಾರ್ ನೇತೃತ್ವದಲ್ಲಿ ಎನ್‌ಸಿಪಿಯಲ್ಲಿ ಕೆಲಸ ಮಾಡಬೇಕೆಂದು ನಿರ್ಧರಿಸಿದ್ದೇನೆ” ಎಂದು ಹೇಳಿದ್ದರು. ಮಾಜಿ ಕೇಂದ್ರ ಸಚಿವ ಪ್ರಫುಲ್ ಪಟೇಲ್ ಅವರು ಅಜಿತ್ ಪವಾರ್ ಅವರ ಆಪ್ತರು ಮತ್ತು ಪ್ರಸ್ತುತ ಎನ್‌ಸಿಪಿಯ ಕಾರ್ಯಾಧ್ಯಕ್ಷರಾಗಿದ್ದಾರೆ.

ಕಾಂಗ್ರೆಸ್‌ಗೆ ವಿದಾಯ ಹೇಳಿದ ಸಿದ್ಧಿಕ್ ಅವರು, “ನಾನು ಹದಿಹರೆಯದವನಾಗಿದ್ದಾಗ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದೆ. ಇದು 48 ವರ್ಷಗಳ ಮಹತ್ವದ ಪ್ರಯಾಣವಾಗಿದೆ. ಇಂದು ನಾನು ತಕ್ಷಣದಿಂದ ಜಾರಿಗೆ ಬರುವಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದರು.

ಈ ಸುದ್ದಿಯನ್ನೂ ಓದಿ: ಶ್ರೀ ಕೇಶವಾನಂದ ಭಾರತೀ vs ಕೇರಳ ಸರ್ಕಾರ ಕೇಸ್ ತೀರ್ಪು ಪ್ರಮುಖ ಅಧ್ಯಯನ ವಸ್ತು: ನ್ಯಾ. ಸಂತೋಷ್ ಹೆಗ್ಡೆ

Exit mobile version