Site icon Vistara News

Sonia Gandhi: ಸಂವಿಧಾನ ರಕ್ಷಣೆಗಾಗಿ ಸಮಾನ ಮನಸ್ಕ ಪಕ್ಷಗಳ ಜತೆ ಮೈತ್ರಿಗೆ ಕಾಂಗ್ರೆಸ್ ಸಿದ್ದ: ಸೋನಿಯಾ ಗಾಂಧಿ

Sonia Gandhi

Sonia Gandhi shifts to Jaipur To avoid air pollution In Delhi

ನವದೆಹಲಿ: ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರವು ಎಲ್ಲ ರೀತಿಯ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandi) ಅವರು, ಹಲವು ರಾಜ್ಯಗಳಿಗೆ ಚುನಾವಣೆಗಳು ಎದುರಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂವಿಧಾನ ರಕ್ಷಣೆಗಾಗಿ ಸಮಾನ ಮನಸ್ಕ ಪಕ್ಷಗಳ ಜತೆಗೆ ಕೈಜೋಡಿಸಲು ಕಾಂಗ್ರೆಸ್ ಮುಂದಾಗಲಿದೆ ಎಂದು ಅವರು ಹೇಳಿದ್ದಾರೆ.

ಹಿಂದೂ ಪತ್ರಿಕೆಯ ಸಂಪಾದಕೀಯ ಪುಟದಲ್ಲಿ ಪ್ರಕಟವಾದ ಲೇಖನದಲ್ಲಿ ಸೋನಿಯಾ ಗಾಂಧಿ ಅವರು, ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವನ್ನು ವ್ಯವಸ್ಥಿತವಾಗಿ ಛಿದ್ರಛಿದ್ರ ಮಾಡಲಾಗುತ್ತಿದೆ. ಅವರ ಈ ನಡೆಗಳು ಆಳವಾಗಿ ಬೇರೂರಿರುವ ಪ್ರಜಾಪ್ರಭುತ್ವವನ್ನು ನಾಶಮಾಡುವುದಾಗಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರಿಂದ ಕುಮ್ಮಕ್ಕಿನಿಂದ ಹೆಚ್ಚುತ್ತಿರುವ ದ್ವೇಷ, ಹಿಂಸಾಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಲಕ್ಷಿಸುತ್ತಿದ್ದಾರೆ. ಇಷ್ಟಾಗಿಯೂ ಶಾಂತಿಗಾಗಿ ಒಮ್ಮೆಯೂ ಕರೆ ನೀಡಿಲ್ಲ. ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆ ತರುವ ಪ್ರಯತ್ನ ಮಾಡಿಲ್ಲ.

ಧಾರ್ಮಿಕ ಹಬ್ಬಗಳು ಇತರರನ್ನು ಬೆದರಿಸುವ ಮತ್ತು ಹಿಂಸಾಚಾರದ ಸಂದರ್ಭಗಳಾಗಿ ಕಂಡುಬರುತ್ತವೆ. ವಾಸ್ತವದಲ್ಲಿ ಅವು ಸಂತೋಷ ಮತ್ತು ಆಚರಣೆಯ ಸಂದರ್ಭಗಳಿಂದ ದೂರವಾಗುತ್ತಿವೆ. ಬದಲಿಗೆ, ಅವರ ಧರ್ಮ, ಆಹಾರ, ಜಾತಿ, ಲಿಂಗ ಅಥವಾ ಭಾಷೆಯ ಕಾರಣದಿಂದಾಗಿ ಹಿಂಸಾಚಾರಕ್ಕೆ ಕಾರಣವಾಗುತ್ತಿವೆ. ತಾರತಮ್ಯ ಮಾಡಲಾಗುತ್ತಿದೆ ಎಂದು ಸೋನಿಯಾ ಗಾಂಧಿ ಅವರು ಸದ್ಯತ ಪರಿಸ್ಥಿತಿಯನ್ನು ವಿಶ್ಲೇಷಿಸಿದ್ದಾರೆ.

ಮುಂದಿನ ಕೆಲವು ತಿಂಗಳಲ್ಲಿ ಭಾರತೀಯ ಪ್ರಜಾಪ್ರಭುತ್ವಕ್ಕೆ ಮಹತ್ವದ ಪರೀಕ್ಷೆ ಎದುರಾಗಲಿದೆ. ಮೋದಿ ಸರ್ಕಾರವು ಪ್ರತಿಯೊಂದು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಹಲವಾರು ಪ್ರಮುಖ ರಾಜ್ಯಗಳಲ್ಲಿ ಚುನಾವಣೆಗಳು ಸಮೀಪಿಸುತ್ತಿರುವಾಗ ದೇಶವು ಕವಲುದಾರಿಯಲ್ಲಿದೆ ನಿಂತಿದೆ ಎಂದು ಹೇಳಿದರು.

ಇದನ್ನೂ ಓದಿ: ಪುತ್ರಿ ಪ್ರಿಯಾಂಕಾಗಾಗಿ ಇನಿಂಗ್ಸ್ ಮುಗಿಸುತ್ತಿದ್ದಾರಾ ಸೋನಿಯಾ ಗಾಂಧಿ?; 2024ರಲ್ಲಿ ಅಮ್ಮನ ಕ್ಷೇತ್ರದಿಂದ ಮಗಳ ಸ್ಪರ್ಧೆ?

ಭಾರತ್ ಯಾತ್ರೆ ಜೋಡೋ ಸಂದರ್ಭದಲ್ಲಿ ಮಾಡಿದಂತೆಯೇ ಕಾಂಗ್ರೆಸ್ ಪಕ್ಷವು ತನ್ನ ಸಂದೇಶವನ್ನು ಜನರಿಗೆ ತಲುಪಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಿದೆ. ದೇಶದ ಸಂವಿಧಾನ ಮತ್ತು ಅದರ ವಿಚಾರಗಳ ರಕ್ಷಣೆಗೆ ಕಾಂಗ್ರೆಸ್ ಸಮಾನ ಮನಸ್ಕ ಪಕ್ಷಗಳ ಜತೆಗೆ ಕೈಜೋಡಿಸಲಿದೆ ಎಂದು ಸೋನಿಯಾ ಗಾಂಧಿ ಅವರು ಹೇಳಿದ್ದಾರೆ.

Exit mobile version