Site icon Vistara News

ಪೋಪ್‌-ಮೋದಿ ಭೇಟಿಯನ್ನು ಲೇವಡಿ ಮಾಡಲು ಹೋದ ಕಾಂಗ್ರೆಸ್‌ಗೆ ಮುಖಭಂಗ; ಕ್ರೈಸ್ತರ ಕ್ಷಮೆ ಕೇಳಿದ್ದೇಕೆ?

Narendra Modi

Congress's apology to Christians over now-deleted post mocking PM Narendra Modi - Pope meeting

ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಲೇವಡಿ ಮಾಡುವ ಭರದಲ್ಲಿ ಕೇರಳ ಕಾಂಗ್ರೆಸ್‌ (Kerala Congress) ಘಟಕವು ಪ್ರಮಾಣದ ಎಸಗಿದ್ದು, ತಪ್ಪಿನ ಅರಿವಾಗಿ ಬಳಿಕ ಕ್ಷಮೆಯಾಚಿಸಿದೆ. ಇತ್ತೀಚೆಗೆ ಇಟಲಿಯಲ್ಲಿ ನಡೆದ ಜಿ-7 ಶೃಂಗಸಭೆಯ ವೇಳೆ ನರೇಂದ್ರ ಮೋದಿ (Narendra Modi) ಅವರು ಪೋಪ್‌ ಫ್ರಾನ್ಸಿಸ್‌ (Pope Francis) ಅವರನ್ನು ಭೇಟಿಯಾಗಿದ್ದರು. ಇದರ ಕುರಿತು ಲೇವಡಿ ಮಾಡಿದ ಕೇರಳ ಕಾಂಗ್ರೆಸ್‌, “ಕೊನೆಗೂ ಪೋಪ್‌ ಫ್ರಾನ್ಸಿಸ್‌ ಅವರಿಗೆ ದೇವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು” ಎಂಬುದಾಗಿ ಪೋಸ್ಟ್‌ ಮಾಡಿದೆ. ಇದಾದ ನಂತರ ಜನಾಕ್ರೋಶ ವ್ಯಕ್ತವಾಗಿದ್ದು, ಬಳಿಕ ಪೋಸ್ಟ್‌ಅನ್ನು ಡಿಲೀಟ್‌ ಮಾಡಿದೆ.

ಇಟಲಿಯಲ್ಲಿ ನರೇಂದ್ರ ಮೋದಿ ಹಾಗೂ ಪೋಪ್‌ ಫ್ರಾನ್ಸಿಸ್‌ ಅವರು ಭೇಟಿಯಾಗಿರುವ ಫೋಟೊವನ್ನು ಕೇರಳ ಕಾಂಗ್ರೆಸ್‌ ಘಟಕದ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಲಾಗಿತ್ತು. ಆ ಮೂಲಕ ನರೇಂದ್ರ ಮೋದಿ ಅವರೇ ದೇವರಾಗಿದ್ದು, ಅವರನ್ನು ಭೇಟಿಯಾಗುವ ಅವಕಾಶವು ಪೋಪ್‌ ಅವರದ್ದಾಗಿದೆ ಎಂಬಂತೆ ಕಾಂಗ್ರೆಸ್‌ ಲೇವಡಿ ಮಾಡಿತ್ತು. ಚುನಾವಣೆ ಪ್ರಚಾರದ ವೇಳೆ, “ನಿಮ್ಮ ಸೇವೆ ಮಾಡಲಿ ಎಂಬುದಾಗಿ ದೇವರೇ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆ” ಎಂಬುದಾಗಿ ಮೋದಿ ಹೇಳಿಕೆಯನ್ನು ಇಟ್ಟುಕೊಂಡು ಕಾಂಗ್ರೆಸ್‌ ಲೇವಡಿ ಮಾಡಿತ್ತು.

ಕೇರಳ ಕಾಂಗ್ರೆಸ್‌ ಪೋಸ್ಟ್‌ಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. “ಇಸ್ಲಾಮಿಕ್‌ ಮೂಲಭೂತವಾದಿಗಳು ಹಾಗೂ ನಗರ ನಕ್ಸಲರು ಕೇರಳ ಕಾಂಗ್ರೆಸ್‌ನ ಎಕ್ಸ್‌ ಖಾತೆಯನ್ನು ನಿರ್ವಹಿಸುತ್ತಿದ್ದಾರೆ. ದೇಶದ ನಾಯಕರ ಕುರಿತು ಅವಹೇಳನಕಾರಿಯಾಗಿ ಪೋಸ್ಟ್‌ ಮಾಡುವುದು ಇವರ ಕೆಲಸವೇ ಆಗಿದೆ. ಈಗ ಗೌರವಾನ್ವಿತ ಪೋಪ್‌ ಹಾಗೂ ಕ್ರೈಸ್ತ ಸಮುದಾಯದ ಕುರಿತು ಕೂಡ ಅವಹೇಳನಕಾರಿಯಾಗಿ ಪೋಸ್ಟ್‌ ಮಾಡುವುದನ್ನು ಇವರು ಬಿಟ್ಟಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಕ್ರೈಸ್ತರಿಗೆ ಕಾಂಗ್ರೆಸ್‌ ಅವಮಾನ ಮಾಡಲಾಗಿದೆ ಎಂದೇ ಬಿಜೆಪಿ ನಾಯಕರು ಚಾಟಿ ಬೀಸಿದರು.

ಕೇರಳ ಕಾಂಗ್ರೆಸ್‌ನ ಪೋಸ್ಟ್‌ ವೈರಲ್‌ ಆಗಿ, ಜನರು ಕೂಡ ಆಕ್ರೋಶ ವ್ಯಕ್ತಪಡಿಸುತ್ತಲೇ ಪೋಸ್ಟ್‌ಅನ್ನು ಡಿಲೀಟ್‌ ಮಾಡಲಾಗಿದೆ. ಅಷ್ಟೇ ಅಲ್ಲ, “ಯಾರ ಭಾವನೆಗಳಿಗೂ ಧಕ್ಕೆ ತರುವುದು ನಮ್ಮ ಉದ್ದೇಶವಾಗಿರಲಿಲ್ಲ. ಪೋಸ್ಟ್‌ನಿಂದ ಬೇಸರ ಆಗಿದ್ದರೆ ಕ್ಷಮೆಯಾಚಿಸುತ್ತೇವೆ” ಎಂಬುದಾಗಿ ಕೇರಳ ಕಾಂಗ್ರೆಸ್‌ ಪ್ರಕಟಣೆ ಹೊರಡಿಸಿದೆ. ಕೇರಳದಲ್ಲಿ ಕ್ರೈಸ್ತ ಸಮುದಾಯದವರು ಜನಸಂಖ್ಯೆಯಲ್ಲಿ ಮೂರನೇ ಅತಿದೊಡ್ಡ ಸಮುದಾಯ ಎನಿಸಿದೆ. ಕೆಲವು ಕ್ರೈಸ್ತ ಸಮುದಾಯದ ಮುಖಂಡರು ಕೂಡ ಕಾಂಗ್ರೆಸ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Mallikarjun Kharge: ಶೀಘ್ರವೇ ಮೋದಿ ಸರ್ಕಾರ ಪತನ; ಭವಿಷ್ಯ ನುಡಿದ ಮಲ್ಲಿಕಾರ್ಜುನ ಖರ್ಗೆ

Exit mobile version