ನವದೆಹಲಿ: ಲೋಕಸಭೆ ಚುನಾವಣೆ ಇರಲಿ, ರಾಜ್ಯ ವಿಧಾನಸಭೆ ಚುನಾವಣೆ ಇರಲಿ, ಟಿಕೆಟ್ ಸಿಗದವರು, ಅತೃಪ್ತರು ಬೇರೆ ಪಕ್ಷಗಳಿಗೆ ಜಿಗಿಯುವುದು ಸಾಮಾನ್ಯ. ಆದರೆ, ಈ ಬಾರಿಯ ಲೋಕಸಭೆ ಚುನಾವಣೆ (Lok Sabha Election 2024) ವೇಳೆ ಕಾಂಗ್ರೆಸ್‌ನ (Congress) ಸಾಲು ಸಾಲು ನಾಯಕರು ಪಕ್ಷ ತೊರೆಯುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಗೌರವ್ ವಲ್ಲಭ್ (Gourav Vallabh) ಅವರು ಪಕ್ಷ ತೊರೆದಿದ್ದಾರೆ. “ಕಾಂಗ್ರೆಸ್‌ನ ಸನಾತನ ಧರ್ಮ ವಿರೋಧಿ ನಿಲುವು ಹಾಗೂ ಪಕ್ಷಕ್ಕೆ ಸ್ಪಷ್ಟ ಗುರಿ ಇಲ್ಲದ ಕಾರಣ ಕಾಂಗ್ರೆಸ್‌ಗೆ ವಿದಾಯ ಹೇಳಿದ್ದೇನೆ” ಎಂದು ಗೌರವ್ ವಲ್ಲಭ್ ಹೇಳಿದ್ದಾರೆ.
“ಕಾಂಗ್ರೆಸ್ ಈಗ ಯಾವುದೇ ಸ್ಪಷ್ಟ ಗುರಿ, ಸಿದ್ಧಾಂತ ಇಲ್ಲದೆ ಮುನ್ನಡೆಯುತ್ತಿರುವುದು ನನಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ನಾನು ಸನಾತನ ಧರ್ಮವನ್ನು ವಿರೋಧಿಸಲಾರೆ. ದೇಶದ ಸಮೃದ್ಧಿಯನ್ನು ಹೆಚ್ಚಿಸುತ್ತಿರುವವರ ಬಗ್ಗೆ ಕೆಟ್ಟದಾಗಿ ಮಾತನಾಡಲಾರೆ. ಇದೆಲ್ಲ ಕಾರಣಗಳಿಂದಾಗಿ ಪಕ್ಷದ ಎಲ್ಲ ಹುದ್ದೆಗಳು ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ” ಎಂಬುದಾಗಿ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಗೌರವ್ ವಲ್ಲಭ್ ಅವರು ಪೋಸ್ಟ್ ಮಾಡಿದ್ದಾರೆ. ಆದರೆ, ಅವರು ಯಾವ ಪಕ್ಷ ಸೇರುತ್ತಾರೆ ಎಂಬ ಕುರಿತು ಮಾಹಿತಿ ಲಭ್ಯವಾಗಿಲ್ಲ.
Gourav Vallabh tenders his resignation from the Congress party. pic.twitter.com/4wEGyM2uwL
— ANI (@ANI) April 4, 2024
ನಾನೇ ರಾಜೀನಾಮೆ ಕೊಟ್ಟಿರುವೆ ಎಂದ ಸಂಜಯ್ ನಿರುಪಮ್
ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಅವರನ್ನು ಆರು ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಿದ ಬೆನ್ನಲ್ಲೇ ಅವರು ಸ್ಪಷ್ಟನೆ ನೀಡಿದ್ದಾರೆ. “ನಾನು ಬುಧವಾರವೇ (ಏಪ್ರಿಲ್ 3) ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ. ನನ್ನ ರಾಜೀನಾಮೆ ಪಡೆದ ನಾಯಕರು ಬಳಿಕ ಉಚ್ಚಾಟನೆ ಮಾಡಿದ್ದಾರೆ” ಎಂಬುದಾಗಿ ಸಂಜಯ್ ನಿರುಪಮ್ ಹೇಳಿದ್ದಾರೆ. ಪಕ್ಷವಿರೋಧಿ ಹೇಳಿಕೆ, ಅಶಿಸ್ತಿನ ಕಾರಣದಿಂದಾಗಿ ಇವರನ್ನು ಉಚ್ಚಾಟನೆ ಮಾಡಲಾಗಿದೆ ಎಂಬುದಾಗಿ ಕಾಂಗ್ರೆಸ್ ತಿಳಿಸಿದೆ.
ಕೆಲ ದಿನಗಳ ಹಿಂದಷ್ಟೇ ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಆರ್ಕೆಎಸ್ ಬದೌರಿಯಾ ಬಿಜೆಪಿಗೆ ಸೇರಿದ್ದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರು ಭಾರತೀಯ ವಾಯುಪಡೆಯಲ್ಲಿ ಬದೌರಿಯಾ ಅವರ ಸುದೀರ್ಘ ಸೇವೆಯನ್ನು ಶ್ಲಾಘಿಸಿ ಪಕ್ಷಕ್ಕೆ ಬರ ಮಾಡಿಕೊಂಡಿದ್ದರು. ಇನ್ನು ಜಿಂದಾಲ್ ಕಂಪನಿ ಚೇರ್ಮನ್ ನವೀನ್ ಜಿಂದಾಲ್ ಅವರು ಕೂಡ ಕಾಂಗ್ರೆಸ್‌ಗೆ ವಿದಾಯ ಹೇಳಿದ್ದು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೂಡ ಗಿಟ್ಟಿಸಿಕೊಂಡಿದ್ದಾರೆ.
ಇದನ್ನೂ ಓದಿ: Vijender Singh: ಕಾಂಗ್ರೆಸ್‌ಗೆ ಪಂಚ್ ನೀಡಿ ಬಿಜೆಪಿ ಸೇರಿದ ಬಾಕ್ಸರ್ ವಿಜೇಂದರ್ ಸಿಂಗ್
ಇದಕ್ಕೂ ಮೊದಲು ಖ್ಯಾತ ಬಾಲಿವುಡ್ ಗಾಯಕಿ ಅನುರಾಧಾ ಪೌಡ್ವಾಲ್ ಅವರು ಮಾರ್ಚ್ 16ರಂದು ಬಿಜೆಪಿ ಸೇರಿದ್ದಾರೆ. ದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಮುಖಂಡರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪೌಡ್ವಾಲ್, ಪ್ರಧಾನಿ ನರೇಂದ್ರ ಮೋದಿ ಅವರನ್ನು (Anuradha Paudwal joins BJP) ಹಾಡಿ ಹೊಗಳಿದ್ದರು. ʻʻಮೋದಿ ನೇತೃತ್ವದಲ್ಲಿ ಪಕ್ಷಕ್ಕೆ ಸೇರಲು ನನಗೆ ಸಂತೋಷವಾಗಿದೆ’’ ಎಂದಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ