ಬೆಂಗಳೂರು: ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ʼಕಾಂತಾರʼ ಸಿನಿಮಾ ವಿರುದ್ಧ ನಟ ಚೇತನ್ ವಿವಾದಾತ್ಮಕ ಟ್ವೀಟ್ ಮಾಡಿ ಅನೇಕರ ಜನಾಕ್ರೋಶಕ್ಕೆ ಗುರಿಯಾಗಿದ್ದಾರೆ.
ʼʼಕಾಂತಾರ ಸಿನಿಮಾ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿ ಇದೆ. ಆದರೆ ಭೂತಕೋಲ ಹಿಂದೂ ಸಂಸ್ಕೃತಿ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ, ನಲಿಕೆ, ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣೀಯ ಹಿಂದೂ ಧರ್ಮಕ್ಕಿಂತ ಹಿಂದಿನವು. ಮೂಲನಿವಾಸಿ ಸಂಸ್ಕೃತಿಗಳನ್ನು ಸಿನಿಮಾದಲ್ಲಿ ಸತ್ಯದೊಂದಿಗೆ ಪ್ರದರ್ಶಿಸಬೇಕು ಎಂದು ನಾನು ಕೋರುತ್ತೇನೆʼʼ ಎಂದು ಚೇತನ್ ಟ್ವೀಟ್ ಮಾಡಿದ್ದರು.
ಈ ಟ್ವೀಟ್ ಈಗ ಕನ್ನಡ ಸಿನಿಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಹಲವರು ಇದಕ್ಕೆ ಕಟು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ʼಮೊಸರಲ್ಲಿ ಕಲ್ಲು ಹುಡುಕಬೇಡಿ ಚೇತನ್ʼ ʼನೀವು ಅಮೆರಿಕದ ಸಿಟಿಜನ್, ನಿಮಗೆ ಹಿಂದೂ ಧರ್ಮದ ಬಗೆಗೆ ಎಷ್ಟು ಗೊತ್ತು?ʼ ʼನಮ್ಮ ಕನ್ನಡ ಸಿನಿಮಾ ನಿಮ್ಮ ಅಮೆರಿಕದಲ್ಲೂ ಜಯಭೇರಿ ಬಾರಿಸುತ್ತಿದೆ ಎಂದು ನಿಮಗೆ ಅಸೂಯೆಯೇ?ʼ ʼಭೂತಕೋಲದ ಬಗ್ಗೆ ನಿಮಗೆಷ್ಟು ಗೊತ್ತು? ಕರಾವಳಿಗೆ ನೀವು ಎಷ್ಟು ಸಲ ಭೇಟಿ ನೀಡಿದ್ದೀರಿ?ʼ ʼಈ ವರೆಗೆ ಒಂದೇ ಒಂದು ಹಿಟ್ ಫಿಲಂ ಕೂಡ ನೀಡಲಾಗದ ನಿಮ್ಮಂಥವರಿಂದ ರಿಷಬ್ ಶೆಟ್ಟಿಯವರು ಪಾಠ ಹೇಳಿಸಿಕೊಳ್ಳುವ ಅಗತ್ಯ ಇದೆಯಾ?ʼ ‘ಕೋಟ್ಯಂತರ ಗಳಿಸಿರುವ ಸಿನಿಮಾಗೆ ನಿಮ್ಮ ಸರ್ಟಿಫಿಕೇಟ್ ಬೇಕಿಲ್ಲʼ ʼಸದ್ಎಂಯ ಯಾವುದೇ ವಿವಾದ ಸಿಗಲಿಲ್ಲ ಅಂತ ಕಾಂತಾರಕ್ಕೆ ಕೈ ಹಾಕೋಕೆ ಬಂದಿರಾ?ʼ ಎಂದೆಲ್ಲಾ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.
ʼಆ ದಿನಗಳುʼ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಚೇತನ್, ನಟನೆಗಿಂತಲೂ ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಅವರು ಅಮೆರಿಕದ ಪೌರತ್ವ ಹಿನ್ನೆಲೆ ಹೊಂದಿದ್ದಾರೆ. ಈ ಹಿಂದೆ ಪ್ರಚೋದನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಅವರ ಮೇಲೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದುದನ್ನು ನೆನಪಿಸಿಕೊಳ್ಳಬಹುದು.