Site icon Vistara News

ಕಾಳಿಯ ಕೈಯಲ್ಲಿ ಸಿಗರೇಟು ಕೊಟ್ಟ ನಿರ್ದೇಶಕಿ ಯಾರೀಕೆ?

leena manimekalai

ನವ ದೆಹಲಿ: ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರು ತಮ್ಮ ಇತ್ತೀಚಿನ ಚಿತ್ರ ʻಕಾಳಿ’ಯ ವಿವಾದಾತ್ಮಕ ಪೋಸ್ಟರ್‌ನಿಂದ ಸುದ್ದಿಯಲ್ಲಿದ್ದಾರೆ. ವಕೀಲರೊಬ್ಬರ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಮಂಗಳವಾರ ಈಕೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪೋಸ್ಟರ್ ಬಗ್ಗೆ ಲಖನೌದಲ್ಲಿ ಕೂಡ ಆಕೆಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆದರೆ, ತನ್ನ ಜೀವ ಇರುವವರೆಗೂ ಯಾವುದೇ ಸಾಮಾಜಿಕ ಮಾಧ್ಯಮದ ಟ್ರೋಲ್‌ಗೆ ಮಣಿಯದೆ ಧ್ವನಿ ಎತ್ತುವುದಾಗಿ ಹೇಳಿದ್ದಾರೆ.

ವಿವಾದಿತ ಚಲನಚಿತ್ರ ನಿರ್ಮಾಪಕಿ ಲೀನಾ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲ ವಿಷಯಗಳು ಇಲ್ಲಿವೆ.

  1. ಲೀನಾ ಮಣಿಮೇಕಲೈ ತಮಿಳುನಾಡಿನ ಮಧುರೆಯ ಮಹಾರಾಜಪುರಂ ಎಂಬ ಹಳ್ಳಿಯವರು. ಆಕೆಯ ತಂದೆ ಕಾಲೇಜು ಉಪನ್ಯಾಸಕರಾಗಿದ್ದರು. ಕುಟುಂಬದವರು ತನ್ನ ಮದುವೆ ಮಾಡಿಸಲು ಮುಂದಾದಾಗ ಲೀನಾ ಮನೆ ತೊರೆದು ಚೆನ್ನೈಗೆ ಬಂದರು. ತಮಿಳು ಪತ್ರಿಕೆಯೊಂದರಲ್ಲಿ ಕೆಲಸಕ್ಕೆ ಅರ್ಜಿ ಹಾಕಿದರು. ಪತ್ರಿಕೆಯ ಮಾಲೀಕರು ಆಕೆಯನ್ನು ಅವಳ ಕುಟುಂಬಕ್ಕೆ ಒಪ್ಪಿಸಿದರು. ನಂತರ ಈಕೆ ಎಂಜಿನಿಯರಿಂಗ್ ಮಾಡಿದರು.
  2. ತಮ್ಮ ಕುಟುಂಬವನ್ನು ಪೋಷಿಸಲು ಲೀನಾ ಕೆಲವು ವರ್ಷಗಳ ಕಾಲ ಬೆಂಗಳೂರಿನ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು. ನಂತರ ಹಲವು ಉದ್ಯೋಗಗಳನ್ನು ಬದಲಾಯಿಸಿ, 2002ರಲ್ಲಿ ತಮ್ಮ ಮೊದಲ ಚಿತ್ರ ʼಮಹಾತ್ಮʼದ ಕೆಲಸ ಪ್ರಾರಂಭಿಸಿದರು.
  3. ತಳ ಸಮುದಾಯದ ಕುರಿತ ತಮ್ಮ ಕೆಲಸಕ್ಕಾಗಿ ಅವರು ಹಲವಾರು ಫೆಲೋಶಿಪ್‌ ಪಡೆದಿದ್ದಾರೆ. ಅವರ ಚಲನಚಿತ್ರಗಳು ಕೆಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿವೆ. ಆದರೆ ತಮ್ಮ ಮನೆಯ ಬಾಡಿಗೆಯನ್ನು ಪಾವತಿಸಲು ಸಾಧ್ಯವಾಗದೆ ಕೇಸ್‌ಗೆ ಒಳಗಾಗಿದ್ದುಂಟು.
  4. 2002ರಲ್ಲಿ ಬಂದ ಇವರ ಚಲನಚಿತ್ರ ʼಮಹಾತ್ಮʼ ಅಪ್ರಾಪ್ತ ಬಾಲಕಿಯರನ್ನು ದೇವಾಲಯಗಳಿಗೆ ಹಸ್ತಾಂತರಿಸಿದ ನಂತರ ಅವರು ಅರ್ಚಕರಿಂದ ಹೇಗೆ ಶೋಷಣೆಗೆ ಒಳಗಾಗುತ್ತಾರೆ ಎಂದು ಚಿತ್ರಿಸುತ್ತದೆ. ಇದು ಭಾರೀ ವಿವಾದವನ್ನು ಹುಟ್ಟುಹಾಕಿತು. 2004ರಲ್ಲಿ ಅವರು ದಲಿತ ಮಹಿಳೆಯರ ಮೇಲೆ ಮತ್ತೊಂದು ಚಲನಚಿತ್ರ ಮಾಡಿದರು. ಅದೂ ವಿವಾದಕ್ಕೆ ಸಿಲುಕಿತು.
  5. 2011ರಲ್ಲಿ ಧನುಷ್ಕೋಡಿಯ ಮೀನುಗಾರರ ಸಂಕಷ್ಟದ ಕುರಿತು ‘ಸೇಂಗಡಲ್’ ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದರು. ಅದು ಮತ್ತೊಂದು ವಿವಾದ ಹುಟ್ಟುಹಾಕಿತು. ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಯೊಂದಿಗೆ ಸುದೀರ್ಘ ಹೋರಾಟ ನಡೆಯಿತು. ನಂತರ ಬಿಡುಗಡೆಯಾದ ಚಲನಚಿತ್ರ ಹಲವಾರು ಅಂತಾರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿತು.
  6. ಇವರು ವಿವಾದಾತ್ಮಕ ಟ್ವೀಟ್‌ಗಳಿಗೆ ಕುಖ್ಯಾತರಾಗಿದ್ದಾರೆ. 2013ರಲ್ಲಿ ʼʼನನ್ನ ಜೀವಿತಕಾಲದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೆ ನಾನು ನನ್ನ ಪಾಸ್‌ಪೋರ್ಟ್‌, ರೇಷನ್‌ ಕಾರ್ಡ್‌, ಪ್ಯಾನ್‌ ಕಾರ್ಡ್‌, ಪೌರತ್ವ ಎಲ್ಲವನ್ನೂ ತ್ಯಜಿಸಿಬಿಡುತ್ತೇನೆʼʼ ಎಂದು ಟ್ವೀಟ್‌ ಮಾಡಿದ್ದರು.
  7. 2017ರ ಒಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ, ತಾವು ಇಂಡಸ್ಟ್ರಿಯಲ್ಲಿ ಲೈಂಗಿಕ ಕಿರುಕುಳ ಎದುರಿಸಿದೆ ಎಂದು ಬರೆದುಕೊಂಡರು. ಒಂದು ವರ್ಷದ ನಂತರ, ತನ್ನನ್ನು ದುರ್ಬಳಕೆ ಮಾಡಿದವರು ಚಲನಚಿತ್ರ ನಿರ್ಮಾಪಕ ಸುಸಿ ಗಣೇಶನ್ ಎಂದು ಬರೆದರು. ಗಣೇಶನ್‌ ಈಕೆಯ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದರು.

ಇದನ್ನೂ ಓದಿ: ಕಾಳಿ ಮಾಂಸ, ಮದ್ಯ ಸೇವಿಸುವ ದೇವಿ; ಉರಿಯುತ್ತಿರುವ ವಿವಾದಕ್ಕೆ ಸಂಸದೆ ಮಹುವಾ ಉರುವಲು !

Exit mobile version