Site icon Vistara News

Ayodhya Ram mandir: ಅಯೋಧ್ಯೆ ರಾಮ ಮಂದಿರದಲ್ಲಿ ಫೈರಿಂಗ್, ಕಮಾಂಡೋ ಸ್ಥಿತಿ ಗಂಭೀರ;‌ ಏನಾಯಿತು?

ayodhya ram mandir

ಅಯೋಧ್ಯೆ: ಮಂಗಳವಾರ ಸಂಜೆ ಇಲ್ಲಿನ ರಾಮ ಜನ್ಮಭೂಮಿ (Ayodhya Ram mandir) ಸಂಕೀರ್ಣದಲ್ಲಿ ಗುಂಡಿನ ಸದ್ದು (Firing) ಮೊಳಗಿದೆ. ಇಲ್ಲಿ ಭದ್ರತಾ ಕರ್ತವ್ಯದಲ್ಲಿರುವ ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ (ಪಿಎಸಿ) ಕಮಾಂಡೋ (commando) ಒಬ್ಬರು, ತಮ್ಮ ಪೋಸ್ಟ್‌ನಲ್ಲಿ ಶಸ್ತ್ರಾಸ್ತ್ರವನ್ನು ಸ್ವಚ್ಛಗೊಳಿಸುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಸಿಡಿದಿದ್ದು, ಇದರಿಂದ ಅವರು ಗಾಯಗೊಂಡಿದ್ದಾರೆ.

ಗಾಯಗೊಂಡಿರುವ ಪ್ಲಟೂನ್ ಕಮಾಂಡರ್ ರಾಮ್ ಪ್ರಸಾದ್ (50) ಅವರನ್ನು ಅಯೋಧ್ಯೆ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿರುವುದರಿಂದ ಅಲ್ಲಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೆಜಿಎಂಯು ಲಕ್ನೋಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಅಯೋಧ್ಯೆಯ ರಾಮಜನ್ಮಭೂಮಿ ಆವರಣದಲ್ಲಿ ಸುಮಾರು 6 ತಿಂಗಳಿಂದ ಕಮಾಂಡೋಗಳನ್ನು ಭದ್ರತಾ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ. ಗುಂಡು ಸಿಡಿದ ವೇಳೆ ಕಮಾಂಡೋ ರಾಮ್‌ ಪ್ರಸಾದ್‌ ಕರ್ತವ್ಯದಲ್ಲಿದ್ದರು ಹಾಗೂ ಅವರು ತಮ್ಮ ಪೋಸ್ಟ್‌ನಲ್ಲಿ ಶಸ್ತ್ರಾಸ್ತ್ರಗಳನ್ನು ಶುಚಿಗೊಳಿಸುತ್ತಿದ್ದರು ಎಂದು ಪೊಲೀಸ್ ಮಹಾನಿರೀಕ್ಷಕ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.

ರಾಮ್ ಪ್ರಸಾದ್ ಅವರ ಎದೆಯ ಎಡಭಾಗಕ್ಕೆ ಗುಂಡು ತಗುಲಿದೆ ಎಂದು ಅಯೋಧ್ಯೆಯ ವೈದ್ಯಕೀಯ ಕಾಲೇಜಿನ ತುರ್ತು ಪ್ರಭಾರಿ ಡಾ.ವಿನೋದ್ ಕುಮಾರ್ ಆರ್ಯ ಹೇಳಿದ್ದಾರೆ. ಅವರ ಸ್ಥಿತಿ ಗಂಭೀರವಾಗಿರುವುದರಿಂದ ಲಕ್ನೋದ ಕೆಜಿಎಂಯುಗೆ ಕಳುಹಿಸಬೇಕಾಯಿತು. ಅವರ ಸ್ಥಿತಿಗತಿಯ ಬಗೆಗೆ ಈಗಲೇ ಏನೂ ಹೇಳಲಾಗದು ಎಂದು ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಸಾದ್ ಅಮೇಥಿ ಜಿಲ್ಲೆಯ ಅಚಲ್‌ಪುರ ಗ್ರಾಮದ ನಿವಾಸಿ. ಗುಂಡಿನ ಸಿಡಿತದ ಹಿನ್ನೆಲೆಯಲ್ಲಿ ಇತರ ಸಂಭವನೀಯ ಕಾರಣಗಳ ಬಗ್ಗೆಯೂ ಆಂತರಿಕ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ. ಅಯೋಧ್ಯಾ ದೇವಾಲಯ ಅತ್ಯಂತ ಹೆಚ್ಚಿನ ಭದ್ರತೆ ಹೊಂದಿರುವ ದೇಶದ ಧಾರ್ಮಿಕ ತಾಣಗಳಲ್ಲಿ ಒಂದಾಗಿದೆ.

ಅಯೋಧ್ಯೆ ರಾಮಮಂದಿರದಲ್ಲಿ ಎರಡು ತಿಂಗಳ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಾಣಪ್ರತಿಷ್ಠೆ ಮಾಡಿದ್ದರು. ಈ ಸಂದರ್ಭದಲ್ಲಿ ಬಿಗಿ ಭದ್ರತೆಯಲ್ಲಿ ಗಣ್ಯರು ಭೇಟಿ ನೀಡಿದ್ದರು. ರಾಮಮಂದಿರದಲ್ಲಿ ಸ್ಫೋಟ ನಡೆಸುವುದಾಗಿ ಖಲಿಸ್ತಾನ್‌ ಉಗ್ರ ಪನ್ನುನ್‌ ಬೆದರಿಕೆ ಹಾಕಿದ್ದ. ಇದಲ್ಲದೆ ಹಲವು ಇಸ್ಲಾಮಿಕ್‌ ಉಗ್ರ ಸಂಘಟನೆಗಳ ಬೆದರಿಕೆಯೂ ಮಂದಿರದ ಮೇಲಿದೆ. ಹೀಗಾಗಿ ಬಿಗಿ ಭದ್ರತೆಗೆ ಕಮಾಂಡೋಗಳನ್ನು ನಿಯೋಜಿಸಲಾಗಿದ್ದು, ಭಕ್ತಾದಿಗಳ ವಿಕ್ಷಣೆಗೆ ಹೆಚ್ಚಿನ ಕಟ್ಟುಪಾಡುಗಳಿವೆ. ಇಲ್ಲಿ ಮೊಬೈಲ್‌ ಅನ್ನು ಕೂಡ ಒಳಗೆ ಒಯ್ಯುವಂತಿಲ್ಲ.

ಇದನ್ನೂ ಓದಿ: Ram Mandir: ಅಯೋಧ್ಯೆಯಲ್ಲಿ ರಾಮನ ದರ್ಶನ ಪಡೆದು ಕೊನೆಯುಸಿರೆಳೆದ ಉಡುಪಿಯ ಭಕ್ತ

Exit mobile version