Site icon Vistara News

Corona Virus: ಸಾಂಕ್ರಾಮಿಕ ರೋಗ ಡಿಸೆಂಬರ್‌ನಲ್ಲೇ ಏಕೆ ಕಾಣಿಸಿಕೊಳ್ಳುತ್ತದೆ?

corona virus

corona virus

ನವದೆಹಲಿ: ಕೇರಳದಲ್ಲಿ ಇತ್ತೀಚೆಗೆ ಕೋವಿಡ್‌ ವೈರಸ್‌ನ (Covid Virus) ಹೊಸ ರೂಪಾಂತರಿಯಾದ COVID Subvariant JN.1 ಪ್ರಕರಣ ವರದಿಯಾಗಿದೆ. ಕೋವಿಡ್ -19 ರೂಪಾಂತರ ಜೆಎನ್. 1 ಈ ರಜಾ ಋತುವಿನಲ್ಲಿ ಹಲವು ದೇಶಗಳಲ್ಲಿ ಪ್ರಾರಂಭವಾಗಿದೆ. ಆದರೆ ಭಾರತದಲ್ಲಿ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.

ʼʼಯಾರೂ ಆತಂಕ ಪಡಬೇಕಾಗಿಲ್ಲ. ಮುನ್ನೆಚ್ಚರಿಕೆ ವಹಿಸಿದರೆ ಸಾಕು. ಸರ್ಕಾರವು ವಿಮಾನ ನಿಲ್ದಾಣಗಳಲ್ಲಿ ಕಣ್ಗಾವಲು ಹೆಚ್ಚಿಸಬೇಕು ಮತ್ತು ಕೋವಿಡ್ -19 ಪರೀಕ್ಷೆಯ ವ್ಯವಸ್ಥೆಯನ್ನು ಮತ್ತೊಮ್ಮೆ ಜಾರಿಗೊಳಿಸಬೇಕುʼʼ ಎಂದು ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.

“ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವುದರಲ್ಲಿ ಅಸಾಮಾನ್ಯವಾದುದೇನೂ ಇಲ್ಲ ಮತ್ತು ಯಾವುದೂ ಆತಂಕಕಾರಿಯಲ್ಲ. ಈ ಪ್ರಕರಣಗಳು ಹೆಚ್ಚಾಗಿ ಬಿಎ 2 (BA2) ಉಪ-ವಂಶಾವಳಿಯಾದ ಜೆಎನ್ .1 ರೂಪಾಂತರದಿಂದ ಹರಡುತ್ತಿದೆ” ಎಂದು ತಜ್ಞ ವೈದ್ಯರು ಹೇಳಿದ್ದಾರೆ. ವಂಶಾವಳಿ ಜೆಎನ್.1 ರೂಪಾಂತರಿ ಮೊದಲು ಲಕ್ಸಂಬರ್ಗ್‌ನಲ್ಲಿ ಕಂಡುಬಂದಿತ್ತು. ಇತ್ತೀಚಿನ ವರದಿಗಳ ಪ್ರಕಾರ ಇದು ಈಗ 38ಕ್ಕೂ ಹೆಚ್ಚು ದೇಶಗಳಲ್ಲಿ ಕಂಡುಬಂದಿದೆ.

ಇದು ಕ್ರಿಸ್ಮಸ್ ಮತ್ತು ರಜಾ ಸಮಯವಾಗಿರುವುದರಿಂದ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಚಾರ ಹೆಚ್ಚಾಗಿರುತ್ತದೆ. ಹೀಗಾಗಿ ರೋಗಕಾರಕಗಳು ಹೆಚ್ಚಾಗಿ ಈ ಸಮಯದಲ್ಲೇ ಗಡಿಗಳನ್ನು ದಾಟಿ ಹರಡುತ್ತವೆ. ಆದ್ಗಿದರಿಂದ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಅಗತ್ಯ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಡಿಸೆಂಬರ್ 8ರಂದು ಕೇರಳದ ಕರಕುಳಂನಲ್ಲಿ ಭಾರತದ ಮೊದಲ ಜೆಎನ್ .1 ಪ್ರಕರಣ ಕಂಡು ಬಂದಿತ್ತು. 79 ವರ್ಷದ ಮಹಿಳೆಯಲ್ಲಿ ಜೆಎನ್ .1 ಗುರುತಿಸಲಾಗಿದೆ. ಅವರು ಇನ್ಫ್ಲುಯೆನ್ಸಾ (influenza) ತರಹದ ರೋಗಲಕ್ಷಣಗಳನ್ನು ಹೊಂದಿದ್ದರು ಮತ್ತು ಹಿಂದೆ ಕೋವಿಡ್ -19 ಬಾಧಿತರಾಗಿ ಚೇತರಿಸಿಕೊಂಡಿದ್ದರು.

“ಪ್ರತಿ ಬಾರಿಯೂ ಕೋವಿಡ್‌ನ ಹೊಸ ಅಲೆಯು ಡಿಸೆಂಬರ್ ಅಥವಾ ಚಳಿಗಾಲದಲ್ಲಿ ಬರುತ್ತದೆ. ಈ ಸಮಯದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದು ಇದಕ್ಕೆ ಕಾರಣ. ಸರ್ಕಾರವು ವಿಮಾನ ನಿಲ್ದಾಣಗಳಲ್ಲಿ ಕಣ್ಗಾವಲು ಹೆಚ್ಚಿಸಬೇಕು ಮತ್ತು ಭಾರತದಾದ್ಯಂತ ಕೋವಿಡ್ -19 ಪರೀಕ್ಷೆಯ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಮುಚ್ಚಿರುವ ಪ್ರಯೋಗಾಲಯಗಳನ್ನು ಮತ್ತೆ ತೆರೆಯಬೇಕುʼʼ ಎಂದು ಆರೋಗ್ಯ ಪರಿಣತರು ಅಭಿಪ್ರಾಯ ಪಟ್ಟಿದ್ದಾರೆ. “ನಾವು ಜಾಗರೂಕರಾಗಿರಬೇಕು. ಪ್ರಕರಣಗಳ ಸಂಖ್ಯೆ ಇನ್ನೂ ನಿಯಂತ್ರಣದಲ್ಲಿದೆʼʼ ಎಂದೂ ಅವರು ಹೇಳಿದ್ದಾರೆ.

ಭಾರತಕ್ಕೆ ಆತಂಕವಿಲ್ಲ

ʼʼಕೋವಿಡ್ -19 ವ್ಯಾಕ್ಸಿನೇಷನ್‌ ಅನ್ನು ದೇಶದಲ್ಲಿ ವ್ಯಾಪಕವಾಗಿ ಬಳಸಿದ್ದರಿಂದ ಭಾರತವು ಸುರಕ್ಷಿತವಾಗಿದೆ. ಎರಡು ವರ್ಷಗಳ ಹಿಂದಿನ ಪರಿಸ್ಥಿತಿ ಈಗಿನ ಪರಿಸ್ಥಿತಿಗಿಂತ ಭಿನ್ನವಾಗಿತ್ತು. ಇಂದು ನಮ್ಮ ಜನಸಂಖ್ಯೆಯ 90%ಕ್ಕೂ ಹೆಚ್ಚು ಜನರು ಲಸಿಕೆ ಪಡೆದಿದ್ದಾರೆʼʼ ಎಂದು ದಾಸ್‌ ಹೇಳಿದ್ದಾರೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಜೆಎನ್ .1 ದಾಳಿಯಿಂದ ಪಾರಾಗಬಹುದು ಎಂದು ವೈದ್ಯರು ಹೇಳುತ್ತಾರೆ. ಅವರ ಮುಖ್ಯ ಕಾಳಜಿ ಸಾರ್ವಜನಿಕರನ್ನು ಭಯಪಡಿಸುವುದಲ್ಲ. ಆದರೆ ಅವರನ್ನು ಎಚ್ಚರಿಸುವುದು. “ವಯಸ್ಸಾದ ದುರ್ಬಲ ಅಥವಾ ಅಪಾಯದಲ್ಲಿರುವವರು ಮಾಸ್ಕ್ ಧರಿಸಬೇಕು ಮತ್ತು ಅನಗತ್ಯವಾಗಿ ಓಡಾಡುವುದನ್ನು ತಪ್ಪಿಸಬೇಕುʼʼ ಎಂದು ಆರೋಗ್ಯ ಪರಿಣತರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Corona Virus: ಕೇರಳದಲ್ಲಿ ಕೊರೊನಾ ಆತಂಕ, ಕೊಡಗು ಗಡಿಯಲ್ಲಿ ತಪಾಸಣೆ ತೀವ್ರ

Exit mobile version