ನವ ದೆಹಲಿ: ಚೀನಾ ಸೇರಿದಂತೆ ಹಲವಾರು ದೇಶಗಳಲ್ಲಿ ಕೋವಿಡ್-19 ವೈರಸ್‌ನ ಹೊಸ ರೂಪಾಂತರಿಯ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ದೇಶದ ಕೋವಿಡ್ ಸನ್ನಿವೇಶವನ್ನು ಚರ್ಚಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಸಂಜೆ ಉನ್ನತ ಮಟ್ಟದ ಸಭೆ ಕರೆದಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು ಈ ಕುರಿತು ಸಭೆ ನಡೆಸಿದ ಒಂದು ದಿನದ ಬಳಿಕ ಪ್ರಧಾನಿ ಸಭೆಯ ಪ್ರಕಟಣೆ ಹೊರಬಿದ್ದಿದೆ. ಕೋವಿಡ್ ಪ್ರೊಟೊಕಾಲ್ ಅನುಸರಿಸಲು, ಜನಸಂದಣಿಗಳಿರುವಲ್ಲಿ ಮಾಸ್ಕ್ ಧರಿಸಲು, ವ್ಯಾಕ್ಸೀನ್ ಹಾಕಿಸಿಕೊಳ್ಳಲು ಮಾಂಡವೀಯ ಸೂಚಿಸಿದ್ದರು.
ಚೀನಾ ಹಾಗೂ ಇತರ ದೇಶಗಳಿಂದ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರ ಯಾದೃಚ್ಛಿಕ ಟೆಸ್ಟ್‌ಗೆ ಸೂಚಿಸಲಾಗಿದೆ. ಚೀನಾ ಮತ್ತು ಇತರ ಕೆಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ದಿಡೀರ್ ಏರಿಕೆಯಾಗಿದೆ. ಜಪಾನ್, ದಕ್ಷಿಣ ಕೊರಿಯಾ, ಬ್ರೆಜಿಲ್, ಅಮೆರಿಕಗಳಲ್ಲೂ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚಿನ ಪಾಸಿಟಿವ್ ಮಾದರಿಗಳ ಜೀನೋಮ್ ಸೀಕ್ವೆನ್ಸಿಂಗ್ ಮಾಡಿಸಲು ರಾಜ್ಯ ಸರ್ಕಾರಗಳಿಗೆ ಒಕ್ಕೂಟ ಸರ್ಕಾರ ಸೂಚಿಸಿದೆ. ಇದರಿಂದ ಹೊಸ ರೂಪಾಂತರಿಗಳ ತಕ್ಷಣದ ಪತ್ತೆ ಹಾಗೂ ತಡೆಗೆ ಅನುಕೂಲವಾಗಲಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಹೇಳಿದ್ದರು.
ಜಗತ್ತಿನಾದ್ಯಂತ ಪ್ರತಿ ವಾರ 35 ಲಕ್ಷದಷ್ಟು ಹೊಸ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ, ಕೋವಿಡ್ ತುರ್ತುಪರಿಸ್ಥಿತಿ ಇನ್ನೂ ಇದೆ ಎಂದು ಭಾವಿಸಲಾಗಿದೆ. ದೆಹಲಿಯಲ್ಲಿ 0.19 ಶೇಕಡಾ ಪ್ರಮಾಣದಲ್ಲಿ ಪಾಸಿಟಿವಿಟಿ ದರ ಇದೆ.
ಇದನ್ನೂ ಓದಿ | Covid wave | ಕೋವಿಡ್ ಆತಂಕ, ಹೊಸ ವರ್ಷದ ಸೆಲೆಬ್ರೇಷನ್‌ಗೆ ಬೀಳುತ್ತಾ ಬ್ರೇಕ್?