ಹಿಸಾರ್, ಹರ್ಯಾಣ: ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದಕ್ಕಾಗಿ ಪ್ರಶಸ್ತಿ ಪಡೆದಿದ್ದ ಮಹಿಳಾ ಎಸ್ಐ (Woman SI) ಒಬ್ಬರು ಲಂಚ ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹ ದಳ(ACB)ದ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಅತ್ಯುತ್ತಮ ಕಾರ್ಯನಿರ್ವಹಣೆ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವುದಕ್ಕಾಗಿ ಎಸ್ಐ ಮುನ್ನಿದೇವಿ ಅವರಿಗೆ ಗಣರಾಜ್ಯೋತ್ಸವ ದಿನ ಪ್ರಶಸ್ತಿ ನೀಡಿ, ಸನ್ಮಾನ ಮಾಡಲಾಗಿತ್ತು! ಅದೇ ಎಸ್ಐ ಈಗ, ಮಹಿಳೆಯೊಬ್ಬರಿಂದ 5000 ರೂ. ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದಿದ್ದಾರೆ(Corruption Case)!
ಮುನ್ನಿ ದೇವಿ ಅವರು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿ ಹಿಸಾರ್‌ನ ಬವಾನಿ ಖೇಡಾ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
Corruption Case: ಮಹಿಳಾ ಎಸ್ಐ ಎಸಿಬಿ ಬಲೆಗೆ ಬಿದ್ದ ವಿಡಿಯೋ ಟ್ವೀಟ್ ಮಾಡಿರುವ ಎನ್‌ಸಿಐಬಿ
ವಸೂಲಾತಿ ಪ್ರಕರಣವೊಂದರಲ್ಲಿ ಎಸ್ಐ ಮುನ್ನಿದೇವಿ ಅವರು ತನಿಖಾಧಿಕಾರಿಯಾಗಿದ್ದರು. ಈ ವೇಳೆ, ಸಂತ್ರಸ್ತ ಮಹಿಳೆಯೊಬ್ಬರ ಕೆಲಸ ಮಾಡಿಕೊಡಲು ಲಂಚಕ್ಕೆ ಮುನ್ನಿದೇವಿ ಬೇಡಿಕೆ ಇಟ್ಟಿದ್ದರು. ಸಂತ್ರಸ್ತೆ ಮಹಿಳೆ ಲಂಚಕ್ಕೆ ಬೇಡಿಕೆ ಇಟ್ಟಿರುವ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಬಳಿಕ ಎಸಿಬಿ ಅಧಿಕಾರಿಗಳ ತಂಡವನ್ನು ರಚಿಸಿತ್ತು. ಮಹಿಳೆಯು, ಎಸ್ಐಗೆ ಐದು ಸಾವಿರ ರೂ. ಲಂಚ ನೀಡುವಾಗ ದಾಳಿ ಮಾಡಿದ ಎಸಿಬಿ ಅಧಿಕಾರಿಗಳ ತಂಡವು, ಮಹಿಳಾ ಎಸ್ಐಯನ್ನು ರೆಡ್ ಹ್ಯಾಂಡ್ ಆಗಿ ಸೆರೆ ಹಿಡಿಯಿತು. ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: Neharu Olekar: ಭ್ರಷ್ಟಾಚಾರ ಪ್ರಕರಣ; ಹಾವೇರಿ ಬಿಜೆಪಿ ಶಾಸಕ, ಇಬ್ಬರು ಪುತ್ರರಿಗೆ ಜೈಲು ಶಿಕ್ಷೆ
ಏತನ್ಮಧ್ಯೆ, ಎಸಿಬಿ ಕಾರ್ಯಾಚರಣೆಯ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಡಲಾಗಿದೆ. ಈ ವಿಡಯೋ ಸಾಕಷ್ಟು ವೈರಲ್ ಆಗಿದೆ. ಸಾಕಷ್ಟು ಜನರು ಮಹಿಳಾ ಎಸ್ಐ ಲಂಚ ಪ್ರವೃತ್ತಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.