ನವ ದೆಹಲಿ: ಉಜ್ಬೆಕಿಸ್ತಾನದಲ್ಲಿ 18 ಮಕ್ಕಳ ಸಾವಿಗೆ ಕಾರಣವಾಗಿರುವ ಕಫ್ ಸಿರಪ್ ತಯಾರಿಕೆ ಕಂಪನಿಯ ಮೂವರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ನೋಯಿಡಾ ಮೂಲದ ಮಾರಿಯೋನ್ ಬಯೋಟೆಕ್ (Marion Biotech) ಕಂಪನಿ ತಯಾರಿಕೆಯ ಕಫ್ ಸಿರಪ್ ಸೇವಿಸಿ ಕಳೆದ ಡಿಸೆಂಬರ್‌ನಲ್ಲಿ ಮಧ್ಯ ಏಷ್ಯಾ ರಾಷ್ಟ್ರ ಉಜ್ಬೆಕಿಸ್ತಾನದಲ್ಲಿ 18 ಮಂದಿ ಮಕ್ಕಳು ಮೃತಪಟ್ಟಿದರು. ಇದಕ್ಕೆ ಸಂಬಂಧಿಸಿ ಭಾರತೀಯ ತನಿಖಾಧಿಕಾರಿಗಳು ಔಷಧ ತಯಾರಿ ಕಂಪನಿಯ ಸ್ಯಾಂಪಲ್‌ಗಳನ್ನು ಪಡೆದು ಪರಿಶೀಲಿಸಿದ್ದು, ಔಷಧ ಕಲಬೆರಕೆಯಾಗಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕಂಪನಿಯ ಕಾರ್ಯಾಚರಣ ಮುಖ್ಯಸ್ಥರ ಹಾಗೂ ಇಬ್ಬರು ಕೆಮಿಸ್ಟ್‌ಗಳನ್ನು ಬಂಧಿಸಲಾಗಿದೆ.
ಈ ಮೂವರಲ್ಲದ ಕಂಪನಿಯ ಇಬ್ಬರು ನಿರ್ದೇಶಕರನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ. ಇವರ ಮೇಲೆ ಐಪಿಸಿ ಹಾಗೂ ಔಷಧ ಕಾಯಿದೆಯ ಔಷಧ ಕಲಬೆರಕೆ (ಸೆಕ್ಷನ್ 274), ಕಲಬೆರಕೆ ಔಷಧ ಮಾರಾಟ (ಸೆಕ್ಷನ್ 275) ಮತ್ತಿತರ ಸೆಕ್ಷನ್‌ಗಳ ಮೇಲೆ ಕೇಸು ದಾಖಲಿಸಲಾಗಿದೆ.
1999ರಲ್ಲಿ ಕಾರ್ಯಾಚರಣೆ ಆರಂಭಿಸಿರುವ ಮಾರಿಯೊನ್ ಬಯೊಟೆಕ್, ಔಷಧೀಯ, ಮೂಲಿಕೆ, ಕಾಸ್ಮೆಟಿಕ್ಸ್ ಉತ್ಪನ್ನಗಳನ್ನು ತಯಾರಿಸುತ್ತದೆ. ಇದು ರಫ್ತು ಮಾಡುವ Dok 1 Max ಹಾಗೂ Ambronol ಹೆಸರಿನ ಕಪ್ ಸಿರಪ್ ಅನ್ನು ಸೇವಿಸಿ ಮಕ್ಕಳು ಅಸುನೀಗಿದ್ದರು. ʼʼಇದರಲ್ಲಿ ಅತಿಯಾದ ಪ್ರಮಾಣದ ಡೈಇಥಿಲೀನ್ ಗ್ಲೈಕಾಲ್ ಮತ್ತು ಇಥಿಲೀನ್ ಗ್ಲೈಕಾಲ್ ಎಂಬ ರಾಸಾಯನಿಕಗಳು ಸೇರ್ಪಡೆಯಾಗಿವೆʼʼ ಎಂದು ಈ ಸ್ಯಾಂಪಲ್‌ಗಳನ್ನು ಪರಿಶೀಲಿಸಿದ ಲ್ಯಾಬ್ ತಿಳಿಸಿತ್ತು. ಈ ಔಷಧವನ್ನು ಸೇವಿಸದಂತೆ ವಿಶ್ವ ಆರೋಗ್ಯ ಸಂಸ್ಥೆ ಅಲರ್ಟ್ ನೀಡಿತ್ತು. ಈ ಔಷಧ ಭಾರತದಿಂದ ರಫ್ತಾಗುತ್ತಿದೆ; ಆದರೆ ಭಾರತದಲ್ಲಿ ಮಾರಾಟವಾಗುತ್ತಿಲ್ಲ.
ಇದನ್ನೂ ಓದಿ: Eye Drops Alert: ಅಮೆರಿಕದಲ್ಲಿ ಸಾವಿಗೆ ಕಾರಣವಾದ ಭಾರತದ ಕಂಪನಿಯ ಐ ಡ್ರಾಪ್ಸ್ ಉತ್ಪಾದನೆ ಸ್ಥಗಿತ