Site icon Vistara News

SpiceJet : ಕಲಾನಿಧಿ ಮಾರನ್‌ಗೆ 380 ಕೋಟಿ ರೂ. ನೀಡಲು ಸ್ಪೈಸ್‌ಜೆಟ್‌ಗೆ ಕೋರ್ಟ್‌ ಆದೇಶ, ಏನಿದು ಕೇಸ್?

SpiceJet Flight Incident

Spicejet passenger caught clicking photos of crew on Delhi-Mumbai flight

ನವ ದೆಹಲಿ: ಮಾಜಿ ಮಾಲೀಕ ಕಲಾನಿಧಿ ಮಾರನ್‌ ಅವರಿಗೆ 380 ಕೋಟಿ ರೂ.ಗಳನ್ನು ಕೊಡಬೇಕೆಂದು ಸ್ಪೈಸ್‌ಜೆಟ್‌ ಏರ್‌ಲೈನ್‌ಗೆ (SpiceJet airline) ದಿಲ್ಲಿ ಹೈಕೋರ್ಟ್‌ ಆದೇಶಿಸಿದೆ. ಇದರೊಂದಿಗೆ ಏರ್‌ಲೈನ್‌ಗೆ ಹಿನ್ನಡೆಯಾಗಿದೆ. ಕಳೆದ ಅಕ್ಟೋಬರ್-ಡಿಸೆಂಬರ್‌ ತ್ರೈಮಾಸಿಕದಲ್ಲಿ ಸ್ಪೈಸ್‌ ಜೆಟ್‌ ಏರ್‌ಲೈನ್‌ 106.8 ಕೋಟಿ ರೂ. ಲಾಭ ಗಳಿಸಿತ್ತು. ದಿಲ್ಲಿ ಹೈಕೋರ್ಟ್‌ 2023 ಮೇ 29ರಂದು ಆ ಆದೇಶ ಹೊರಡಿಸಿದೆ. ಏನಿದು ಕೇಸ್?‌ ನೋಡೋಣ.

ಸ್ಪೈಸ್‌ ಜೆಟ್‌ ಹರಿಯಾಣದ ಗುರ್‌ ಗಾಂವ್‌ ಮೂಲದ ಬಜೆಟ್‌ ಏರ್‌ಲೈನ್.‌ ಇದು ಭಾರತದಲ್ಲಿ ಎರಡನೇ ಅತಿ ದೊಡ್ಡ ಏರ್‌ಲೈನ್.‌ ನಿತ್ಯ 53 ಸ್ಥಳಗಳಿಗೆ ವಿಮಾನ ಹಾರಾಟವನ್ನು ಕೈಗೊಳ್ಳುತ್ತದೆ. 2004ರಲ್ಲಿ ಅಜಯ್‌ ಸಿಂಗ್‌ ಅವರು ಸ್ಪೈಸ್‌ ಜೆಟ್‌ ಅನ್ನು ಸ್ಥಾಪಿಸಿದರು. 2005ರ ಮೇನಲ್ಲಿ ಇದರ ಮೊದಲ ವಿಮಾನ ಹಾರಾಟ ಶುರುವಾಯಿತು. 2010ರಲ್ಲಿ ಸನ್‌ ಗ್ರೂಪ್‌ನ ಕಲಾನಿಧಿ ಮಾರನ್‌ ಅವರು ಸ್ಪೈಸ್‌ ಜೆಟ್‌ನ ಬಹುಪಾಲು ಷೇರು ಖರೀದಿಸಿದರು. 2015ರಲ್ಲಿ ಮತ್ತೆ ಅಜಯ್‌ ಸಿಂಗ್‌ ಅವರಿಗೇ ಮಾರಾಟ ಮಾಡಿದ್ದರು.

ಆದರೆ ಕೊಡುಕೊಳ್ಳುವಿಕೆಯ ಒಪ್ಪಂದಕ್ಕೆ ಸಂಬಂಧಿಸಿ ಮಾರನ್‌ ಕುಟುಂಬ ಹಾಗೂ ಸ್ಪೈಸ್‌ಜೆಟ್‌ ನಡುವೆ ಕಾನೂನು ಸಮರ ನಡೆಯಿತು. 2017ರಲ್ಲಿ ಮಾರನ್‌ ಅವರು ಸ್ಪೈಸ್‌ ಜೆಟ್‌ ವಿರುದ್ಧ ಮೊಕದ್ದಮೆ ಹೂಡಿದ್ದರು. ತಮಗೆ ಮತ್ತು ಕೆಎಎಲ್‌ ಏರ್‌ ವೇಸ್‌ಗೆ ಸಿಗಬೇಕಿದ್ದ ಆದ್ಯತಾ ಷೇರುಗಳನ್ನು ಸ್ಪೈಸ್‌ ಜೆಟ್‌ ಕೊಟ್ಟಿಲ್ಲ ಎಂದು ದೂರಿದ್ದರು. ಸ್ಪೈಸ್‌ ಜೆಟ್‌ ಮಾರನ್‌ ಅವರಿಗೆ ಮೂಲ ಮೊತ್ತ 579 ಕೋಟಿ ರೂ.ಗಳನ್ನು ಪಾವತಿಸಿತ್ತು. ಆದರೆ ಬಡ್ಡಿಯನ್ನು ನೀಡಿರಲಿಲ್ಲ. 2020ರ ಅಕ್ಟೋಬರ್‌ ವೇಳೆಗೆ ಬಡ್ಡಿ 242 ಕೋಟಿ ರೂ.ಗಳಾಗಿತ್ತು. 2023ರ ಫೆಬ್ರವರಿ ವೇಳೆಗೆ 362 ಕೋಟಿ ರೂ.ಗಳಾಗಿತ್ತು. ಅಂತಿಮವಾಗಿ 380 ಕೋಟಿ ರೂ.ಗೆ ಏರಿತ್ತು.

ಕಲಾನಿಧಿ ಮಾರನ್‌ ಅವರು ಸನ್‌ ಗ್ರೂಪ್‌ ಸಂಸ್ಥೆಯ ಸ್ಥಾಪಕರು. ಟಿ.ವಿ ಚಾನೆಲ್‌, ಪತ್ರಿಕೆ, ಡಿಟಿಎಚ್‌ ಉದ್ದಿಮೆಯಲ್ಲಿ ತೊಡಗಿಸಿದ್ದಾರೆ. ಸನ್‌ ರೈಸರ್ಸ್‌ ಹೈದರಾಬಾದ್‌ ಕ್ರಿಕೆಟ್‌ ಟೀಮ್‌ ಮಾಲೀಕರು. ಡಿಎಂಕೆ ನಾಯಕ ಮಾಜಿ ಕೇಂದ್ರ ಸಚಿವ ಮುರಸೋಳಿ ಮಾರನ್‌ ಅವರ ಪುತ್ರ.

ಸ್ಪೈಸ್‌ಜೆಟ್‌ ವಕ್ತಾರರು ನೀಡಿರುವ ಹೇಳಿಕೆಯಲ್ಲಿ, ಮಾರನ್‌ ಮತ್ತು ಕೆಎಎಲ್‌ ಏರ್‌ವೇಸ್‌ ಜತೆ ಅಂತಿಮ ಇತ್ಯರ್ಥಕ್ಕೆ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಸನ್‌ ಗ್ರೂಪ್‌ ಪ್ರತಿಕ್ರಿಯಿಸಿಲ್ಲ. ಷೇರು ಮಾರುಕಟ್ಟೆಯಲ್ಲಿ ಸ್ಪೈಸ್‌ ಜೆಟ್‌ ಷೇರು ದರ 26 ರೂ. ಇತ್ತು.‌

ಇದನ್ನೂ ಓದಿ: IndiGo airline : ದೇಶದ ಅತಿ ದೊಡ್ಡ ಏರ್‌ಲೈನ್‌ ಇಂಡಿಗೊಗೆ 919 ಕೋಟಿ ರೂ. ಲಾಭ, ಕಾರಣವೇನು?

Exit mobile version