Site icon Vistara News

Covid-19 Alert: ಆಸ್ಪತ್ರೆಯಿಂದ ಬಿಡುಗಡೆಯಾದ ಒಂದು ವರ್ಷದೊಳಗೆ 6.5% ಕೋವಿಡ್ ರೋಗಿಗಳ ಸಾವು!

coronavirus

ಹೊಸದಿಲ್ಲಿ: ಕೋವಿಡ್‌ ಪೀಡಿತರನ್ನು (corona virus) ಇನ್ನಷ್ಟು ಗಾಬರಿಗೊಳಿಸುವಂಥ ಅಧ್ಯಯನವೊಂದು (Covid-19 alert) ಪ್ರಕಟವಾಗಿದೆ. ಕೋವಿಡ್‌ನಿಂದಾಗಿ ಆಸ್ಪತ್ರೆವಾಸಿಗಳಾಗಿ ಬಿಡುಗಡೆಯಾಗಿ ಕೋವಿಡ್ ನಂತರದ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಿರುವ ಜನರಲ್ಲಿ ಶೇ.6.5ರಷ್ಟು ಮಂದಿ ಒಂದು ವರ್ಷದಲ್ಲಿ ತೀರಿಕೊಂಡಿದ್ದಾರೆ ಎಂದು ಅಧ್ಯಯನ ಹೇಳಿದೆ. ಇದು ಇಂಡಿಯನ್ ಕೌನ್ಸಿಲ್ ಆಫ್‌ ಮೆಡಿಕಲ್‌ ರಿಸರ್ಚ್‌ (ICMR)ಗೆ ಒಳಪಟ್ಟ ಹಲವು ಆಸ್ಪತ್ರೆಗಳು ಜತೆಯಾಗಿ ನಡೆಸಿದ ಅಧ್ಯಯನದ ಫಲಿತಾಂಶ.

ಕೋವಿಡ್‌ ನಂತರದ ರೋಗಲಕ್ಷಣಗಳನ್ನು ಹೊಂದಿಲ್ಲದವರಿಗೆ ಹೋಲಿಸಿದರೆ, ರೋಗಲಕ್ಷಣ ಹೊಂದಿದ್ದವರಲ್ಲಿ ಮೂರು ಪಟ್ಟು ಹೆಚ್ಚು ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ಒಂದು ವರ್ಷದಲ್ಲಿ ಸಾಯುತ್ತಿದ್ದಾರೆ ಎಂದು ಈ ಅಧ್ಯಯನ ಹೇಳಿದೆ. 31 ಆಸ್ಪತ್ರೆಗಳ 14,419 ಪೇಷೆಂಟ್‌ಗಳ ಮೇಲೆ ನಡೆಸಿದ ಅಧ್ಯಯನದಿಂದ ಈ ಫಲಿತಾಂಶ ಕಂಡುಬಂದಿದೆ. ಕೋಮಾರ್ಬಿಡಿಟಿ (Comorbidity – ಹೃದಯ ಸಮಸ್ಯೆ, ಮಧುಮೇಹ, ಕಿಡ್ನಿ ಸಮಸ್ಯೆ) ಹೊಂದಿದ್ದವರಿಗೆ ಈ ಅಧ್ಯಯನ ಹೆಚ್ಚು ಸಂಬಂಧಿಸಿದೆ.

ಅಧ್ಯಯನದ ಫಲಿತಾಂಶಗಳು ಹೀಗಿವೆ: 2020ರ ಸೆಪ್ಟೆಂಬರ್‌ ವರೆಗೆ ಕೋವಿಡ್‌ನಿಂದ ಆಸ್ಪತ್ರೆವಾಸಿಗಳಾದವರಲ್ಲಿ ಶೇ 17.1 ಮಂದಿಯಲ್ಲಿ ಕೋವಿಡೋತ್ತರ ರೋಗಲಕ್ಷಣಗಳು ಕಂಡುಬಂದಿವೆ. ಕೋವಿಡೋತ್ತರ ರೋಗಲಕ್ಷಣಗಳೆಂದರೆ ಬಹಳ ಬೇಗನೆ ಸುಸ್ತಾಗುವುದು, ಉಸಿರುಗಟ್ಟುವಿಕೆ, ಮರೆಗುಳಿತನ, ಏಕಾಗ್ರತೆ ಸಾಧಿಸುವುದರಲ್ಲಿ ಸಮಸ್ಯೆ ಇತ್ಯಾದಿ.

ಕೋವಿಡೋತ್ತರ ಮೊದಲ ವರ್ಷದ ಸಾವಿನ ಪ್ರಮಾಣ ಪುರುಷರಲ್ಲಿ ಹೆಚ್ಚಿದೆ. ಅದರಲ್ಲೂ 60 ವರ್ಷಕ್ಕೆ ಮೀರಿದ ಗಂಡಸರಲ್ಲಿ ಹಾಗೂ ಬಿಪಿ- ಡಯಾಬಿಟಿಸ್‌ನಂಥ ಕೋಮಾರ್ಬಿಡಿಟೀಸ್‌ ಹೊಂದಿರುವವರಲ್ಲಿ ಅಧಿಕವಿದೆ. ಇದನ್ನು ಕಡಿಮೆ ಮಾಡುವಲ್ಲಿ ವ್ಯಾಕ್ಸೀನ್‌ನ ಪಾತ್ರ ಮಹತ್ವದ್ದಾಗಿದೆ. ಕನಿಷ್ಠ ಒಂದು ಶಾಟ್‌ ಕೋವಿಡ್‌ ಲಸಿಕೆ ಹೊಂದಿದ್ದರೂ ಈಮರಣ ಪ್ರಮಾಣ ಶೇ.40ರಷ್ಟು ಕಡಿಮೆಯಾಗಿದೆ.

ಈ ಅಧ್ಯಯನ ಪ್ರಮುಖವಾಗಿ ಮಧ್ಯಮದಿಂದ ಹೆಚ್ಚು ತೀವ್ರತೆಯ ಕೋವಿಡ್‌ ಹೊಂದಿದವರನ್ನು ಕೇಂದ್ರೀಕರಿಸಿದೆ. ಈ ಮರಣ ಪ್ರಮಾಣವನ್ನು ಎಲ್ಲ ಕೋವಿಡ್‌ ಪೀಡಿತರಿಗೂ ಅನ್ವಯಿಸಬಾರದು. ಕೋವಿಡೋತ್ತರವಾಗಿ ಸ್ವಲ್ಪ ಉಸಿರಾಟದ ಸೋಂಕು ಹೊಂದಿರುವವರು, ಸರಾಗವಾಗಿ ಓಡಾಡಬಲ್ಲವರಿಗೆ ಈ ಮರಣ ಪ್ರಮಾಣ ಅನ್ವಯಿಸಿಲ್ಲ. ಸಾಧಾರಣ ಕೋವಿಡ್‌ ಹೊಂದಿದ್ದು ಗುಣವಾದ, ಹೆಚ್ಚಿನ ಚಿಕಿತ್ಸೆ ಪಡೆಯದ ಜನರಿಗೂ ಇದನ್ನು ಅನ್ವಯಿಸುವಂತಿಲ್ಲ ಎಂದು ಕೂಡ ಈ ಅಧ್ಯಯನ ನಡೆಸಿದ ತಂಡದ ವೈದ್ಯರು ಹೇಳಿದ್ದಾರೆ.

ಈ ಅಧ್ಯಯನದಿಂದ ಕಂಡುಬಂದಿರುವ ಫಲಿತಾಂಶವನ್ನು ಆಧರಿಸಿ ಹೇಳುವುದಾದರೆ, ಕೋವಿಡ್‌ಗೆ ತುತ್ತಾಗಿ ಚೇತರಿಸಿಕೊಂಡಿರುವ, ಕಿಡ್ನಿ ಕಾಯಿಲೆ, ಲಿವರ್‌ ಉರಿಯೂತ ಮುಂತಾದ ಸಮಸ್ಯೆ ಹೊಂದಿರುವವರು ಹೆಚ್ಚು ಜಾಗ್ರತೆಯಿಂದಿರಬೇಕು ಎಂದು ತಂಡ ಹೇಳಿದೆ. ಕೋವಿಡ್-19ರ ನಂತರದ ವರ್ಷದಲ್ಲಿ ವರದಿಯಾದ ಸಾವುಗಳಿಗೆ ಬೇರೆ ಬೇರೆ ಕಾರಣಗಳಿರಲು ಸಾಧ್ಯ. ದೀರ್ಘಕಾಲದ ಉರಿಯೂತ, ವೈರಸ್‌ನಿಂದ ಅಂಗ ಹಾನಿ, ಎಂಡೋಥೀಲಿಯಲ್ (ಶ್ವಾಸಕೋಶದ ಒಳ ಪದರದ) ತೀವ್ರ ಸೋಂಕು ಸೇರಿದಂತೆ ಹಲವು ಕಾರಣದಿಂದಾಗಿರಬಹುದು ಎಂದಿದೆ.

ಇದನ್ನೂ ಓದಿ: Spandana Vijay Raghavendra: ಕೊರೊನಾ ಬಳಿಕ ಹೃದಯಾಘಾತ ಹೆಚ್ಚಳ? ವರದಿ, ತಜ್ಞರು ಹೇಳುವುದೇನು?

Exit mobile version