Site icon Vistara News

ಮೈಮರೆಯದಿರಿ, ಇನ್ನು 10ವರ್ಷಗಳಲ್ಲಿ ಮತ್ತೊಂದು ಮಾರಣಾಂತಿಕ ವೈರಸ್​ ಜಗತ್ತನ್ನು ಕಾಡಬಹುದು; ಅಧ್ಯಯನ ವರದಿ

COVID 19 like Deadly pandemic could hit in 10 years Says Report

#image_title

ನವ ದೆಹಲಿ: 2019ರ ಅಂತ್ಯದಲ್ಲಿ ಕೊವಿಡ್​ 19 (Covid 19)ಸಾಂಕ್ರಾಮಿಕ ಶುರುವಾದಾಗ ಸೋಂಕು ಅತ್ಯಂತ ಮಾರಣಾಂತಿಕವಾಗಿತ್ತು. ಜಗತ್ತಿನಾದ್ಯಂತ ಕೋಟ್ಯಂತರ ಜನರು ಸೋಂಕಿಗೆ ಬಲಿಯಾಗಿದ್ದಾರೆ. ಈಗಲೂ ಕೊರೊನಾ ವೈರಸ್ ಪ್ರಸರಣ ಆಗುತ್ತಲೇ ಇದ್ದರೂ ಪ್ರಾರಂಭದಷ್ಟು ಮಾರಣಾಂತಿಕವಲ್ಲ. ವೈರಸ್​ನ ಶಕ್ತಿ ಕುಂದುತ್ತಿದೆ ಮತ್ತು ವಿಶ್ವದ ಎಲ್ಲೆಡೆ ಜನರು ಕೊರೊನಾ ವಿರುದ್ಧ ಹೋರಾಡುವ ಲಸಿಕೆ ತೆಗೆದುಕೊಂಡಿದ್ದರಿಂದ ಅವರಲ್ಲಿ ಪ್ರತಿರೋಧಕ ಶಕ್ತಿಯೂ ಹೆಚ್ಚಿದೆ. ಹೀಗಾಗಿ ಕೊರೊನಾ ಹೆಚ್ಚುತ್ತಿರುವ ಮಧ್ಯೆಯೂ ಒಂದು ಸಮಾಧಾನ ಇದೆ. ಆದರೆ ನಾವು ಮೈಮರೆಯುವಂತಿಲ್ಲ, ಕೊರೊನಾ ಕಾಟದಿಂದ ಜಗತ್ತು ಮುಕ್ತಿಯಾಗುತ್ತಿದೆ ಎಂದು ತುಂಬ ಖುಷಿ ಪಡುವಂತೆಯೂ ಇಲ್ಲ. ಯಾಕೆಂದರೆ ಇನ್ನು 10 ವರ್ಷಗಳ ಒಳಗೆ ಇನ್ನೊಂದು ಮಾರಣಾಂತಿಕ ವೈರಸ್​ ಜಗತ್ತಿಗೆ ಕಾಲಿಡುವ ಸಾಧ್ಯತೆ ಶೇ.27.5ರಷ್ಟಿದೆ ಎಂದು ಲಂಡನ್​ ಮೂಲದ ಆರೋಗ್ಯ ಸಂಸ್ಥೆ ಏರ್​ಫಿನಿಟಿ ಲಿಮಿಟೆಡ್​ ತಿಳಿಸಿದೆ.

ಇದನ್ನೂ ಓದಿ: H3N2 Influenza: ಕೊವಿಡ್ 19ಗೂ-ಎಚ್​3ಎನ್​2ಗೂ ಏನು ಸಂಬಂಧ?-ಐಸಿಯು ದಾಖಲಾತಿ ಕೇಸ್​​ ಹೆಚ್ಚಾಗುತ್ತಿರುವ ಆತಂಕ

ಅಂತಾರಾಷ್ಟ್ರೀಯವಾಗಿ ಹವಾಮಾನದಲ್ಲಿ ವೈಪರೀತ್ಯ ಆಗುತ್ತಿರುವುದು. ಜನಸಂಖ್ಯೆ ಏರಿಕೆ ಮತ್ತು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಕಾಯಿಲೆಗಳು (ಝೂನೋಟಿಕ್ ರೋಗಗಳು) ಹೆಚ್ಚಾಗುತ್ತಿರುವುದೆಲ್ಲ ಹೀಗೆ ಮಾರಣಾಂತಿಕ ಸೋಂಕುಗಳ ಹರಡುವಿಕೆಗೆ ಬಹುಮುಖ್ಯ ಕಾರಣಗಳು ಎಂದು ಏರ್​ಫಿನಿಟಿ ಲಿಮಿಟೆಡ್​​ ಸಂಸ್ಥೆ ತನ್ನ ಅಧ್ಯಯನದಲ್ಲಿ ವಿವರಿಸಿದೆ. ‘ಹಾಗೇ, ಯಾವುದೇ ಸಾಂಕ್ರಾಮಿಕ ಬಂದರೂ ಕೂಡ ಲಸಿಕೀಕರಣ, ಮುನ್ನೆಚ್ಚರಿಕೆ ಮತ್ತು ಆ ರೋಗವನ್ನು ಎದುರಿಸಲು ನಾವು ವ್ಯವಸ್ಥಿತವಾಗಿ ಸಿದ್ಧತೆ ಮಾಡಿಕೊಳ್ಳುವ ಮೂಲಕ ಅದನ್ನು ಹಿಮ್ಮೆಟ್ಟಿಸಬಹದು. ಆ ಸೋಂಕಿನಿಂದ ಆಗಬಹುದಾದ ಸಾವನ್ನು ನಿಯಂತ್ರಿಸಬಹುದು. ಅಂದರೆ ಹೊಸ ಸಾಂಕ್ರಾಮಿಕ ಕಾಯಿಲೆ ಪತ್ತೆಯಾಗಿ 100 ದಿನಗಳ ಒಳಗೆ ಅದಕ್ಕೆ ಲಸಿಕೆಯನ್ನು ಕಂಡು ಹಿಡಿದು, ಕೊಡಲು ಶುರು ಮಾಡಿದರೆ ರೋಗದಿಂದ ಉಂಟಾಗುವ ಮರಣ ಪ್ರಮಾಣ ಕಡಿಮೆಯಾಗುತ್ತದೆ’ ಎಂಬುದನ್ನೂ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಹಕ್ಕಿಜ್ವರದಂಥ ಮನುಷ್ಯನಿಂದ ಮನುಷ್ಯನಿಗೆ ಹರಡುವ ಸೋಂಕುಗಳು ಲಂಡನ್​​ನಲ್ಲೇ ಒಂದು ದಿನಕ್ಕೆ 15 ಸಾವಿರ ಜನರನ್ನು ಕೊಲ್ಲಬಹುದು ಎಂದೂ ಎಚ್ಚರಿಕೆ ನೀಡಿದೆ.

Exit mobile version