ನವದೆಹಲಿ: ದೇಶದಲ್ಲಿ ಕೋವಿಡ್ ಪ್ರಕರಣಗಳು (Covid-19 Cases) ಹೆಚ್ಚುತ್ತಿದ್ದಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ (Mansukh Mandaviya) ಅವರು ಎಲ್ಲ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರ ಜತೆ ಪರಿಶೀಲನಾ ಸಭೆಯನ್ನು ಶುಕ್ರವಾರ ನಡೆಸಿದ್ದಾರೆ. ಏತನ್ಮಧ್ಯೆ, ಏಪ್ರಿಲ್ 10 ಮತ್ತು 11ರಂದು ಆಸ್ಪತ್ರೆಗಳ ಮೂಲಸೌಕರ್ಯದ ಕುರಿತು ಅಣಕು ಪ್ರದರ್ಶನ ಕೈಗೊಳ್ಳುವಂತೆ ಸೂಚಿಸಿದ್ದಾರೆ (Covid 19 Updates).
ರಾಜ್ಯ ಆರೋಗ್ಯ ಸಚಿವರು ಮತ್ತು ಪ್ರಧಾನ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಜತೆಗಿನ ಈ ವರ್ಚುವಲ್ ಮೀಟಿಂಗ್‌ನಲ್ಲಿ ವೈರಸ್ ಸೋಂಕು ಕಾಯಿಲೆ(ILI) ಹಾಗೂ ತೀವ್ರ ಉಸಿರಾಟ ತೊಂದರೆ ಸೋಂಕು(SARI) ಪ್ರದೇಶಗಳನ್ನು ಗುರುತಿಸಬೇಕು ಮತ್ತು ಹೆಚ್ಚು ಗಮನವನ್ನು ಹರಿಸಬೇಕು. ಟೆಸ್ಟಿಂಗ್ ಮತ್ತು ವ್ಯಾಕ್ಸಿನೇಷನ್ ಹೆಚ್ಚಿಸುವುದರ ಜತೆಗೆ ಆಸ್ಪತ್ರೆಗಳನ್ನು ಸುಸಜ್ಜಿತವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಜೀನೋಮ್ ಸಿಕ್ವೆನ್ಸಿಂಗ್ ಹೆಚ್ಚಿಸುವುದರ ಜೊತೆಗೆ ಸಕಾರಾತ್ಮಕ ಮಾದರಿಗಳ ಸಂಪೂರ್ಣ ಜೀನೋಮ್ ಸೆಕ್ವೆನ್ಸಿಂಗ್ ಹೆಚ್ಚಿಸಬೇಕು. ಕೋವಿಡ್- ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೆ ತರುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಒತ್ತು ನೀಡಬೇಕು ಎಂದು ರಾಜ್ಯಗಳಿಗೆ ಸೂಚಿಸಿದರು. ಕೋವಿಡ್ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಕಾರ್ಯಾಚರಣೆಯನ್ನು ಮಾಡುವುದನ್ನು ಮುಂದುವರಿಸಬೇಕು ಎಂದು ಅವರು ತಿಳಿಸಿದರು.
ಏಪ್ರಿಲ್ 10, 11ಕ್ಕೆ ಅಣಕು ಪ್ರದರ್ಶನ ಮಾಡಿ
ಏಪ್ರಿಲ್ 10 ಮತ್ತು 11ರಂದು ಎಲ್ಲ ಆಸ್ಪತ್ರೆಗಳ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಅಣಕು ಪ್ರದರ್ಶನ ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ತಿಳಿಸಿದ್ದಾರೆ. ಅಲ್ಲದೇ, ಏಪ್ರಿಲ್ 8 ಮತ್ತ 9ರಂದು ಆರೋಗ್ಯ ಸೇವೆಯ ಸಿದ್ಧತೆ ಕುರಿತು ಜಿಲ್ಲಾಡಳಿತ ಹಾಗೂ ಆರೋಗ್ಯ ಅಧಿಕಾರಿಗಳ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದ್ದಾರೆ.
ಬುಧವಾರ ಕೂಡ ಕೋವಿಡ್ ಉನ್ನತಾಧಿಕಾರ ಕಾರ್ಯನಿರತ ಸಮೂಹದ ಜತೆಗೆ ಪರಿಶೀಲನಾ ಸಭೆಯನ್ನು ಕೈಗೊಳ್ಳಲಾಗಿತ್ತು. ಡಾ ವಿಕೆ ಪೌಲ್, ಡಾ ರಾಜೀವ್ ಬಾಹ್ಲ್, ಡಿಜಿ, ಐಸಿಎಂಆರ್ ಹಾಗೂ ಇತರ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ದೇಶದಲ್ಲಿ ಕೋವಿಡ್ ಪರಿಸ್ಥಿತಿ ಹಾಗೂ ಅದನ್ನು ಎದುರಿಸಲು ಮಾಡಿಕೊಳ್ಳಲಾಗಿರುವ ಸಿದ್ಧತೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು ಎನ್ನಲಾಗಿದೆ.
ಭಾರತದಲ್ಲಿ 6000ಕ್ಕೂ ಅಧಿಕ ಕೋವಿಡ್ ಪ್ರಕರಣ
ಭಾರತದಲ್ಲಿ ಕೊರೊನಾ ಸೋಂಕಿನ (Coronavirus) ಸನ್ನಿವೇಶ ಕೈಮೀರುತ್ತಿರುವಂತೆ ಭಾಸವಾಗುತ್ತಿದೆ. ಕಳೆದ 24 ಗಂಟೆಯಲ್ಲಿ 6050 ಕೋವಿಡ್ ಕೇಸ್ಗಳು ದಾಖಲಾಗಿವೆ. ನಿನ್ನೆ ಗುರುವಾರ 5,333 ಕೊರೊನಾ ಸೋಂಕಿತರು ಪತ್ತೆಯಾಗಿದ್ದರು. ನಿನ್ನೆಗಿಂತಲೂ ಶುಕ್ರವಾರ ಕೋವಿಡ್ 19 ಸೋಂಕಿತರ (Covid 19 Updates) ಸಂಖ್ಯೆಯಲ್ಲಿ ಶೇ.13ರಷ್ಟು ಹೆಚ್ಚಳವಾಗಿದೆ. ದೇಶದಲ್ಲೀಗ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 28,303. ಹಾಗೇ, 24ಗಂಟೆಯಲ್ಲಿ 14 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಕೊರೊನಾ ಸಾಂಕ್ರಾಮಿಕ ಶುರುವಾದಾಗಿನಿಂದ ಇಲ್ಲಿಯವರೆಗೆ ಸೋಂಕಿನಿಂದ ಜೀವ ಕಳೆದುಕೊಂಡವರು 5,30,943 ಮಂದಿ.
ಇದನ್ನೂ ಓದಿ: Coronavirus: ಕೋವಿಡ್‌ನಿಂದ ಮೆದುಳು ಸಮಸ್ಯೆ, ಜಪಾನ್‌ನಲ್ಲಿ ಶೇ.10ರಷ್ಟು ಮಕ್ಕಳ ಸಾವು
ದೇಶದಲ್ಲಿ ಕೊರೊನಾ ಮತ್ತೊಂದು ಅಲೆ ಶುರುವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಈಗ ಸೋಂಕು ಹರಡುತ್ತಿದ್ದರೂ ಅಷ್ಟೊಂದು ಮಾರಣಾಂತಿಕವಾಗಿಲ್ಲ. ಕೋವಿಡ್ 19ನಿಂದ ಸಾವನ್ನಪ್ಪುವವರ ಮತ್ತು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಅತ್ಯಂತ ಕಡಿಮೆ ಇದೆ ಎಂದು ಹೇಳಲಾಗಿದ್ದರೂ, ಹರಡುವಿಕೆ ಜೋರಾಗಿಯೇ ಇದೆ. ದೈನಂದಿನ ಪಾಸಿಟಿವಿಟಿ ರೇಟ್ ಶೇ.3.39ರಷ್ಟಿದ್ದು, ವಾರದ ಪಾಸಿಟಿವಿಟಿ ರೇಟ್ ಶೇ.3.0 ಇದೆ. ಜತೆಜತೆಗೆ ಲಸಿಕೀಕರಣ ಕೂಡ ನಡೆಯುತ್ತಿದೆ. ದೇಶದ ಕಟ್ಟಕಡೆಯ ವ್ಯಕ್ತಿಗೂ ಕೋವಿಡ್ 19 ಲಸಿಕೆ ಸಿಗುವಂತೆ ಮಾಡುವುದೇ ಕೇಂದ್ರದ ಸಂಕಲ್ಪವಾಗಿದೆ