ತಿರುವನಂತಪುರಂ: ಸಾಕಷ್ಟು ಆತಂಕಕ್ಕೆ ಕಾರಣವಾಗಿರುವ ಜೆಎನ್.1 (JN.1) ಕೋವಿಡ್ (Covid 19) ಉಪತಳಿಯು ದೇಶದಲ್ಲಿ ವ್ಯಾಪಕವಾಗಿ ಹರಡತೊಡಗಿದೆ. ಅದರಲ್ಲೂ ನಮ್ಮ ನೆರೆಯ ರಾಜ್ಯ ಕೇರಳದಲ್ಲಿ ಇದು ವ್ಯಾಪಕ ಪ್ರಮಾಣದಲ್ಲಿ ಕಂಡು ಬಂದಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ ಡಿಸೆಂಬರ್ 20ರಂದು ಕೇರಳದಲ್ಲಿ 292 ಜೆಎನ್.1 ಪ್ರಕರಣ ಕಂಡು ಬಂದಿದೆ. ಇದರೊಂದಿಗೆ ಅಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 2,041ಕ್ಕೆ ಏರಿದರೆ, ಮೂರು ಸಾವು ದಾಖಲಾಗಿದೆ. ವಿಶ್ವದ ಬಹುತೇಕ ಎಲ್ಲ ದೇಶಗಳಲ್ಲಿ ಕೇರಳದ ಜನ ಒಂದಲ್ಲ ಒಂದು ಕೆಲಸ ಮಾಡುತ್ತ ವಾಸಿಸುತ್ತಿದ್ದಾರೆ. ವಿದೇಶಗಳಿಂದ ಕೇರಳಕ್ಕೆ ಬಂದು ಹೋಗುವವರ ಸಂಖ್ಯೆಯೂ ಸಾಕಷ್ಟಿರುತ್ತದೆ. ಹಾಗಾಗಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಕೇರಳದಲ್ಲೇ ಪ್ರತ್ಯಕ್ಷವಾಗುತ್ತವೆ!
ಕೋವಿಡ್ -19 ಕಾಣಿಸಿಕೊಂಡಾಗಲೆಲ್ಲ ಭಾರತದ ಉಳಿದ ಭಾಗಗಳಿಗಿಂತ ಕೇರಳದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಯುರೋಪ್, ಸಿಂಗಾಪುರ, ನೆದರ್‌ಲ್ಯಾಂಡ್, ಅಮೆರಿಕ ಇತ್ಯಾದಿ ದೇಶಗಳಲ್ಲಿ ಕೋವಿಡ್ ಕಾಣಿಸಿಕೊಂಡಾಗಲೆಲ್ಲ ಅದರ ಪರಿಣಾಮ ಕೇರಳದಲ್ಲಿಯೂ ಕಂಡು ಬಂದಿದೆ. ʼʼಸಾಂಕ್ರಾಮಿಕ ರೋಗ ಕಾಣಿಸಿಕೊಂಡಾಗಲೆಲ್ಲ ಕೇರಳ ಅನುಸರಿಸುವ ಮಾದರಿ ಭಾರತದ ಉಳಿದ ಭಾಗಗಳಿಗಿಂತ ಸ್ವಲ್ಪ ಭಿನ್ನವಾಗಿರುತ್ತದೆ. ಇಲ್ಲಿ ವ್ಯಾಪಕವಾಗಿ ಪರೀಕ್ಷೆ ನಡೆಸಲಾಗುತ್ತದೆ. ಮಾತ್ರವಲ್ಲ ಇಲ್ಲಿನ ಜನಸಂಖ್ಯಾ ಸಾಂದ್ರತೆ ಕೂಡ ವೈರಸ್ ದೀರ್ಘಕಾಲದವರೆಗೆ ಉಳಿಯಲು ಕಾರಣವಾಗುತ್ತದೆʼʼ ಎಂದು ತಜ್ಞರು ಹೇಳುತ್ತಾರೆ. “ದಟ್ಟವಾದ ಜನಸಂಖ್ಯೆಯ ಹೊರತಾಗಿಯೂ ಇತರ ರಾಜ್ಯಗಳಿಗೆ ಹೋಲಿಸಿದರೆ ಕೇರಳದಲ್ಲಿ ವೈರಸ್ ಹರಡುವಿಕೆಯು ತುಂಬಾ ನಿಧಾನವಾಗಿದೆ ಎನ್ನುವುದನ್ನು ಗಮನಿಸಬೇಕುʼʼ ಎಂದು ಅವರು ತಿಳಿಸಿದ್ದಾರೆ.
ಮೆಚ್ಚುಗೆ ವ್ಯಕ್ತಪಡಿಸಿದ್ದ ವಿಶ್ವ ಆರೋಗ್ಯ ಸಂಸ್ಥೆ
2020ರಲ್ಲಿ ಮೊದಲ ಕೋವಿಡ್ ಅಲೆಯ ಸಮಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಕೇರಳ ಕೈಗೊಂಡ ಪ್ರಯತ್ನಗಳನ್ನು ಶ್ಲಾಘಿಸಿತ್ತು. “2020ರ ಜನವರಿಯಲ್ಲಿ ಚೀನಾದಲ್ಲಿ ಏಕಾಏಕಿ ಕೊರೋನಾ ವೈರಸ್ ಕಾಣಿಸಿಕೊಂಡ ನಂತರ ಕೇರಳ ಮಾದರಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿತ್ತು. 2020ರ ಜನವರಿ 30ರಂದು ಭಾರತದಲ್ಲೇ ಮೊದಲ ಬಾರಿಗೆ ಕೇರಳದಲ್ಲಿ ಕೋವಿಡ್ -19 ಪ್ರಕರಣ ಪತ್ತೆಯಾಗಿತ್ತು. 2020ರ ಫೆಬ್ರವರಿ 2 ಮತ್ತು 3ರಂದು ಇನ್ನೂ ಎರಡು ಪ್ರಕರಣಗಳು ದೃಢಪಟ್ಟ ನಂತರ ಕೇರಳ ಸರ್ಕಾರ ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿತು. ಆರಂಭಿಕ ಹಂತದಲ್ಲಿ ಚೀನಾದಿಂದ ಬರುವ ಎಲ್ಲ ಪ್ರಯಾಣಿಕರು ಮತ್ತು ಅವರೊಂದಿಗೆ ನಿಕಟ ಸಂಪರ್ಕಕ್ಕೆ ಬಂದ ಇತರರ ಮೇಲೆ ಕಣ್ಗಾವಲು ಇರಿಸಲಾಗಿತ್ತು ಮತ್ತು ತೀವ್ರ ತಪಾಸಣೆ ನಡೆಸಿತ್ತುʼʼ ಎಂದು ಡಬ್ಲ್ಯುಎಚ್ಒ ವರದಿಯಲ್ಲಿ ಹೇಳಿತ್ತು.
ಜೂನ್ 30, 2020ರ ವೇಳೆಗೆ ಕೇರಳವು 1,71,846 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿತ್ತು. ಇದಲ್ಲದೆ ಸಮುದಾಯದಲ್ಲಿ ರೋಗದ ಹರಡುವಿಕೆಯನ್ನು ಪರಿಶೀಲಿಸಲು ರಾಜ್ಯದ ಎಲ್ಲ 14 ಜಿಲ್ಲೆಗಳಲ್ಲಿ ಕಣ್ಗಾವಲು ಇರಿಸಿತ್ತು. ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗಳು, ರೋಗಲಕ್ಷಣಗಳಿರುವ ಆರೋಗ್ಯ ಕಾರ್ಯಕರ್ತರು, ರೋಗಿಗಳು ಮತ್ತು ಕೋವಿಡ್ ಶಂಕಿತರ ಸಾವಿನ ಮಾದರಿಗಳನ್ನು ಪರೀಕ್ಷಿಸಲು ಎಂಟು ಸರ್ಕಾರಿ ಸಂಸ್ಥೆಗಳು ಮತ್ತು ಒಂಬತ್ತು ಖಾಸಗಿ ಸಂಸ್ಥೆಗಳಲ್ಲಿ Xpert-SARS-CoV testing ನಡೆಸಲಾಗಿತ್ತು. ಆ ಸಮಯದಲ್ಲಿ, ಕೊಲ್ಲಿ ರಾಷ್ಟ್ರಗಳಲ್ಲಿ ಹೆಚ್ಚಿದ ಕೋವಿಡ್ ಹರಡುವಿಕೆಯು ಕೇರಳದಲ್ಲಿ ಕಳವಳಕ್ಕೆ ಪ್ರಮುಖ ಕಾರಣವಾಗಿತ್ತು. ಅಲ್ಲಿ ಗಣನೀಯ ಪ್ರಮಾಣದಲ್ಲಿ ಕೇರಳಿಗರು ಕೆಲಸ ಮಾಡುತ್ತಿದ್ದಾರೆ ಎಂದು ಡಬ್ಲ್ಯುಎಚ್ಒ ತಿಳಿಸಿತ್ತು.
ವೃದ್ಧರ ಸಂಖ್ಯೆ ಜಾಸ್ತಿ
ಕೇರಳದಲ್ಲಿನ ವೃದ್ಧರ ಸಂಖ್ಯೆಯು ರಾಷ್ಟ್ರೀಯ ಸರಾಸರಿಗಿಂತ ಎರಡು ಪಟ್ಟು ಹೆಚ್ಚಾಗಿರುವುದು ಕೂಡ ಕಳವಳಕ್ಕೆ ಮುಖ್ಯ ಕಾರಣ ಎಂದು ತಜ್ಞರು ಹೇಳುತ್ತಾರೆ. “2011ರ ಜನಗಣತಿಯ ಪ್ರಕಾರ, ಕೇರಳದ ವೃದ್ಧರ ಜನಸಂಖ್ಯೆಯು ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಶೇಕಡಾ 15ರಷ್ಟಿತ್ತು. ಈಗ ಜನಗಣತಿ ನಡೆಸಿದರೆ, ಕೇರಳದ ಹಿರಿಯರ ಸಂಖ್ಯೆ ಶೇಕಡಾ 20ರಷ್ಟಿರುವ ಸಾಧ್ಯತೆ ಇದೆ. ಇದು ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ದ್ವಿಗುಣ. ಕೋವಿಡ್ -19 ಅಪ್ಪಳಿಸಿದಾಗ ಅದು ಕೇರಳದ ಹಿರಿಯ ನಾಗರಿಕರ ಮೇಲೆ ವಿಶೇಷವಾಗಿ 65 ವರ್ಷಕ್ಕಿಂತ ಮೇಲ್ಪಟ್ಟವರ ಮೇಲೆ ಗಂಭೀರ ಪರಿಣಾಮ ಬೀರುತ್ತದೆʼʼ ತಿಳಿಸಿದ್ದಾರೆ.
ಕೇರಳ ಆರೋಗ್ಯ ಇಲಾಖೆಯ ಪ್ರಕಾರ, ನವೆಂಬರ್‌ನಲ್ಲಿ ರಾಜ್ಯದಲ್ಲಿ ಉಸಿರಾಟ ಮತ್ತು ಇನ್‌ಫ್ಲ್ಯುನ್ಸಾ ಮಾದರಿಯ ಅನಾರೋಗ್ಯ (Influenza-like illness-ILI) ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ. ʼʼನವೆಂಬರ್‌ನಲ್ಲಿ ಪರೀಕ್ಷೆಗೆ ಮಾದರಿಗಳನ್ನು ಕಳುಹಿಸಿದ್ದೇವೆ ಮತ್ತು ಅವುಗಳಲ್ಲಿ ಒಂದು ಜೆಎನ್ .1 ಪಾಸಿಟಿವ್ ಕಂಡು ಬಂದಿದೆ. ಉಸಿರಾಟದ ಸೋಂಕುಗಳಲ್ಲಿ ಸ್ವಲ್ಪ ಹೆಚ್ಚಳವನ್ನು ನಾವು ಗಮನಿಸಿದ ನಂತರ ಪರೀಕ್ಷೆಗಳನ್ನು ಹೆಚ್ಚಿಸಲಾಗುತ್ತಿದೆ. ಅನೇಕರು ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದಾರೆ” ಎಂದು ಅಧಿಕಾರಿ ಹೇಳಿದರು.
ಆರೋಗ್ಯ ಸಚಿವೆ ಹೇಳಿದ್ದೇನು?
ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾತನಾಡಿ, ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚು ಕಂಡು ಬರಲು ರಾಜ್ಯದ ʼಅತ್ಯುತ್ತಮ ಮತ್ತು ದೃಢವಾದ ಆರೋಗ್ಯ ವ್ಯವಸ್ಥೆʼ ಕಾರಣ ಎಂದು ಹೇಳಿದ್ದಾರೆ. ʼʼವ್ಯಾಪಕವಾಗಿ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆದಾಗ್ಯೂ ಕೋವಿಡ್ -19 ತಡೆಗಟ್ಟಲು ಮಾಸ್ಕ್ ಧರಿಸುವಂತಹ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ನಾವು ವಯಸ್ಸಾದವರು ಮತ್ತು ಗಂಭೀರ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಸಲಹೆ ನೀಡುತ್ತೇವೆ” ಎಂದು ವೀಣಾ ಜಾರ್ಜ್ ತಿಳಿಸಿದ್ದಾರೆ.
ಇದನ್ನೂ ಓದಿ: Corona Virus: ಸಾಂಕ್ರಾಮಿಕ ರೋಗ ಡಿಸೆಂಬರ್‌ನಲ್ಲೇ ಏಕೆ ಕಾಣಿಸಿಕೊಳ್ಳುತ್ತದೆ?
“ಕೇರಳದಲ್ಲಿ ಕೋವಿಡ್ -19 ಪ್ರಕರಣಗಳಲ್ಲಿ ಹಠಾತ್ ಹೆಚ್ಚಳವಿಲ್ಲ. ವರದಿಯಾಗುತ್ತಿರುವ ಪ್ರಕರಣಗಳು ತುಂಬಾ ಸೌಮ್ಯವಾಗಿವೆ. ಆದರೆ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು. ಉಲ್ಬಣಗೊಳ್ಳುವ ಯಾವುದೇ ರೋಗಲಕ್ಷಣಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸಬೇಕು” ಎಂದು ವೈದ್ಯರು ಎಚ್ಚರಿಸಿದ್ದಾರೆ. ದಸರಾ ಮತ್ತು ದೀಪಾವಳಿ ಹಬ್ಬದ ಋತುವಿನ ನಂತರ, ರಜಾದಿನಗಳಿಗಾಗಿ ಕೇರಳಕ್ಕೆ ಹೋಗುವ ಮತ್ತು ಅಲ್ಲಿಂದ ಹೊರಹೋಗುವ ಪ್ರಯಾಣಿಕರ ಸಂಖ್ಯೆ ಹೆಚ್ಚಳವೂ ರೋಗ ಹರಡಲು ಕಾರಣವಾಗಿದೆ ಎನ್ನುವುದನ್ನು ಕಂಡುಕೊಳ್ಳಲಾಗಿದೆ. ʼʼಕ್ರಿಸ್‌ಮಸ್ ಮತ್ತು ಹೊಸ ವರ್ಷದ ಆಚರಣೆಗಳ ಭಾಗವಾಗಿ ಜನರು ಗುಂಪುಗೂಡುವುದರಿಂದ ರೋಗ ಹರಡುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆ ವಹಿಸಬೇಕುʼʼ ಎಂದು ತಜ್ಞರು ಹೇಳುತ್ತಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ