ಮತ್ತೆ ಕೊರೊನಾ ಆತಂಕ ಎದುರಾಗಿದೆ. ದೂರದ ಚೀನಾದಲ್ಲಿ ವೈರಸ್ ಎಬ್ಬಿಸುತ್ತಿರುವ ಹಾವಳಿಯಿಂದಾಗಿ ನಮ್ಮ ಸರ್ಕಾರಗಳು ಅಲರ್ಟ್ ಆಗಿವೆ. ಅಂತಾರಾಷ್ಟ್ರೀಯ ಏರ್‌ಪೋರ್ಟ್‌ಗಳಲ್ಲಿ ಪರೀಕ್ಷೆ ಆರಂಭವಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧಾರಣೆ ಮಾಡಬೇಕು ಎಂದು ಕರ್ನಾಟಕವೂ ಸೇರಿದಂತೆ ಕೆಲವು ರಾಜ್ಯ ಸರ್ಕಾರಗಳು ಪ್ರಜೆಗಳಿಗೆ ಸೂಚನೆ ನೀಡಿವೆ. ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾದರೆ ಮಾಸ್ಕ್ ಧಾರಣೆ, ಸಾರ್ವಜನಿಕ ಅಂತರ ಕಡ್ಡಾಯವಾಗಬಹುದು; ಜನಜಂಗುಳಿ ಸೇರುವ ಕಾರ್ಯಕ್ರಮಗಳ ಮೇಲೆ ನಿಯಂತ್ರಣವೂ ಬಂದೀತು. ಎಲ್ಲವೂ ಈ ಹಿಂದಿನ ಕೋವಿಡ್ ಅಲೆಗಳಲ್ಲಿ ನಡೆದಂತೆಯೇ ನಡೆಯುವ ಎಲ್ಲ ಸೂಚನೆಗಳೂ ಕಾಣುತ್ತಿವೆ. ಈ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕಾದ ಕೆಲವು ಸಂಗತಿಗಳಿವೆ.
ಕೊರೊನಾ ವೈರಸ್ ನಿಗ್ರಹ ನೆಪದಲ್ಲಿ ಕಳೆದ ಬಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆಗೆದುಕೊಂಡ ಕೆಲವು ನಿರ್ಧಾರಗಳು ತುಘಲಕ್ ನಿರ್ಧಾರದಂತಿದ್ದವು. ಲಾಕ್‌ಡೌನ್ ನಿರ್ಧಾರಗಳು ಕೂಡ ಕೆಲವೊಮ್ಮೆ ಸಮಯೋಚಿತ ಆಗಿರಲಿಲ್ಲ. ದಿಢೀರ್ ಎಂದು ಎಲ್ಲ ವಲಯಗಳನ್ನೂ ಏಕಾಏಕಿ ಮುಚ್ಚಿದ ಪರಿಣಾಮ ಅಸಂಘಟಿತ ವಲಯದಲ್ಲಿದ್ದ ಲಕ್ಷಾಂತರ ವಲಸೆ ಕಾರ್ಮಿಕರು ಅನ್ಯಥಾ ಮಾರ್ಗವಿಲ್ಲದೆ ಪಟ್ಟಣಗಳನ್ನು ತೊರೆದು, ಸಾರಿಗೆಯೂ ಇಲ್ಲದ ಕಾರಣ ಸಾವಿರಾರು ಮೈಲುಗಳ ದೂರದ ತಮ್ಮೂರಿಗೆ ಕಾಲ್ನಡಿಗೆಯಲ್ಲಿ ತೆರಳಬೇಕಾಗಿ ಬಂದದ್ದು, ಈ ಪ್ರಕ್ರಿಯೆಯಲ್ಲಿ ಎಷ್ಟೋ ಮಂದಿ ಜೀವ ಕಳೆದುಕೊಂಡದ್ದು ನಮ್ಮ ಮುಂದಿದೆ. ಅದೊಂದು ಭಯಾನಕ ಸನ್ನಿವೇಶ. ಇವರಿಗೆ ಪರ್ಯಾಯ ಮಾರ್ಗ ಕಲ್ಪಿಸಬೇಕು ಎಂಬ ಒಂದು ಯೋಚನೆಯೂ ನಮ್ಮನ್ನು ಆಳುವವರಿಗೆ ಅಂದು ಬರದೇ ಹೋದುದರಿಂದ ಈ ದುರಂತವನ್ನು ಕಾಣಬೇಕಾಗಿ ಬಂತು. ಹಾಗೆಯೇ ಕೆಲವೊಮ್ಮೆ ಅನಗತ್ಯವಾಗಿ ಲಾಕ್‌ಡೌನ್ ಘೋಷಿಸಿ ವ್ಯಾಪಾರ ವಹಿವಾಟಿನ ಮೇಲೆ ಬರೆ ಎಳೆಯಲಾಯಿತು. ಕೋವಿಡ್ ತಪಾಸಣೆ ಕೂಡ ಸಮರ್ಪಕವಾಗಿ ನಡೆರಲಿಲ್ಲ.
ಆರಂಭದಲ್ಲೇ ವಿದೇಶಗಳಿಂದ ಬರುವ ಪ್ರಯಾಣಿಕರ ತಪಾಸಣೆ ನಡೆಸಿ, ಕ್ವಾರಂಟೈನ್ ಮಾಡದ ಪರಿಣಾಮ, ದೇಶದಲ್ಲಿ ಕೋವಿಡ್ ಕೋಲಾಹಲಕ್ಕೆ ಕಾರಣವಾಗಿತ್ತು. ಬೆಡ್ ಹಂಚಿಕೆಯಲ್ಲಿ, ಆಸ್ಪತ್ರೆ ಸನ್ನದ್ಧತೆಯಲ್ಲಿ ಅಸ್ತವ್ಯಸ್ತತೆ ತಲೆದೋರಿತ್ತು. ಮೊದಲನೇ ಅಲೆ ಇಳಿದ ಬಳಿಕ ಗಂಭೀರತೆ ಅರಿಯದೆ ಸಡಿಲ ಬಿಟ್ಟುದರಿಂದ ಎರಡನೇ ಅಲೆ ಶೋಚನೀಯ ಪರಿಸ್ಥಿತಿ ತಂದಿಟ್ಟಿತ್ತು. ಆಕ್ಸಿಜನ್ ಸಾಕಷ್ಟು ಪ್ರಮಾಣದಲ್ಲಿ ಸಿಗದೆ, ಕೆಲವು ಆಸ್ಪತ್ರೆಗಳಲ್ಲಿ ಸಾಮೂಹಿಕ ಸಾವುಗಳು ಸಂಭವಿಸುವಂತಾಗಿ ಹಾಹಾಕಾರ ಉಂಟಾಗಿತ್ತು. ಎರಡನೇ ಅಲೆಯ ಅಂತ್ಯದ ವೇಳೆಗೆ ಕೊರೊನಾ ಲಸಿಕೆ ಬಂತು; ಅದರ ಹಂಚಿಕೆ ಹೇಗೆ ಮಾಡಬೇಕು ಎಂಬ ಕುರಿತು ಸರ್ಕಾರಗಳ ಬಳಿ ಯಾವುದೇ ಕಾರ್ಯಯೋಜನೆ ಇಲ್ಲದೇ ಹೋದುದರಿಂದ ಪದೇಪದೆ ಲಸಿಕೆ ನೀಡುವಿಕೆಯಲ್ಲಿ ಗೊಂದಲ ಸೃಷ್ಟಿಯಾಯಿತು. ಆ ಬಳಿಕ ಕೊರೊನಾ ಕಡಿಮೆಯಾದಾಗ ಅನಗತ್ಯವಾಗಿ ತಪಾಸಣೆ ನಡೆಸಿ ಜನರಿಗೆ ಕಿರುಕುಳ ನೀಡಲಾಯಿತು!
ಕಳೆದ ಬಾರಿಯ ಈ ಎಲ್ಲ ತಪ್ಪುಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಾಠ ಕಲಿತು ಮುಂದಡಿ ಇಡಬೇಕು. ಈ ಬಾರಿ ಮತ್ತೆ ಇಂಥ ಪ್ರಮಾದಗಳು ಆಗದಿರಲಿ. ಲಾಕ್‌ಡೌನ್‌ನಿಂದ ದೇಶದ ಆರ್ಥಿಕ ಶಕ್ತಿಗೇ ಭಾರಿ ಹೊಡೆತ ಬಿದ್ದು, ಜಿಡಿಪಿ ಋಣಾತ್ಮಕ ಹಂತಕ್ಕೆ ಕುಸಿದಿತ್ತು. ಲಕ್ಷಾಂತರ ಕುಟುಂಬಗಳು ಬೀದಿಗೆ ಬಿದ್ದಿದ್ದವು. ಉದ್ಯೋಗ ಕಳೆದುಕೊಂಡ ನೂರಾರು ಜನ ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದರು. ಸರ್ಕಾರದ ಇಂಥ ವಿವೇಚನಾ ರಹಿತ ಕ್ರಮಗಳಿಂದ ಜನಸಾಮಾನ್ಯರ ಬದುಕು ಮೂರಾಬಟ್ಟೆ ಆಗದಿರಲಿ. ಕೋವಿಡ್ ಪ್ರಸರಣ ತಡೆಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಆದರೆ ಇದು ವಿವೇಚನೆಯಿಂದ ಕೂಡಿರಲಿ. ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ಕೈಗೊಳ್ಳಬೇಕು. ಲಸಿಕೆ, ಔಷಧ, ಆಕ್ಸಿಜನ್, ಆಸ್ಪತ್ರೆ ಬೆಡ್‌ಗಳು ಇತ್ಯಾದಿ ಮೂಲ ಸೌಕರ್ಯಗಳನ್ನು ಸರ್ಕಾರ ಈಗಲೇ ಸಿದ್ಧಪಡಿಸಬೇಕು. ಕೋವಿಡ್ ವಿರುದ್ಧದ ಈ ಬಾರಿಯ ನಮ್ಮ ಸಮರ ಕಳೆದ ಬಾರಿಗಿಂತ ಪರಿಣಾಮ ಆಗಿರಲಿ.
ಹಲವು ತಜ್ಞರು ಈ ಬಾರಿಯ ಕೋವಿಡ್ ಅಲೆ ಭಾರತದಲ್ಲಿ ಹೆಚ್ಚಿನ ಹಾವಳಿ ಎಬ್ಬಿಸದು ಎಂದಿದ್ದಾರೆ. ನಮ್ಮ ಪ್ರಜೆಗಳಲ್ಲಿ ʼಹೈಬ್ರಿಡ್ ಇಮ್ಯುನಿಟಿʼ ಇದೆ; ಬಹುತೇಕ ಎಲ್ಲರೂ ಎರಡು ಡೋಸ್ ಹಾಗೂ ಶೇ.50 ಮಂದಿಗೆ ಮೂರನೇ ಡೋಸ್ ಲಸಿಕೆ ಪಡೆದಿರುವುದರಿಂದ ಇಮ್ಯುನಿಟಿ ಸೃಷ್ಟಿಯಾಗಿದೆ. ಹಾಗೆಯೇ ಚೀನಾದಲ್ಲಿ ಹೊಸ ಅಲೆಗೆ ಕಾರಣವಾಗಿರುವ ಒಮಿಕ್ರಾನ್ BF.7 ರೂಪಾಂತರಿ ನಮ್ಮಲ್ಲಿ ಈಗಾಗಲೇ ಹಲವು ತಿಂಗಳುಗಳಿಂದ ಇದ್ದು, ತಾನು ಅನಾಹುತಕಾರಿಯಲ್ಲ ಎಂದು ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ. ಲಾಕ್‌ಡೌನ್ ವಿಧಿಸಬೇಕು ಎಂದು ಸರ್ಕಾರ ಭಾವಿಸಿದಲ್ಲಿ ಈ ಅಂಶವನ್ನು ಗಣನೆಗೆ ತೆಗೆದುಕೊಳ್ಳಬೇಕು. ತಜ್ಞರ ಅಭಿಮತವನ್ನು ಪರಿಗಣಿಸಬೇಕು. ಒಂದು ವೇಳೆ ಈ ಬಾರಿ ಕೋವಿಡ್ ಅಲೆ ಎದ್ದು, ಸರ್ಕಾರಗಳು ಮತ್ತದೇ ಹಳೆಯ ಪ್ರಮಾದಗಳನ್ನು ಎಸಗಿದರೆ ಜನ ಕ್ಷಮಿಸಲಾರರು.