Site icon Vistara News

Covishield Vaccine: ಕೋವಿಶೀಲ್ಡ್‌ ಲಸಿಕೆ ಹಿಂಪಡೆಯುವುದಾಗಿ ಅಸ್ಟ್ರಾಜೆನೆಕಾ ಘೋಷಣೆ

Covishield Vaccine

ನವದೆಹಲಿ: ಬ್ರಿಟಿಷ್ ಔಷಧೀಯ ದೈತ್ಯ ಕಂಪನಿ ಅಸ್ಟ್ರಾಜೆನೆಕಾ (AstraZeneca)ನ ತನ್ನ ಕೋವಿಡ್-19 (Covid 19) ಲಸಿಕೆ ಕೋವಿಶೀಲ್ಡ್ (Covishield Vaccine)‌ ಅನ್ನು ಜಾಗತಿಕ ಮಟ್ಟದಲ್ಲಿ ಹಿಂಪಡೆಯಲು ಮುಂದಾಗಿದೆ. ಕೋವಿಶೀಲ್ಡ್‌ ಲಸಿಕೆ ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (Thrombosis with Thrombocytopenia Syndrome – TTS) ಎಂಬ ಅಪರೂಪದ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂಬುದನ್ನು ಈ ಹಿಂದೆ ಕೋರ್ಟ್‌ನಲ್ಲಿ ಒಪ್ಪಿಕೊಂಡಿದ್ದ ಈ ಕಂಪನಿಯೂ ಇದೀಗ ವ್ಯಾಪಾರ ಉದ್ದೇಶದಿಂದ ಎಲ್ಲಾ ಮಾರುಕಟ್ಟೆಗಳಿಂದ ತನ್ನ ಈ ಲಸಿಕೆಯನ್ನು ತೆಗೆದು ಹಾಕುವುದಾಗಿ ಘೋಷಿಸಿದೆ.

ಈ ಬಗ್ಗೆ ಸ್ವತಃ ಅಸ್ಟ್ರಾಜೆನೆಕಾ ಕಂಪನಿ ಪ್ರಕಟಣೆ ಹೊರಡಿಸಿದ್ದು, ಇನ್ನು ಮುಂದೆ ಕೋವಿಶೀಲ್ಡ್‌ ಲಸಿಕೆ ತಯಾರಿ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತಿದೆ. ಇನ್ನು ಕೋವಿಶೀಲ್ಡ್‌ ಲಸಿಕೆಯನ್ನು ಹಿಂಪಡೆಯುವ ಉದ್ದೇಶ ಸಂಪೂರ್ಣವಾಗಿ ಗೌಪ್ಯವಾದ ವಿಚಾರ. ಅದೂ ಅಲ್ಲದೇ ಈ ಲಸಿಕೆಯಿಂದ ಅಡ್ಡಪರಿಣಾಮ ಆಗುತ್ತಿದೆ ಎಂಬುದನ್ನು ಒಪ್ಪಿಕೊಂಡಿರುವುದಕ್ಕೂ ಈ ನಿರ್ಧಾರಕ್ಕೂ ಯಾವುದೇ ಸಂಬಂಧ ಇಲ್ಲ. ಇನ್ನು ಕಂಪನಿ ಸ್ವಯಂ ಪ್ರೇರಿತವಾಗಿ ತನ್ನ ಈ ಲಸಿಕೆಯನ್ನು ಮಾರುಕಟ್ಟೆಯಿಂದ ಹಿಂಪಡೆಯುತ್ತಿದೆ. ಮಾ.5ರಂದೇ ಇದಕ್ಕಾಗಿ ಯುರೋಪಿಯನ್‌ ಒಕ್ಕೂಟದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಇನ್ನು ಶೀಘ್ರದಲ್ಲೇ ಇಂಗ್ಲೆಂಡ್‌ ಮತ್ತಿ ಇತರೇ ರಾಷ್ಟ್ರಗಳಲ್ಲಿ ಲಸಿಕೆ ಹಿಂಪಡೆಯಲು ಅರ್ಜಿ ಸಲ್ಲಿಸಲಾಗುತ್ತದೆ ಎಂದು ಹೇಳಿದೆ.

ಬ್ಟಿರಿಷ್ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ (AstraZeneca) ತನ್ನ ಕೋವಿಡ್ ಲಸಿಕೆ ಕೋವಿಶೀಲ್ಡ್‌ ಅಪರೂಪವಾಗಿ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂದು ಒಪ್ಪಿಕೊಳ್ಳುವ ಮೂಲಕ ಜನರನ್ನು ಆತಂಕಕ್ಕೆ ತಳ್ಳಿತ್ತು. ಕೋವಿಶೀಲ್ಡ್ ಅಪರೂಪದ ಸಂದರ್ಭಗಳಲ್ಲಿ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ಪ್ಲೇಟ್‌ಲೆಟ್ ಎಣಿಕೆಗೆ ಕಾರಣವಾಗುವ ಸ್ಥಿತಿಯನ್ನು ಉಂಟುಮಾಡಬಹುದು ಎಂದು ಲಸಿಕೆ ತಯಾರಕರು ನ್ಯಾಯಾಲಯದಲ್ಲಿ ಹೇಳಿದ್ದರು.

ಸಾಂಕ್ರಾಮಿಕ ಸಮಯದಲ್ಲಿ ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಅಭಿವೃದ್ಧಿಪಡಿಸಲಾದ ಕೋವಿಶೀಲ್ಡ್ ಅನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿತು ಮತ್ತು ದೇಶದಲ್ಲಿ ವ್ಯಾಪಕವಾಗಿ ನೀಡುತ್ತಿದೆ. AstraZeneca ಯುಕೆಯಲ್ಲಿ ತನ್ನ ಲಸಿಕೆಯು ಹಲವಾರು ಪ್ರಕರಣಗಳಲ್ಲಿ ಸಾವುಗಳು ಮತ್ತು ತೀವ್ರ ಅಸ್ವಸ್ಥತೆಗೆ ಕಾರಣವಾಯಿತು ಎಂಬ ಆರೋಪದ ಮೇಲೆ ಕ್ಲಾಸ್ ಆಕ್ಷನ್ ಮೊಕದ್ದಮೆಯನ್ನು ಎದುರಿಸುತ್ತಿದೆ. ಯುಕೆ ಹೈಕೋರ್ಟ್‌ನಲ್ಲಿ 51 ಪ್ರಕರಣಗಳಲ್ಲಿ ಸಂತ್ರಸ್ತರು 100 ಮಿಲಿಯನ್ ಪೌಂಡ್‌ಗಳವರೆಗೆ ನಷ್ಟ ಪರಿಹಾರ ಬಯಸಿದ್ದಾರೆ.

ಇದನ್ನೂ ಓದಿ: EVMs Damage: ಚುನಾವಣಾ ಸಿಬ್ಬಂದಿ ಇದ್ದ ಬಸ್‌ನಲ್ಲಿ ಬೆಂಕಿ ಅವಘಡ; ಮತಯಂತ್ರಗಳು ಡ್ಯಾಮೇಜ್‌

ಇನ್ನು ಜನರನ್ನು ಆತಂಕಕ್ಕೀಡು ಮಾಡಿರುವ ಈ ವಿಚಾರದ ಬಗ್ಗೆ ಭಾರತದ ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ, ಮಾಜಿ ICMR ವಿಜ್ಞಾನಿ ಡಾ. ರಾಮನ್ ಗಂಗಾಖೇಡ್ಕರ್ ಸ್ಪಷ್ಟನೆ ನೀಡಿದ್ದು, ಭಾರತದಲ್ಲಿ ಕೊರೊನಾ ವೈರಸ್‌ಎದುರಿಸಲು ಕೋವಿಶೀಲ್ಡ್‌ ಲಸಿಕೆ ತೆಗೆದುಕೊಂಡವರಲ್ಲಿ ರಕ್ತ ಹೆಪ್ಪುಗಟ್ಟುವ ಅಡ್ಡ ಪರಿಣಾಮದ ಅಪಾಯದ ಸಾಧ್ಯತೆಗಳು ತೀರಾ ಕಡಿಮೆ ಎಂದು ಹೇಳಿದ್ದಾರೆ. ಮೊದಲ ಡೋಸ್ ಅನ್ನು ಪಡೆದಾಗ ಅಡ್ಡ ಪರಿಣಾಮದ ರಿಸ್ಕ್‌ ಅತ್ಯಧಿಕವಾಗಿರುತ್ತದೆ. ಆದರೆ ಎರಡನೇ ಡೋಸ್‌ನೊಂದಿಗೆ ಕಡಿಮೆಯಾಗುತ್ತದೆ; ಮೂರನೆಯದರೊಂದಿಗೆ ಮತ್ತೂ ಕಡಿಮೆಯಾಗುತ್ತದೆ. ಅಡ್ಡ ಪರಿಣಾಮ ಸಂಭವಿಸುವುದಾದಲ್ಲಿ, ಲಸಿಕೆ ಪಡೆದ ಎರಡು ಮೂರು ತಿಂಗಳೊಳಗೆ ಕಾಣಿಸಿಕೊಳ್ಳುತ್ತದೆ” ಎಂದು ಗಂಗಾಖೇಡ್ಕರ್ ತಿಳಿಸಿದ್ದರು.

Exit mobile version