Site icon Vistara News

UBS Credit Suisse deal : ಸ್ವಿಸ್‌ ಬ್ಯಾಂಕ್‌ ದಿಗ್ಗಜ ಯುಬಿಎಸ್‌ ತೆಕ್ಕೆಗೆ ಕ್ರೆಡಿಟ್‌ ಸ್ವೀಸ್‌, 26,800 ಕೋಟಿ ರೂ. ಡೀಲ್

credit suisse

ಜ್ಯೂರಿಚ್:‌ ಸ್ವಿಜರ್ಲೆಂಡ್‌ನ ಬ್ಯಾಂಕಿಂಗ್‌ ದಿಗ್ಗಜ ಯುಬಿಎಸ್‌ (UBS) ದಿವಾಳಿಯಾಗುವ ಅಪಾಯದಲ್ಲಿರುವ ಮತ್ತೊಂದು ಸ್ವಿಸ್‌ ಬ್ಯಾಂಕ್‌ ಕ್ರೆಡಿಟ್‌ ಸ್ವೀಸ್‌ ಅನ್ನು 26,800 ಕೋಟಿ ರೂ.ಗಳ ಮೆಗಾ ಡೀಲ್‌ನಲ್ಲಿ (3.25 ಶತಕೋಟಿ ಡಾಲರ್) ಖರೀದಿಸಿದೆ. (UBS Credit Suisse deal) ಒಂದು ವೇಳೆ ಕ್ರೆಡಿಟ್‌ ಸ್ವೀಸ್‌ ದಿವಾಳಿಯಾದರೆ ಜಾಗತಿಕ ಆರ್ಥಿಕತೆಗೆ, ಮುಖ್ಯವಾಗಿ ಪಾಶ್ಚಿಮಾತ್ಯ ದೇಶಗಳ ಬ್ಯಾಂಕಿಂಗ್‌ ಅಲ್ಲೋಲಕಲ್ಲೋಲವಾಗುವ ಸಾಧ್ಯತೆ ಇತ್ತು. ಇದನ್ನು ತಪ್ಪಿಸಲು ಸ್ವಿಸ್‌ ಅಧಿಕಾರಿಗಳು ಇದೀಗ ಮೆಗಾ ಡೀಲ್‌ ಕುದುರಿಸಿದ್ದಾರೆ.

ಈ ಸ್ವಿಸ್‌ ಡೀಲ್‌ ಬಳಿಕ ವಿಶ್ವದ ಸೆಂಟ್ರಲ್‌ ಬ್ಯಾಂಕ್‌ಗಳು ಮುಂಬರುವ ವಾರಗಳಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಸ್ಥಿರಗೊಳಿಸಲು ಸಂಘಟಿತ ಕ್ರಮವನ್ನು ಕೈಗೊಳ್ಳಲು ಮುಂದಾಗಿವೆ. ಪ್ರತಿ ದಿನ ಬ್ಯಾಂಕ್‌ಗಳಿಗೆ ಅಗತ್ಯ ಇದ್ದರೆ ಡಾಲರ್‌ ಸಾಲ ನೀಡಲು ವ್ಯವಸ್ಥೆ ಕಲ್ಪಿಸಲಿವೆ. 2008ರ ಸೆಪ್ಟೆಂಬರ್‌ನಲ್ಲಿ ಅಮೆರಿಕದ ಬ್ಯಾಂಕಿಂಗ್‌ ದಿಗ್ಗಜ ಲೆಹ್ಮನ್‌ ಬ್ರದರ್ಸ್‌ ದಿವಾಳಿಯಾಗಿ ಆರ್ಥಿಕ ಹಿಂಜರಿತ ಸಂಭವಿಸಿದಾಗ ಈ ರೀತಿ ಮಾಡಲಾಗಿತ್ತು. ಆಗ ಬ್ಯಾಂಕ್‌ಗಳು ಸೆಂಟ್ರಲ್‌ ಬ್ಯಾಂಕ್‌ಗಳಿಂದ 580 ಶತಕೋಟಿ ಡಾಲರ್‌ (47 ಲಕ್ಷ ಕೋಟಿ ರೂ.)‌

ಅಮೆರಿಕದಲ್ಲಿ ಎರಡು ಬ್ಯಾಂಕ್‌ಗಳು ರಾತ್ರೋರಾತ್ರಿ ದಿವಾಳಿಯಾದ ಬಳಿಕ ಕ್ರೆಡಿಟ್‌ ಸ್ವೀಸ್‌ ಕೂಡ ಬಿಕ್ಕಟ್ಟಿಗೆ ಸಿಲುಕಿತ್ತು. ಅದರ ಷೇರುಗಳು ಭಾರಿ ಕುಸಿತಕ್ಕೀಡಾಗಿತ್ತು. ಕ್ರೆಡಿಟ್‌ ಸ್ವೀಸ್‌ ಅನ್ನು ಅಪಾಯದಿಂದ ಪಾರು ಮಾಡಬೇಕಾದ ಒತ್ತಡ ಸೃಷ್ಟಿಯಾಗಿತ್ತು. ಏಕೆಂದರೆ ಜಾಗತಿಕವಾಗಿ ಮಹತ್ವದ 30 ಬ್ಯಾಂಕ್‌ಗಳಲ್ಲಿ ( Globally systemically important banks) ಕ್ರೆಡಿಟ್‌ ಸ್ವೀಸ್‌ ಕೂಡ ಒಂದಾಗಿದೆ.

ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆಯಲ್ಲಿ ಸ್ಥಿರತೆಯನ್ನು ಸಾಧಿಸುವ ನಿಟ್ಟಿನಲ್ಲಿ ಇದು ಮಹತ್ವದ ಉಪಕ್ರಮವಾಗಿದೆ. ಒಂದು ವೇಳೆ ಕ್ರೆಡಿಟ್‌ ಸ್ವೀಸ್‌ ಪತನವಾಗದಂತೆ ತಡೆಯದಿದ್ದರೆ ಜಾಗತಿಕ ಆರ್ಥಿಕ ವ್ಯವಸ್ಥೆಗೇ ಅಪಾಯ ಸಂಭವಿಸುತ್ತಿತ್ತು ಎಂದು ಸ್ವಿಜರ್ಲೆಂಡ್‌ ಅಧ್ಯಕ್ಷ ಅಲೈನ್‌ ಬರ್ಸೆಟ್‌ ಹೇಳಿದ್ದಾರೆ. ಸ್ವಿಸ್‌ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ಕ್ರೆಡಿಟ್‌ ಸ್ವೀಸ್‌ ಮಾರಾಟಕ್ಕೆ ಹಾದಿ ಸುಗಮಗೊಳಿಸಿತ್ತು. ಈ ಡೀಲ್‌ ದೊಡ್ಡ ಟರ್ನಿಂಗ್‌ ಪಾಯಿಂಟ್‌ ಎಂದು ಕ್ರೆಡಿಟ್‌ ಸ್ವೀಸ್‌ ಅಧ್ಯಕ್ಷ ಅಕ್ಸೆಲ್‌ ಲೆಹ್ಮನ್‌ ಹೇಳಿದ್ದಾರೆ.

ಇದು ಕ್ರೆಡಿಟ್‌ ಸ್ವೀಸ್‌ಗೆ ಚಾರಿತ್ರಿಕ, ಅತ್ಯಂತ ಸವಾಲಿನ ಮತ್ತು ನೋವಿನ ಘಟನೆ. ಆದರೆ ಭವಿಷ್ಯದ ಹಿತ ದೃಷ್ಟಿಯಿಂದ ಅನಿವಾರ್ಯ. ನಾವೀಗ ಕ್ರೆಡಿಟ್‌ ಸ್ವೀಸ್‌ನ 50000 ಉದ್ಯೋಗಿಗಳು (ಇವರಲ್ಲಿ 17,000 ಮಂದಿ ಸ್ವಿಸ್‌ ಪ್ರಜೆಗಳು) ಹಾಗೂ ಇಡೀ ಬ್ಯಾಂಕಿಂಗ್‌ ವ್ಯವಸ್ಥೆ ಬಗ್ಗೆ ಗಮನಿಸಬೇಕಾಗಿದೆ ಎಂದರು.‌

ಕ್ರೆಡಿಟ್‌ ಸ್ವೀಸ್‌ನಲ್ಲಿ ಆಗಿದ್ದೇನು?

ಕ್ರೆಡಿಟ್‌ ಸ್ವೀಸ್‌ ಬ್ಯಾಂಕ್‌ನಲ್ಲಿ ಅತಿ ಹೆಚ್ಚು ಷೇರುಗಳನ್ನು ಹೊಂದಿರುವ ಸೌದಿ ಅರೇಬಿಯಾದ ಸೌದಿ ನ್ಯಾಶನಲ್‌ ಬ್ಯಾಂಕ್‌ ( Saudi National Bank ) ನೀಡಿರುವ ಹೇಳಿಕೆ ಅನಾಹುತ ಸೃಷ್ಟಿಸಿದೆ. ಸೌದಿ ನ್ಯಾಶನಲ್‌ ಬ್ಯಾಂಕ್‌ ಅಧ್ಯಕ್ಷ ಅಮ್ಮಾರ್‌ ಎಐ ಖುಡೈರಿ ಅವರು, ಮುಂಬರುವ ದಿನಗಳಲ್ಲಿ ಕ್ರೆಡಿಟ್‌ ಸ್ವೀಸ್‌ಗೆ ಯಾವುದೇ ಫಂಡ್‌ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು. ಈ ಹೇಳಿಕೆ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲಕ್ಕೆ ಕಾರಣವಾಗಿದೆ. ಬ್ಯಾಂಕಿನ ವಹಿವಾಟು ಸುಧಾರಿಸುತ್ತಿದೆ ಎಂದು ಕ್ರೆಡಿಟ್‌ ಸ್ವೀಸ್‌ ಸಿಇಒ ಉಲ್‌ ರಿಚ್‌ ಕೊಯೆರ್ನರ್‌ ಹೇಳಿದ ಬೆನ್ನಲ್ಲೇ ಸೌದಿ ನ್ಯಾಶನಲ್‌ ಬ್ಯಾಂಕ್‌ ಅಧ್ಯಕ್ಷರು ನಕಾರಾತ್ಮಕ ಹೇಳಿಕೆ ನೀಡಿದ್ದಾರೆ.

ಈ ನಡುವೆ ಸ್ವಿಸ್‌ ನ್ಯಾಶನಲ್‌ ಬ್ಯಾಂಕ್‌ (swiss national bank), 50 ಶತಕೋಟಿ ಡಾಲರ್‌ (41 ಲಕ್ಷ ಕೋಟಿ ರೂ.) ಸಾಲ ನೀಡುವುದಾಗಿ ಕ್ರೆಡಿಟ್‌ ಸ್ವೀಸ್‌ಗೆ ಭರವಸೆ ನೀಡಿದೆ. ಇದರಿಂದ ಬಿಕ್ಕಟ್ಟು ಉಪಶಮನಕ್ಕೆ ಸಹಕಾರಿಯಾಗುವ ನಿರೀಕ್ಷೆ ಇದೆ. ಕ್ರೆಡಿಟ್‌ ಸ್ವೀಸ್‌ ಬ್ಯಾಂಕ್‌ ಭಾರತದಲ್ಲಿ 20,700 ಕೋಟಿ ರೂ. ಆಸ್ತಿಯನ್ನು ಹೊಂದಿದೆ. ಆಸ್ತಿ ಎಂದರೆ ನಗದು, ಸಾಲ ಇತ್ಯಾದಿ ರೂಪದಲ್ಲಿರುವ ಹಣ. ಹೀಗಿದ್ದರೂ, ಕ್ರೆಡಿಟ್‌ ಸ್ವೀಸ್‌ ಬ್ಯಾಂಕ್‌ ಬಿಕ್ಕಟ್ಟಿನಿಂದ ಭಾರತೀಯ ಬ್ಯಾಂಕಿಂಗ್‌ ವ್ಯವಸ್ಥೆಗೆ ಯಾವುದೇ ಧಕ್ಕೆ ಇಲ್ಲ ಎಂದು ವಿಶ್ಲೇಷಕರು ತಿಳಿಸಿದ್ದಾರೆ.

Exit mobile version