ನವ ದೆಹಲಿ: ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಅವರು ಎನ್‌ಡಿಎ ಮತಗಳ ಜತೆಗೆ ಪ್ರತಿಪಕ್ಷಗಳ ಕೆಲವು ಮತಗಳನ್ನೂ ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಈ ಚುನಾವಣೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕ್ರಾಸ್ ವೋಟಿಂಗ್ ಆಗಿದ್ದು, ಬಿಜೆಪಿಯ ವಿರುದ್ಧ ಪ್ರತಿಪಕ್ಷಗಳ ಒಗ್ಗಟ್ಟು ಮರೀಚಿಕೆಯಾಗಿದೆ ಎಂಬುದನ್ನು ಸೂಚಿಸಿದೆ.
ಭಾರತೀಯ ಜನತಾ ಪಾರ್ಟಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಅಭ್ಯರ್ಥಿ ಗೆಲ್ಲುವ ನಿರೀಕ್ಷೆ ಮೊದಲೇ ಇತ್ತು. ಹೀಗಾಗಿ ಚುನಾವಣೆ ಬಹುತೇಕ ಸಾಂಕೇತಿಕವಾಗಿತ್ತು. ಆದರೆ ಪ್ರಸ್ತುತ ಚುನಾವಣೆಯಲ್ಲಿ ಮುರ್ಮು ಅವರು ಸುಮಾರು 70 ಪ್ರತಿಶತದಷ್ಟು ಮತಗಳನ್ನು ಪಡೆದಿದ್ದಾರೆ. ಇದು ಪ್ರತಿಪಕ್ಷಗಳು ಮತ್ತು ಯುಪಿಎ ಪಾಳಯದೊಳಗಿನ ಬಿರುಕುಗಳನ್ನು ಬಹಿರಂಗಪಡಿಸಿದೆ. ಸುಮಾರು 17 ಸಂಸದರು ಮತ್ತು ಸುಮಾರು 102 ಶಾಸಕರು ದ್ರೌಪದಿ ಮುರ್ಮು ಅವರಿಗೆ ಅಡ್ಡ ಮತದಾನ ಮಾಡಿದರು. ನಾಲ್ಕಾರು ಎನ್‌ಡಿಎಯೇತರ ಪಕ್ಷಗಳು ಕಾಂಗ್ರೆಸ್ ನೇತೃತ್ವದ ಯುಪಿಎ ಜೊತೆ ಸೇರಲು ನಿರಾಕರಿಸಿದವು.
ಇದಕ್ಕಿಂತ ಕೆಟ್ಟ ಸಂಗತಿಯೆಂದರೆ, ರಾಷ್ಟ್ರಪತಿ ಚುನಾವಣೆಯಲ್ಲಿ ಯಶವಂತ್ ಸಿನ್ಹಾ ಅವರಿಗೆ ಮತ ಹಾಕಿಋುವ ತೃಣಮೂಲ ಕಾಂಗ್ರೆಸ್ ಪಕ್ಷ ಉಪರಾಷ್ಟ್ರಪತಿ ಚುನಾವಣೆಯ ಮತದಾನದಿಂದ ದೂರವಿರುವುದಾಗಿ, ಯುಪಿಎ ಅಭ್ಯರ್ಥಿ ಮಾರ್ಗರೆಟ್ ಆಳ್ವಾ ಪರವಾಗಿ ನಿಲ್ಲುವುದಿಲ್ಲ ಎಂದು ಗುರುವಾರ ಘೋಷಿಸಿದೆ. ಸಂಸತ್ತಿನ ಅತಿದೊಡ್ಡ ಪ್ರತಿಪಕ್ಷಗಳಲ್ಲಿ ಒಂದಾದ ಟಿಎಂಸಿ, ಆಳ್ವಾ ಅವರನ್ನು ಯುಪಿಎ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಮೊದಲು ಕಾಂಗ್ರೆಸ್ ತನ್ನೊಡನೆ ಸಮಾಲೋಚನೆ ನಡೆಸಿಲ್ಲ ಎಂದಿದೆ.
ಇದರಿಂದ ಆಗುವ ಪರಿಣಾಮ ಎಂದರೆ, ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಸದಾ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಅಡ್ಡಗಾಲು ಹಾಕುತ್ತಲೇ ಇದ್ದ ಎನ್‌ಡಿಎಯ ಉಪರಾಷ್ಟ್ರಪತಿ ಅಭ್ಯರ್ಥಿ ಜಗದೀಪ್ ಧನ್‌ಕರ್ ದೊಡ್ಡ ಗೆಲುವು ಪಡೆಯುವ ಸಾಧ್ಯತೆ. ಯುಪಿಎ ತನ್ನ ಉಪರಾಷ್ಟ್ರಪತಿ ಅಭ್ಯರ್ಥಿಗಾಗಿ ಟಿಎಂಸಿಯನ್ನು ಒಲಿಸುವಲ್ಲಿ ವಿಫಲವಾಗಿರುವುದು 2024ರ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ವಿರುದ್ಧ ದೊಡ್ಡ ಪ್ರತಿರೋಧ ಸೃಷ್ಟಿಸಲು ಮುಂದಾಗಿರುವ ಪ್ರಯತ್ನಗಳಿಗೆ ಒಂದು ಹೊಡೆತ. ಕಾಂಗ್ರೆಸ್ ನಾಯಕತ್ವದಲ್ಲಿ ತೃಣಮೂಲ ವಿಶ್ವಾಸ ಹೊಂದಿಲ್ಲ ಎಂಬುದನ್ನು ಇದು ಸೂಚಿಸಿದೆ.
ಇದನ್ನೂ ಓದಿ: ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಲ್ಲ ಎಂದ ಮಮತಾ ಬ್ಯಾನರ್ಜಿ ಪಕ್ಷ; ಅಸಮಾಧಾನವಂತೆ !
ರಾಜ್ಯದ ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡುವ ಮೂಲಕ, ಯುಪಿಎ ಅಂಗಪಕ್ಷವಾಗಿರುವ ಜಾರ್ಖಂಡ್ ಮುಕ್ತಿ ಮೋರ್ಛಾ ಪಕ್ಷ ಪೂರ್ತಿಯಾಗಿ ಮುರ್ಮು ಅವರಿಗೆ ಮತ ಹಾಕುವಂತೆ ಎನ್‌ಡಿಎ ಮಾಡಿದೆ. ಯುಪಿಯಯಲ್ಲಿರುವ ಅನೇಕ ಬುಡಕಟ್ಟು ಶಾಸಕರು, ಸಂಸದರು, ಮಹಿಳಾ ಅಭ್ಯರ್ಥಿಗೆ ಮತ ಹಾಕಲು ಬಯಸಿದವರು ಯುಪಿಎಯ ಕೈಬಿಡುವಂತೆ ಆಗಿದೆ.
ಕಾಂಗ್ರೆಸ್ ಆಡಳಿತವಿರುವ ಛತ್ತೀಸ್‌ಗಢ ಮತ್ತು ಜಾರ್ಖಂಡ್‌ನಲ್ಲಿಯೂ ಸಹ ಯುಪಿಎ ಶಾಸಕರು ಮುರ್ಮು ಅವರಿಗೆ ಅಡ್ಡ ಮತದಾನ ಮಾಡಿದ್ದಾರೆ. ಇದುವರೆಗಿನ ಫಲಿತಾಂಶದ ಪ್ರಕಾರ ಅಸ್ಸಾಂನಲ್ಲಿ 22, ಛತ್ತೀಸ್‌ಗಢದಲ್ಲಿ 6, ಜಾರ್ಖಂಡ್‌ನಲ್ಲಿ 10, ಮಧ್ಯಪ್ರದೇಶದಲ್ಲಿ 19, ಮಹಾರಾಷ್ಟ್ರದಲ್ಲಿ 16 ಮತ್ತು ಗುಜರಾತ್‌ನಲ್ಲಿ 10 ಶಾಸಕರು ದ್ರೌಪದಿ ಮುರ್ಮು ಅವರಿಗೆ ಅಡ್ಡ ಮತದಾನ ಮಾಡಿದ್ದಾರೆ. ಸಂಸದರ ಪೈಕಿ 540 ಮಂದಿ ಮುರ್ಮುಗೆ ಮತ ಹಾಕಿದ್ದು, ಅಲ್ಲಿನ ಎನ್‌ಡಿಎಯೇತರ ಪಾಳಯದಲ್ಲಿ ದೊಡ್ಡ ಬಿರುಕನ್ನು ತೋರಿಸಿದೆ.
ಬಿಜೆಪಿ ವಿರುದ್ಧವಾಗಿ ಒಕ್ಕೂಟ ಕಟ್ಟಲು ಹೊರಟವರು ಇನ್ನೂ ಸಮಗ್ರವಾಗಿ ಒಂದಾಗಿಲ್ಲ ಎಂಬುದನ್ನು ಈ ವಿಭಜನೆ ಖಚಿತಪಡಿಸಿದೆ.
ಇದನ್ನೂ ಓದಿ: ಶಾಲಾ ಶಿಕ್ಷಕಿಯಿಂದ ರಾಷ್ಟ್ರಪತಿ ತನಕ ದ್ರೌಪದಿ ಮುರ್ಮು ಸಾಧನೆಯ ಜೈತ್ರಯಾತ್ರೆ