Site icon Vistara News

Crowd Funding: ಕಂದಮ್ಮನ ಚಿಕಿತ್ಸೆಗೆ ಹರಿದು ಬಂದ ನೆರವು; 3 ತಿಂಗಳಲ್ಲಿ 9 ಕೋಟಿ ರೂ. ಸಂಗ್ರಹ

Crowd Funding

Crowd Funding

ಜೈಪುರ: ಮಾನವೀಯತೆ ಇನ್ನೂ ಜೀವಂತ ಇದೆ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ. ರಾಜಸ್ಥಾನದ 22 ತಿಂಗಳ ಮಗುವಿನ ಚಿಕಿತ್ಸೆಗೆ ಸ್ಪಂದಿಸಿದ ಅನೇಕರು ಭರಪೂರ ದೇಣಿಗೆ ನೀಡಿದ್ದಾರೆ. ಕ್ರಿಕೆಟ್‌ ಅಟಗಾರರಿಂದ ಹಿಡಿದು, ನಟರು, ತರಕಾರಿ ಮಾರುವವರು, ಬೀದಿಬದಿ ವ್ಯಾಪಾರಿಗಳು ದೇಣಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಸೊಂಟದ ಕೆಳಗೆ ಸಂಪೂರ್ಣ ಸ್ವಾಧೀನ ಕಳೆದುಕೊಂಡ ಮಗುವಿನ ಚಿಕಿತ್ಸೆಗಾಗಿ ಸುಮಾರು 17.5 ಕೋಟಿ ರೂ. ಮೊತ್ತದ ಇಂಜೆಕ್ಷನ್‌ ನೀಡಬೇಕಾಗಿದ್ದು, ಇದಕ್ಕಾಗಿ ಇವರೆಲ್ಲ ಒಂದಾಗಿದ್ದಾರೆ. ತಮ್ಮ ಕೈಲಾದ ಸಹಾಯ ಮಾಡಿ ಮಗುವಿನ ನೆರವಿಗೆ ಧಾವಿಸಿದ್ದಾರೆ (Crowd Funding).

ರಾಜಸ್ಥಾನದ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ನರೇಶ್‌ ಶರ್ಮಾ ಅವರ ಪುತ್ರ ಹೃದಯಾಂಶ್‌ ಶರ್ಮಾ (22 ತಿಂಗಳು) ಅಪರೂಪದ ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ (Spinal muscular atrophy) ಎಂಬ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದಾನೆ. ಈ ಕಾರಣದಿಂದ ಆತನ ಸೊಂಟದ ಕೆಳಭಾಗ ಸಂಪೂರ್ಣ ನಿಷ್ಕ್ರೀಯವಾಗಿತ್ತು. ಇದನ್ನು ವಾಸಿ ಮಾಡಲು, ಸಂಪೂರ್ಣ ಗುಣಮುಖನಾಗಲು ವಿಶ್ವದ ಅತ್ಯಂತ ದುಬಾರಿ ಔಷಧಿಗಳಲ್ಲಿ ಒಂದಾದ ಜೀನ್ ಥೆರಪಿ ಇಂಜೆಕ್ಷನ್‌ ಜೊಲ್ಗೆನ್ಸ್ಮಾ (Zolgensma)ದ ಸಿಂಗಲ್ ಡೋಸ್ ಪಡೆದುಕೊಳ್ಳಬೇಕು ಎಂದು ವೈದ್ಯರು ಸೂಚಿಸಿದ್ದರು. ಅತ್ಯಂತ ದುಬಾರಿಯಾದ ಇದರ ಬೆಲೆ ಅಂದಾಜು 17.5 ಕೋಟಿ ರೂ.

ದೇಣಿಗೆ ಸಂಗ್ರಹಕ್ಕೆ ಮುಂದಾದ ಪೊಲೀಸರು

ಇಷ್ಟೊಂದು ದುಬಾರಿ ಮೊತ್ತ ಭರಿಸಲು ನರೇಶ್‌ ಶರ್ಮಾ ಅವರ ಕುಟುಂಬಕ್ಕೆ ಸಾಧ್ಯವಿರಲಿಲ್ಲ. ಈ ಹಿನ್ನೆಲೆಯಲ್ಲಿ ನೆರವಿಗೆ ಧಾವಿಸಿದ ರಾಜಸ್ಥಾನ ಪೊಲೀಸರು ಸಾವರ್ಜನಿಕ ದೇಣಿಗೆ ಸಂಗ್ರಹಕ್ಕೆ ಮುಂದಾದರು. ಮಗುವಿಗೆ 2 ವರ್ಷ ತುಂಬುವ ಮೊದಲೇ ಈ ಚಿಕಿತ್ಸೆ ನಡೆಯಬೇಕಿರುವುದರಿಂದ ಪೊಲೀಸರು ಫೆಬ್ರವರಿಯಲ್ಲಿ ಕ್ರೌಡ್‌ ಫಡಿಂಗ್‌ ಅಭಿಯಾನ ಆರಂಭಿಸಿದರು. ಈ ಅಭಿಯಾನಕ್ಕೆ ಸೂಕ್ತ ಸ್ಪಂದನೆ ದೊರೆಯಿತು. ಸೆಲೆಬಿಟಿಗಳಾದ ಕ್ರಿಕೆಟಿಗ ದೀಪಕ್‌ ಚಹರ್‌ ಮತ್ತು ಬಾಲಿವುಡ್‌ ನಟ, ಬಹಭಾಷಾ ಕಲಾವಿದ ಸೋನು ಸೂದ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಈ ವಿಚಾರವನ್ನು ಹಂಚಿಕೊಂಡು ನೆರವು ನೀಡಲು ಮನವಿ ಮಾಡಿದರು.

ಹರಿದು ಬಂದ ನೆರವು

ಬಳಿಕ ಜೈಪುರದ ವಿವಿಧ ಕಡೆಗಳಿಂದ ನೆರವು ಹರಿದು ಬರತೊಡಗಿತು. ಅಂಗಡಿಯವರು, ವಿದ್ಯಾರ್ಥಿಗಳು, ಗೃಹಣಿಯರು, ತರಕಾರಿ, ಹಣ್ಣು ಮಾರಾಟಗಾರರು, ಬೀದಿ ಬದಿ ವ್ಯಾಪಾರಿಗಳು ಹೀಗೆ ಎಲ್ಲರೂ ನೆರವಿನ ಹಸ್ತ ಚಾಚಿದರು. ವಿವಿಧ ಎನ್‌ಜಿಒಗಳು ಮತ್ತು ಸಂಸ್ಥೆಗಳು ಕೂಡ ಈ ಅಭಿಯಾನಕ್ಕೆ ಕೈ ಜೋಡಿಸಿದವು. ʼʼರಾಜಸ್ಥಾನದಲ್ಲಿ ಕ್ರೌಡ್‌ ಫಡಂಗ್‌ಗೆ ಈ ರೀತಿಯ ಸ್ಪಂದನೆ ದೊರೆಯುತ್ತಿರುವುದು ಇದು ಮೊದಲ ಬಾರಿʼʼ ಎಂದು ಅಭಿಯಾನದಲ್ಲಿ ತೊಡಗಿಸಿಕೊಂಡಿರುವವರು ಅಭಿಪ್ರಾಯಪಡುತ್ತಾರೆ.

3 ತಿಂಗಳಲ್ಲಿ 9 ಕೋಟಿ ರೂ. ಸಂಗ್ರಹ

3 ತಿಂಗಳ ಅವಧಿಯಲ್ಲಿ ಸುಮಾರು 9 ಕೋಟಿ ರೂ. ಸಂಗ್ರಹವಾಗಿದೆ. ಇದೀಗ ಜೈಪುರದ ಜೆ.ಕೆ. ಲಾನ್‌ ಆಸ್ಪತ್ರೆಯಲ್ಲಿ ಹೃದಯಾಂಶ್‌ಗೆ ಇಂಜೆಕ್ಷನ್‌ ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ. ಉಳಿದ ಮೊತ್ತವನ್ನು ವರ್ಷದೊಳಗೆ ಮೂರು ಕಂತಿಗಳಲ್ಲಿ ಪಾವತಿಸಬಹುದಾದ ಅವಕಾಶವಿದೆ ಎಂದು ಮೂಲಗಳು ತಿಳಿಸಿವೆ.

ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ ಎನ್ನುವುದು ಆನುವಂಶಿಕ ಅಸ್ವಸ್ಥತೆಯಾಗಿದ್ದು, ಇದರಲ್ಲಿ ಬೆನ್ನುಹುರಿ ಮತ್ತು ಮೆದುಳಿನ ಕಾಂಡದಲ್ಲಿನ ನರ ಕೋಶಗಳ ಕೊರತೆಯೊಂದಾಗಿ ವ್ಯಕ್ತಿಗೆ ಸ್ನಾಯುಗಳ ಚಲನೆಯನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಇದು ಸ್ನಾಯು ದೌರ್ಬಲ್ಯಕ್ಕೆ ಕಾರಣವಾಗುತ್ತದೆ ಮತ್ತು ಕೈಕಾಲುಗಳ ಚಲನೆ ಮತ್ತು ಉಸಿರಾಟದ ಮೇಲೂ ಪರಿಣಾಮ ಬೀರುತ್ತದೆ. ಇದರ ಚಿಕಿತ್ಸೆಗಾಗಿ ಬಳಸುವ ಜೊಲ್ಗೆನ್ಸ್ಮಾ ಇಂಜೆಕ್ಷನ್‌ ಅನ್ನು ಸ್ವಿಸ್ ಫಾರ್ಮಾ ದೈತ್ಯ ನೊವಾರ್ಟಿಸ್ (Novartis) ತಯಾರಿಸುತ್ತದೆ.

ಇದನ್ನೂ ಓದಿ: kodagu News : ಒಮ್ಮಿಂದೊಮ್ಮೆಗೇ ಜೋರಾಯಿತು ನೋವು; ಆಂಬ್ಯುಲೆನ್ಸ್‌ನಲ್ಲೇ ಹೆರಿಗೆ ಮಾಡಿಸಿದ ಸ್ಟಾಫ್‌ ನರ್ಸ್‌

Exit mobile version