ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ. ಪ್ರತಿಪಕ್ಷಗಳು ಒಗ್ಗೂಡಿ ಇಂಡಿಯಾ ಎಂಬ ಒಕ್ಕೂಟ ರಚಿಸಿದ ಬೆನ್ನಲ್ಲೇ ಎನ್‌ಡಿಎ ಕೂಡ ಮೈತ್ರಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದೆ. ಇದರ ಮಧ್ಯೆಯೇ ಸಾರ್ವತ್ರಿಕ ಚುನಾವಣೆಯಲ್ಲಿ (Lok Sabha Election 2024) ಜನರ ಮತ ಸೆಳೆಯಲು ‘ಬೆಲೆ ಇಳಿಕೆ’ಯ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ಹರ್ ಘರ್ ಜಲ್ (Har Ghar Jal) ಯೋಜನೆ ಅಡಿಯಲ್ಲಿ ಕ್ಷಿಪ್ರವಾಗಿ ಮನೆಗಳಿಗೆ ನಲ್ಲಿ ನೀರು ಪೂರೈಕೆ, ಅಡುಗೆ ಅನಿಲ ಸಿಲಿಂಡರ್ ಬೆಲೆ ಇಳಿಕೆ ಸೇರಿ ಹಲವು ಯೋಜನೆಗಳ ಮೂಲಕ ಜನರ ವಿಶ್ವಾಸ ಗಳಿಸಲು ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸಿದೆ ಎಂದು ತಿಳಿದುಬಂದಿದೆ.
ಯಾವುದರ ಬೆಲೆ ಇಳಿಕೆ?
ಅಡುಗೆ ಅನಿಲ ಸಿಲಿಂಡರ್ ಬೆಲೆಯು ಕಳೆದ ಮೂರು ವರ್ಷಗಳಲ್ಲಿ ಡಬಲ್ ಆಗಿದೆ. ಸಿಲಿಂಡರ್ ಬೆಲೆ ಈಗ 1,100 ರೂ. ಆಗಿದ್ದು, ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೆಟ್ರೋಲ್ ಬೆಲೆಯೂ 100 ರೂ. ಇದೆ. ಹಾಗಾಗಿ, ಕೇಂದ್ರ ಸರ್ಕಾರವು ಮೊದಲು ಅಡುಗೆ ಅನಿಲ ಸಿಲಿಂಡರ್ ಬೆಲೆ ಇಳಿಸಲಿದೆ. ಇದಾದ ಬಳಿಕ ಪೆಟ್ರೋಲ್ ಬೆಲೆಯನ್ನೂ ಕಡಿತಗೊಳಿಸಲಿದೆ. ಅಷ್ಟೇ ಅಲ್ಲ, 2024ರ ಲೋಕಸಭೆ ಚುನಾವಣೆ ವೇಳೆ ಹರ್ ಘರ್ ಜಲ್ ಯೋಜನೆ ಅಡಿಯಲ್ಲಿ ನಲ್ಲಿ ಸಂಪರ್ಕ, ನೀರ ಪೂರೈಕೆಯಲ್ಲಿ ಶೇ.100ರಷ್ಟು ಸಾಧನೆ ಮಾಡುವುದು ಸರ್ಕಾರದ ಗುರಿಯಾಗಿದೆ ಎಂದು ತಿಳಿದುಬಂದಿದೆ.
ಕಿಸಾನ್ ಸಮ್ಮಾನ್ ನಿಧಿ ಹೆಚ್ಚಳ ಸಾಧ್ಯತೆ
ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ದೇಶದ ಕೋಟ್ಯಂತರ ರೈತರಿಗೆ ವಾರ್ಷಿಕವಾಗಿ ನೀಡುವ 6 ಸಾವಿರ ರೂ. ಸಹಾಯಧನದ ಮೊತ್ತವನ್ನು ಹೆಚ್ಚಿಸುವುದು ಕೂಡ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಮುಂದಿನ ಬಜೆಟ್‌ನಲ್ಲಿ ಕಿಸಾನ್ ಸಮ್ಮಾನ್ ನಿಧಿಯನ್ನು ಹೆಚ್ಚಿಸುವ ಮೂಲಕ ಕೋಟ್ಯಂತರ ರೈತರ ಬೆಂಬಲ ಗಳಿಸುವುದು ಸರ್ಕಾರದ ತಂತ್ರವಾಗಿದೆ. ಹಾಗೆಯೇ, ಬಜೆಟ್‌ನಲ್ಲಿ ಕೆಲ ಅಚ್ಚರಿಯ ಘೋಷಣೆಗಳನ್ನೂ ಕೇಂದ್ರ ಸರ್ಕಾರ ಮಾಡುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.
ಹಣದುಬ್ಬರ ತಡೆಗೆ ಯೋಜನೆ
ವಿತ್ತಿಯ ಕೊರತೆಯ ಗುರಿಗೆ ಧಕ್ಕೆಯಾಗದಂತೆ ಆಹಾರ ಮತ್ತು ಇಂಧನಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ವಿವಿಧ ಸಚಿವಾಲಯಗಳ ಬಜೆಟ್ಗಳಿಂದ 1 ಲಕ್ಷ ಕೋಟಿ ರೂಪಾಯಿಗಳನ್ನು (12 ಬಿಲಿಯನ್ ಡಾಲರ್) ಮರುಹಂಚಿಕೆ ಮಾಡಲು ಕೇಂದ್ರ ಸರಕಾರ ಮುಂದಾಗಿದೆ ಎಂಬುದಾಗಿ ವರದಿಯಾಗಿದೆ. ಮುಂಬರುವ ಲೋಕಸಭಾ ಚುನಾವಣೆ ವೇಳೆ ಬೆಲೆ ಏರಿಕೆಯೇ ವಿರೋಧ ಪಕ್ಷಗಳಿಗೆ ಪ್ರಧಾನ ಅಸ್ತ್ರವಾಗಬಹುದು ಎಂಬ ಅಂಶವನ್ನು ಆಧರಿಸಿ ಹಣದುಬ್ಬರ ತಡೆಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೊಸ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ.
ಇದನ್ನೂ ಓದಿ: Lok Sabha Election 2024 : ಸಿದ್ದರಾಮಯ್ಯ Right ಎಂದ ರಾಹುಲ್; 5 ಗ್ಯಾರಂಟಿಯಂತೆ ಲೋಕಸಭೆ ಸಮರಕ್ಕೆ ಕೈ ಪ್ಲ್ಯಾನ್!
ತೈಲಗಳ ಮಾರಾಟದ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವುದು ಮತ್ತು ಅಡುಗೆ ಎಣ್ಣೆ ಮತ್ತು ಗೋಧಿಯ ಮೇಲಿನ ಆಮದು ಸುಂಕವನ್ನು ಸರಾಗಗೊಳಿಸುವುದು ಸೇರಿದಂತೆ ಹಲವಾರು ಘೋಷಣೆಗಳನ್ನು ಪ್ರಧಾನಿ ನರೇಂದ್ರ ಮೋದಿ ಮುಂಬರುವ ವಾರಗಳಲ್ಲಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.