Site icon Vistara News

CWC Meeting: 4 ಕಾಂಗ್ರೆಸ್‌ ಸಿಎಂಗಳಲ್ಲಿ ಮೂವರು OBC, 10 ಬಿಜೆಪಿ ಸಿಎಂಗಳಲ್ಲಿ ಒಬ್ಬರೇ OBC!

CWC Meeting Rahul gandhi

ನವ ದೆಹಲಿ: ಸೋಮವಾರ ದಿಲ್ಲಿಯಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ (CWC Meeting)ಯಲ್ಲಿ ಪಕ್ಷ ಮುಂಚೂಣಿ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ದೇಶದಲ್ಲಿ ಜಾತಿ ಗಣತಿಯ ಅವಶ್ಯಕತೆಯನ್ನು ಬಲವಾಗಿ ಪ್ರತಿಪಾದಿಸಿದರು. ಜಾತಿ ಗಣತಿಯು ದೇಶದಲ್ಲಿ ಬಡವರ ಸಬಲೀಕರಣದ ಕಡೆಗೆ ಇಡಬಹುದಾದ ಅತ್ಯಂತ ಶಕ್ತಿಶಾಲಿ ಪ್ರಗತಿಪರ ಹೆಜ್ಜೆ ಎಂದು ರಾಹುಲ್‌ ಗಾಂಧಿ ಅವರು ಸಭೆಯಲ್ಲಿ ಮತ್ತು ಬಳಿಕ ನಡೆದ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹಿಂದುಳಿದ ಸಮುದಾಯಗಳ ಪರವಾಗಿ ಕೆಲಸ ಮಾಡುವುದಿಲ್ಲ. ಬದಲಾಗಿ ಅವರ ಪ್ರಧಾನ ವಿಷಯಗಳು ಚರ್ಚೆಗೆ ಬಾರದಂತೆ ದಿಕ್ಕು ತಪ್ಪಿಸುತ್ತಾರೆ ಎಂದು ರಾಹುಲ್‌ ಗಾಂಧಿ ಆಕ್ಷೇಪಿಸಿದರು.

ಇದೇ ವೇಳೆ ಒಬಿಸಿ ನಾಯಕತ್ವಕ್ಕೆ ಸಂಬಂಧಿಸಿ ಕೆಲವೊಂದು ಅಂಕಿ ಅಂಶಗಳನ್ನು ಮುಂದಿಟ್ಟು ಯಾಕೆ ಜಾತಿ ಗಣತಿ ಬೇಕು ಎನ್ನುವುದನ್ನು ವಿವರಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಯಾವತ್ತೂ ಜನಗಣತಿಗೆ ಮನಸು ಮಾಡುವುದಿಲ್ಲ. ಅದನ್ನು ನಾವೇ ಮಾಡಬೇಕು ಎಂದರು.

ದೇಶದಲ್ಲಿ ಕಾಂಗ್ರೆಸ್‌ಗೆ ಸೇರಿದ ನಾಲ್ವರು ಸಿಎಂಗಳಿದ್ದಾರೆ. ಅವರಲ್ಲಿ ಮೂವರು ಇತರ ಹಿಂದುಳಿದ ವರ್ಗಗಳಿಗೆ ಸೇರಿದವರು. ದೇಶದಲ್ಲಿ 10 ಮಂದಿ ಬಿಜೆಪಿ ಮುಖ್ಯಮಂತ್ರಿಗಳಿದ್ದಾರೆ. ಅವರಲ್ಲಿ ಒಬ್ಬರು ಮಾತ್ರ ಹಿಂದುಗಳಿದ ವರ್ಗಗಳಿಗೆ ಸೇರಿದವರು ಎಂದು ಹೇಳಿದರು.

ಇದನ್ನೂ ಓದಿ: Caste Census: ಜಾತಿ ಗಣತಿಯಿಂದ ಜಾತಿ ದ್ವೇಷ ಸೃಷ್ಟಿಸಲು ಹೊರಟಿದ್ದಾರೆ ಎಂದ ಎಚ್‌ಡಿಕೆ

ಪತ್ರಕರ್ತರು ಯಾವ ವರ್ಗ ಎಂದು ಕೇಳಿದ ರಾಹುಲ್‌

ಇದೇ ವೇಳೆ, ರಾಹುಲ್‌ ಗಾಂಧಿ ಅವರು ಮಾಧ್ಯಮ ಗೋಷ್ಠಿಗೆ ಬಂದಿದ್ದ ಪತ್ರಕರ್ತರು ಜಾತಿ ವ್ಯವಸ್ಥೆಯ ಯಾವ ವರ್ಗಕ್ಕೆ ಸೇರಿದವರು ಎನ್ನುವ ಪ್ರಶ್ನೆಯನ್ನು ಕೇಳಿದರು.

ನಿಮ್ಮಲ್ಲಿ ಎಷ್ಟು ಮಂದಿ ದಲಿತರಿದ್ದೀರಿ? ಎಂದು ರಾಹುಲ್‌ ಗಾಂಧಿ ಕೇಳಿದರು. ಯಾವ ಪತ್ರಕರ್ತರೂ ಕೈ ಎತ್ತಲಿಲ್ಲ.

ನಿಮ್ಮಲ್ಲಿ ಎಷ್ಟು ಮಂದಿ ಆದಿವಾಸಿಗಳಿದ್ದೀರಿ ಎಂದು ರಾಹುಲ್‌ ಕೇಳಿದರು. ಯಾವ ಪತ್ರಕರ್ತರೂ ಕೈ ಎತ್ತಲಿಲ್ಲ.

ನಿಮ್ಮಲ್ಲಿ ಎಷ್ಟು ಮಂದಿ ಇತರ ಹಿಂದುಳಿದ ವರ್ಗಕ್ಕೆ (OBC) ಸೇರಿದ್ದೀರಿ ಎಂದು ಕೇಳಿದಾಗಲೂ ಯಾರೂ ಕೈ ಎತ್ತಲಿಲ್ಲ.

ಆಗ ರಾಹುಲ್‌ ಗಾಂಧಿ ಅವರು, ಇದೇ ಕಾರಣಕ್ಕಾಗಿ ಜಾತಿ ಗಣತಿ ಆಗಬೇಕು ಎಂದು ನಾವು ಹೇಳುತ್ತಿದ್ದೇವೆ, ಅವರು ಯಾರೂ ಪ್ರಶ್ನೆ ಕೇಳಲು ಅರ್ಹರಲ್ಲವೇ? ಈ ಸತ್ಯವನ್ನು ತಿಳಿಯಲು ಗಣತಿ ಬೇಕಾಗುತ್ತದೆ ಎಂದರು.

Exit mobile version